ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಕೃತಕ ಬುದ್ಧಿಮತ್ತೆ ಸೃಜನಶೀಲತೆಯನ್ನು ಕಸಿದುಕೊಂಡಿದೆ. ಬುದ್ಧಿಗೆ ಸೂಚನೆ ಕೊಡುವ ಅಧಿಕಾರವನ್ನು ಕಳೆದುಕೊಂಡಿದ್ದೇವೆ. ವರ್ಷಗಳು ಕೆಲಸ ಮಾಡಿ ತಯಾರಾಗುತ್ತಿದ್ದ ಸಂಶೋಧನ ಪ್ರಸ್ತಾವನೆಗಳು, ಪ್ರಸ್ತುತ, ವಿಷಯದ ಸಂಶೋಧನೆಯೇ ಇಲ್ಲದೆ ಒಂದು ರಾತ್ರಿಯಲ್ಲಿ ತಯಾರಾಗುತ್ತಿವೆ. ಇದರಿಂದ ನಕಲು ಪ್ರಸ್ತಾವನೆಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ದಾವಣಗೆರೆ ವಿವಿಯ ಕುಲಪತಿ ಪ್ರೊ.ಬಿ.ಡಿ. ಕುಂಬಾರ್ ಕಳವಳ ವ್ಯಕ್ತಪಡಿಸಿದರು.ತುಮಕೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ಮತ್ತು ಸಂಶೋಧನ ವಿಭಾಗವು ಶನಿವಾರ ಆಯೋಜಿಸಿದ್ದ ‘ಮಾದರಿ ಸಂಶೋಧನ ಪ್ರಸ್ತಾವನೆಯನ್ನು ಸಿದ್ಧಪಡಿಸುವುದು: ವಿಧಾನಗಳು ಮತ್ತು ತಂತ್ರಗಳು’ಕುರಿತ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ವಿಶ್ವವಿದ್ಯಾನಿಲಯಗಳ ಅಭಿವೃದ್ಧಿಗಾಗಿ ಯಾವುದೇ ಅನುದಾನ ನೀಡುತ್ತಿಲ್ಲ. ಇರುವ ಅನುದಾನದಲ್ಲೇ ಎಲ್ಲ ವಿಭಾಗಗಳ ಅಭಿವೃದ್ಧಿಗಾಗಿ ಕುಲಪತಿಗಳು ಶ್ರಮಿಸುತ್ತಿದ್ದೇವೆ. ಸಂಶೋಧನೆ, ಅಭಿವೃದ್ಧಿಗಾಗಿ ಸರ್ಕಾರದ ಸಹಾಯ ವಿವಿಗಳಿಗೆ ಅವಶ್ಯಕವಾಗಿ ಬೇಕಾಗಿದೆ. ವಿವಿಧ ವಿಭಾಗಗಳು ಸಲ್ಲಿಸುವ ಸಂಶೋಧನ ಪ್ರಸ್ತಾವನೆಗಳನ್ನು ಧನ ಸಹಾಯ ಆಯೋಗಗಳು ಒಪ್ಪಿದರೆ, ಅದರಿಂದ ಬಂದ ಹಣದಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಸಂಶೋಧನೆಗಳನ್ನು ನಿರ್ಲಕ್ಷಿಸುವುದು ಶಿಕ್ಷಣಕ್ಕೆ ಪೆಟ್ಟುಬಿದ್ದಂತೆ ಎಂದು ಬೇಸರ ವ್ಯಕ್ತಪಡಿಸಿದರು.ಕೇವಲ ಒಂದು ದಿನದಲ್ಲಿ ತಯಾರಾದ ಸಂಶೋಧನ ಪ್ರಸ್ತಾವನೆಗಳಿಗೆ ಭವಿಷ್ಯವಿರುವುದಿಲ್ಲ. ಪ್ರಶ್ನೆಗಳಾಧಾರಿತ ತಯಾರಾದ ಪ್ರಸ್ತಾವನೆಗಳಿಂದ ದೀರ್ಘಕಾಲದ ಉಪಯೋಗವಿದೆ. ಜ್ಞಾನಕ್ಕಾಗಿ ಸಂಶೋಧನೆ ನಡೆಸುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದರು.
ಸಂಶೋಧನೆಯ ಪ್ರಸ್ತಾವನೆ ಸ್ಪಷ್ಟವಿರಬೇಕು, ನಕಲು ಮಾಡಬಾರದು, ಸಾಹಿತ್ಯ ವಿಮರ್ಶೆಯಲ್ಲಿ ಹೊಸ ವಿಷಯಗಳನ್ನು ಸೇರಿಸಬೇಕು, ಸಕಾರಾತ್ಮಕ ಕಲ್ಪನೆ ಮತ್ತು ಉದ್ದೇಶಗಳನ್ನು ಬರೆಯಬೇಕು, ಸಂಶೋಧನವಿಧಾನ ವಿಭಿನ್ನವಾಗಿರಬೇಕು, ಸಂಶೋಧನೆಯ ಮಹತ್ವ ಕುರಿತು ಕಾಳಜಿ ವಹಿಸಬೇಕು, ನೈತಿಕ ಪರಿಗಣನೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತಾವನೆ ಬರೆಯಬೇಕು, ಪರಿಷ್ಕರಣೆ ಮತ್ತು ಪ್ರತಿಕ್ರಿಯೆ ಸಂಶೋಧನೆಯಲ್ಲಿ ಬಹಳ ಮುಖ್ಯ ಎಂದು ತಿಳಿಸಿದರು.ತುಮಕೂರು ವಿವಿ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಮಾತನಾಡಿ, ನವ ಆಲೋಚನೆಗಳನ್ನು ರೂಪಿಸುವುದು ಮತ್ತು ಸಂಶೋಧನೆಯ ಮೇಲೆ ಕೇಂದ್ರೀಕರಿಸುವುದು ಬಹಳ ಮುಖ್ಯ. ಬೋಧನೆ, ಸಂಶೋಧನೆ ಮತ್ತು ವಿಸ್ತರಣೆಯು ವಿಶ್ವವಿದ್ಯಾಲಯಗಳ ನಿರ್ಣಾಯಕ ಅಂಶವಾಗಿದೆ. ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನ ಸಂಸ್ಕೃತಿಯ ಕೊರತೆಯನ್ನು ನಾವು ಕಾಣಬಹುದು. ಪದವಿಯ ಹಂತದಲ್ಲಿ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದರೆ, ಸ್ನಾತಕೋತ್ತರ ಪದವಿಯ ಸಮಯದಲ್ಲಿ ಸಂಶೋಧನ ಶಿಕ್ಷಣಕ್ಕೆ ಒತ್ತು ನೀಡಬೇಕು. ಇದರಿಂದ ಪ್ರಶ್ನೆಗಳನ್ನು ವಿಷಯಗಳಾಗಿ ಪರಿವರ್ತಿಸುವ ಮನೋಭಾವ ಬೆಳೆಯುತ್ತದೆ ಎಂದರು.
QUOTEಭವಿಷ್ಯದ ಉಪಯೋಗಗಳನ್ನು ಗಮನದಲ್ಲಿರಿಸಿಕೊಂಡು ಸಂಶೋಧನ ಪ್ರಸ್ತಾಪಗಳನ್ನು ಸಲ್ಲಿಸಬೇಕು. ಸಂಶೋಧನೆ ನಡೆಸುವಾಗಷ್ಟೇ ಅದರ ಸಾಧಕ ಬಾಧಕಗಳ ಬಗ್ಗೆ ನಮಗೆ ಅರಿವಾಗುವುದು. ಸಂಪನ್ಮೂಲಗಳು, ಮಾಹಿತಿ ಲಭ್ಯವಿದ್ದರೆ ಮಾತ್ರಸೂಕ್ತ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಸಂಶೋಧನೆಯ ಸಮಯದಲ್ಲಿ ವೈಜ್ಞಾನಿಕವಾಗಿ ಮತ್ತು ವ್ಯವಸ್ಥಿತವಾಗಿ ವಿಷಯದ ಕುರಿತು ಅಧ್ಯಯನ ನಡೆಸಬೇಕು.ಪ್ರೊ.ಬಿ.ಡಿ. ಕುಂಬಾರ್ ದಾವಣಗೆರೆ ವಿವಿಯ ಕುಲಪತಿ