ಹಂಪಿ ಉತ್ಸವದಲ್ಲಿ ಚಾಲೇಂಜಿಂಗ್ ಸ್ಟಾರ್‌ ದರ್ಶನ್ ಮೇನಿಯಾ

| Published : Feb 04 2024, 01:33 AM IST

ಹಂಪಿ ಉತ್ಸವದಲ್ಲಿ ಚಾಲೇಂಜಿಂಗ್ ಸ್ಟಾರ್‌ ದರ್ಶನ್ ಮೇನಿಯಾ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಜನತೆ ನಮ್ಮಂತಹ ಚಿಕ್ಕ, ಪುಟ್ಟ ನಟರನ್ನು ಬೆಳೆಸಬೇಕು. ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಬೇಕು. ಕಲಾವಿದರನ್ನು ಬೆಳೆಸುವ ಕಾರ್ಯ ನಾಡಿನ ಜನತೆ ಮಾಡಲಿ ಎಂದು ದರ್ಶನ ತಿಳಿಸಿದರು.

ಹಂಪಿ: ಹಂಪಿ ಉತ್ಸವದ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ ಪಾಲ್ಗೊಂಡು ಮೆರುಗು ನೀಡಿದರು.

ಈ ವೇಳೆ ಮಾತನಾಡಿದ ಅವರು, ಎಲ್ಲರಿಗೂ ಹಂಪಿ ಉತ್ಸವದ ಶುಭಾಶಯಗಳು. ೨೦೧೮ರಲ್ಲಿ ಹಂಪಿ ಉತ್ಸವಕ್ಕೆ ಬಂದಿದ್ದೆ. ಆರು ವರ್ಷಗಳ ಬಳಿಕ ಬಂದಿರುವೆ. ವಿಜಯನಗರ ಸಾಮ್ರಾಜ್ಯಕ್ಕೆ ಭವ್ಯ ಇತಿಹಾಸ ಇದೆ. ಶ್ರೀಕೃಷ್ಣದೇವರಾಯರು ಈ ನಾಡು ಕಂಡ ಅಪ್ರತಿಮ ದೊರೆಯಾಗಿದ್ದಾರೆ. ಈ ನಾಡಿಗಾಗಿ ದುಡಿದವರು, ರಾಜ್ಯ ಕಟ್ಟಿದವರನ್ನು ನಾವು ಸ್ಮರಿಸಲೇಬೇಕು ಎಂದರು.

ರಾಜ್ಯದ ಜನತೆ ನಮ್ಮಂತಹ ಚಿಕ್ಕ, ಪುಟ್ಟ ನಟರನ್ನು ಬೆಳೆಸಬೇಕು. ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಬೇಕು. ಕಲಾವಿದರನ್ನು ಬೆಳೆಸುವ ಕಾರ್ಯ ನಾಡಿನ ಜನತೆ ಮಾಡಲಿ ಎಂದರು.

ನಾನು ಪಕ್ಕಾ ಲೆಕ್ಕಾಚಾರದ ಜನ. ಏಕ್ ಮಾರ್ ದೋ ತುಕ್ಡಾ, ಜಮೀರ್‌ ಭಾಯ್‌ ಕರೆದಿದ್ದಾರೆ ಎಂದು ನಾನು ಹಂಪಿ ಉತ್ಸವಕ್ಕೆ ಬಂದಿರುವೆ. ಅವರು ನಿನ್ನೆ ಕರೆದಿದ್ರೂ ಇವತ್ತು ಹೊರಟು ಬಂದು ಬಿಡುತ್ತಿದ್ದೆ. ಅವರ ಶ್ರೀರಕ್ಷೆ ನಮ್ಮ ಮೇಲಿದೆ. ಅವರು ಯಾವತ್ತೂ ಬಡವರಿಗೆ ಸಹಾಯ ಮಾಡುತ್ತಾರೆ. ಎಲ್ಲೂ ಹೇಳಿಕೊಳ್ಳುವುದಿಲ್ಲ. ಎಷ್ಟೋ ಬಡ ವಿದ್ಯಾರ್ಥಿಗಳಿಗೆ ವಿದೇಶಕ್ಕೆ ವಿದ್ಯಾಭ್ಯಾಸಕ್ಕೆ ಕಳುಹಿಸಿಕೊಟ್ಟಿದ್ದಾರೆ. ಆಪರೇಷನ್‌ಗಳಿಗೆ ಸಹಾಯ ಮಾಡುತ್ತಾರೆ. ನಾನು ಇಂತಹವರಿಗೆ ಸಹಾಯ ಮಾಡಿ ಎಂದರೆ ಸಾಕು, ಅವರು ಸಹಾಯ ಮಾಡುತ್ತಾರೆ. ಅವರ ಪುತ್ರ ಜಾಹೀದ್ ಖಾನ್‌ ಕೂಡ ಸಹಾಯಹಸ್ತ ಚಾಚುತ್ತಾರೆ ಎಂದರು.

ನಾನು ಬಹಳ ಜನರ ಪರ ಪ್ರಚಾರ ಮಾಡಿರುವೆ. ಅವರು ಗೆದ್ರೂ, ಸೋತ್ರೂ ನಮ್ಮತ್ತ ತಿರುಗಿಯೂ ನೋಡಲ್ಲ. ನಾನು ರಾಜಕೀಯಕ್ಕೆ ಬಳಸಲ್ಲ. ಜಮೀರ್‌ ಭಾಯ್‌ ಕೂಡ ರಾಜಕೀಯಕ್ಕೆ ಬಳಸಲ್ಲ. ಅವರು ಯಾವತ್ತಿದ್ರೂ ಜನರ ನೆರವಿಗೆ ನಮ್ಮನ್ನು ಪ್ರೇರೆಪಿಸುತ್ತಾರೆ. ಎಂದಿಗೂ ಅವರ ಕ್ಷೇತ್ರದಲ್ಲಿ ಪ್ರಚಾರಕ್ಕೆ ಕರೆಯುವುದಿಲ್ಲ. ಸ್ನೇಹವನ್ನೂ ಎಂದಿಗೂ ರಾಜಕೀಯಕ್ಕೆ ಬಳಸಿಕೊಂಡಿಲ್ಲ. ವಿಜಯನಗರ ಜಿಲ್ಲೆಯ ಜನತೆಗೆ ಒಳಿತಾಗಲಿ. ಸಿನಿಮಾ ನೋಡಿ, ನಮ್ಮನ್ನು ಬೆಳೆಸಿರಿ ಎಂದರು.

ಈ ವೇಳೆ ಡೈಲಾಗ್‌ ಡೆಲೆವರಿ ಮಾಡಿದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಆಂಜನೇಯ ಮನೆ ದೇವರು, ಎತ್ತಿದರೆ ಗದೆ, ಇಳಿಸಿದರೆ ಒದೆ... ಎಂದು ಡೈಲಾಗ್‌ ಹೊಡೆದರು. ಮಚ್ಚು ಎರಡು ಸಾರಿ ಕೆಂಪಗಾಗುತ್ತದೆ, ಒಂದು ಬೆಂಕಿಯಲ್ಲಿ ಬೆಂದಾಗ, ಇನ್ನೊಂದು ಬೇಡ, ನಾವು ಪ್ರೀತಿಯಿಂದ ಇರೋಣ ಎಂದು ಕಿಕ್ಕಿರಿದು ತುಂಬಿದ್ದ ಜನಸ್ತೋಮಕ್ಕೆ ಕೈಮುಗಿದರು.

ಡಿ ಬಾಸ್‌, ಡಿ ಬಾಸ್‌ ಜೈ ಜೈಕಾರ: ಹಂಪಿ ಉತ್ಸವದ ಎರಡನೇ ದಿನ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದ ದರ್ಶನ್‌ರನ್ನು ಕಾಣುತ್ತಲೇ ಜನರು ಡಿ ಬಾಸ್‌, ಡಿಬಾಸ್‌ ಎಂದು ಜೈ ಜೈಕಾರ ಮೊಳಗಿಸಿದರು. ಮೊಬೈಲ್‌ಗಳ ಟಾರ್ಚ್‌ಗಳನ್ನು ಆನ್ ಮಾಡಿ ಅಭಿಮಾನ ತೋರ್ಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಚಾಲನೆ ನೀಡಿ, ಹಂಪಿ ಉತ್ಸವದಲ್ಲಿ ನಟ ದರ್ಶನ್‌ ಬಂದಿರುವುದು ನಮಗೆ ಹೆಮ್ಮೆ ತಂದಿದೆ. ದರ್ಶನ್‌ ಅಂತಹ ನಟ ಉತ್ಸವಕ್ಕೆ ಬಂದಿದ್ದಾರೆ. ನಮ್ಮ ನಡುವೆ ಉತ್ತಮ ಸ್ನೇಹ ಇದೆ. ಅವರಿಗೆ ಆಹ್ವಾನ ನೀಡಿದ ತಕ್ಷಣ ಅವರು ಉತ್ಸವಕ್ಕೆ ಬರಲು ಒಪ್ಪಿದರು. ಅವರಿಗೆ ನಾನು ಹೆಲಿಕಾಪ್ಟರ್‌ ಮಾಡಿ ಕೊಡುವೆ ಎಂದೆ. ಅವರು ಸ್ವಂತ ಖರ್ಚಿನಲ್ಲಿ ಇಲ್ಲಿಗೆ ಬಂದಿದ್ದಾರೆ. ನಾಳಿನ ಕಾರ್ಯಕ್ರಮದಲ್ಲೂ ನಮ್ಮ ಜತೆಗೆ ಇರುತ್ತಾರೆ ಎಂದರು.

ಶಾಸಕ ಎಚ್.ಆರ್. ಗವಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಂ.ಪಿ. ಲತಾ, ಜೆ.ಎನ್‌. ಗಣೇಶ್‌, ರಾಘವೇಂದ್ರ ಹಿಟ್ನಾಳ್, ಕೃಷ್ಣ ನಾಯ್ಕ, ಮಾಜಿ ಶಾಸಕ ಭೀಮಾನಾಯ್ಕ, ಹಂಪಿ ಗ್ರಾಪಂ ಅಧ್ಯಕ್ಷೆ ರಜನಿ ಷಣ್ಮುಖಗೌಡ ಮತ್ತಿತರರಿದ್ದರು.