ನಿರಂತರ ಅಭ್ಯಾಸದ ಮೂಲಕ ಉನ್ನತ ಸ್ಥಾನ: ಶಾಸಕ ಡಾ. ಮಂತರ್‌ಗೌಡ

| Published : Feb 04 2024, 01:33 AM IST

ಸಾರಾಂಶ

ಸೋಮವಾರಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವ ನಡೆಯಿತು. ಶಾಸಕ ಡಾ. ಮಂತರ್‌ಗೌಡ ಉದ್ಘಾಟಿಸಿ ಶುಭಹಾರೈಸಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ನಿರಂತರ ಅಭ್ಯಾಸದ ಮೂಲಕ ಜ್ಞಾನ ಸಂಪಾದಿಸಿಕೊಂಡಲ್ಲಿ ಮಾತ್ರ ಉನ್ನತ ಸ್ಥಾನವನ್ನು ಪಡೆದುಕೊಳ್ಳಬಹುದು ಎಂದು ಶಾಸಕ ಡಾ. ಮಂತರ್‌ಗೌಡ ಹೇಳಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಹಂತದಲ್ಲಿ ವಿವಿಧ ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸಿ, ಸಂವಹನ ಕಲೆಯನ್ನು ರೂಢಿಸಿಕೊಂಡರೆ ಪದವಿ ಹಾಗೂ ಸ್ನಾತಕೋತ್ತರ ವ್ಯಾಸಂಗ ಮಾಡುವ ಸಂದರ್ಭ ಹೆಚ್ಚಿನ ಅಂಕಗಳಿಸಲು ಸಾಧ್ಯವಾಗುವುದರೊಂದಿಗೆ, ನೌಕರಿ ಗಿಟ್ಟಿಸಲು ಸಹಾಯವಾಗುತ್ತದೆ ಎಂದು ಹೇಳಿದರು.

ನಿರಂತರ ಕಲಿಕೆಯಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಪ್ರತಿಯೊಬ್ಬರಲ್ಲೂ ನಾನಾ ತರಹದ ಪ್ರತಿಭೆಯಿರುತ್ತದೆ. ತಮ್ಮ ಪ್ರತಿಭೆಯನ್ನು ತೋರಿಸಲು ವಿವಿಧ ವಿಭಾಗಗಳಲ್ಲಿ ನಡೆಯುವ ಸ್ಪರ್ಧಾ ಕಾರ್ಯಕ್ರಮಗಳನ್ನು ಉಪಯೋಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮಲ್ಲೇ ಕೀಳರಿಮೆ ಬೆಳೆಸಿಕೊಂಡರೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಲು ಕಷ್ಟವಾಗುತ್ತದೆ ಎಂದು ಕಿವಿಮಾತು ಹೇಳಿದರು.

ಕಲಿಕೆಯ ದಿನಗಳಲ್ಲಿ ಧೂಮಪಾನ, ಡ್ರಗ್ಸ್ ಸೇವನೆಯಂತಹ ದುಶ್ಚಟಗಳಿಗೆ ವಿದ್ಯಾರ್ಥಿಗಳು ಬಲಿಯಾಗಬಾರದು. ಪೋಷಕರು ನಿಮ್ಮ ಮೇಲೆ ಕನಸು ಕಟ್ಟಿಕೊಂಡಿರುತ್ತಾರೆ. ಅವರ ಕನಸ್ಸು ನನಸ್ಸು ಮಾಡುವ ಕರ್ತವ್ಯ ವಿದ್ಯಾರ್ಥಿಗಳದ್ದು ಎಂದು ಹೇಳಿದರು. ಪೋಷಕರು ಮತ್ತು ಶಿಕ್ಷಕರು ಸಮಾನವಾಗಿ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಬುದ್ದಿಹೇಳುವುದರಿಂದ ಎಷ್ಟೋ ಮಕ್ಕಳನ್ನು ಸರಿ ದಾರಿಗೆ ತರಬಹುದು. ಪ್ರತಿದಿನ ಪಾಠ ಕೇಳಿ ಮನನ ಮಾಡಿಕೊಳ್ಳುವುದರಿಂದ ಜ್ಞಾಪನಶಕ್ತಿ ಹೆಚ್ಚುತ್ತದೆ. ಪರೀಕ್ಷೆ ಅತ್ಯಂತ ಸುಲಭವಾಗುತ್ತದೆ ಎಂದು ಹೇಳಿದರು.

ಕಾಲೇಜು ಅಭಿವೃದ್ಧಿ ಸಮಿತಿ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಸ್ಥಾಪನೆ ಮಾಡಿರುವ ‘ಆಸರೆ’ ಹೆಸರಿನ ದತ್ತಿ ನಿಧಿಗೆ ಶಾಸಕ ಡಾ. ಮಂತರ್‌ಗೌಡ ವಾರ್ಷಿಕ 20 ಸಾವಿರ ರು. ಗಳನ್ನು ನೀಡುವ ಮೂಲಕ ಚಾಲನೆ ನೀಡಿದರು. ಈಗಾಗಲೇ ದಾನಿಗಳು 1.50 ಲಕ್ಷ ರು. ನಷ್ಟು ನೀಡಿದ್ದಾರೆ ಎಂದು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ವಿ.ಎ.ಲಾರೆನ್ಸ್ ಹೇಳಿದರು. ಮುಂದಿನ ಸಾಲಿನಿಂದ ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ತೆರೆಯಲು ಚರ್ಚೆ ನಡೆಯುತಿದ್ದು, ಶಾಸಕರು ಹೆಚ್ಚಿನ ಆಸಕ್ತಿ ತೋರಿದ್ದಾರೆ ಎಂದು ಹೇಳಿದರು.

ಪದವಿ ಪೂರ್ವ ಕಾಲೇಜು ಹಾಗೂ ಮಾದರಿ ಪ್ರಾಥಮಿಕ ಶಾಲೆಗೆ ಸುಮಾರು 13 ಎಕರೆ ಜಾಗವನ್ನು ದಾನ ಮಾಡಿದ ಚೌಡ್ಲು ಗ್ರಾಮದ ದಿ.ಸಿ.ಕೆ. ಕಾಳಪ್ಪ ಅವರ ಮೊಮ್ಮಗ ಸುಮೇಧಾ ರಾಘವ್ ಅವರನ್ನು ಸನ್ಮಾನಿಸಿಲಾಯಿತು. ಕಬಡ್ಡಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದ ಮಹಮ್ಮದ್ ಫೈಜ್, ಎಸ್.ಎಂ.ದರ್ಶನ್, ಅಬ್ದುಲ್ ರಾಜಿಕ್ ಅವರನ್ನು ಗೌರವಿಸಲಾಯಿತು.

ಶೈಕ್ಷಣಿಕ ಸಾಲಿನಲ್ಲಿ ಅಧಿಕ ಅಂಕಗಳನ್ನು ಗಳಿಸಿದ ಎಂ.ಬಿಂದು, ಖತೀಜತ್ ಸಿರಿನ್‌ಶಾನ, ಸಿ.ವಿ.ರಶ್ಮಿ, ಧನುಷ್, ಕೆ.ಎಚ್.ಕಿರ್ತನ್ ಅವರಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ವಿವಿಧ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಾದ ಅಮಿಷಿತ್, ಸ್ನೇಹ, ಶಿಫಾ, ಕಿಶೋರ್ ಕುಮಾರ್, ನವನೀತ್, ಟಿಸ್ಮಾ, ಮೊನಿಕಾ, ವಿದ್ಯಾ, ಮದನ್ ಅವರುಗಳಿಗೂ ಬಹುಮಾನ ನೀಡಲಾಯಿತು.

ವೇದಿಕೆಯಲ್ಲಿ ಬಿಇಒ ಎಸ್. ಭಾಗ್ಯಮ್ಮ, ಕಾಲೇಜು ಪ್ರಾಂಶುಪಾಲ ಬಿ.ಎಂ. ಬೆಳಿಯಪ್ಪ, ಪ್ರೌಢಶಾಲಾ ಪ್ರಭಾರ ಉಪ ಪ್ರಾಂಶುಪಾಲರಾದ ಹೇಮಲತಾ, ಪಟ್ಟಣ ಪಂಚಾಯಿತಿ ಸದಸ್ಯೆ ಶೀಲಾ ಡಿಸೋಜ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ಟಿ.ಸೋಮಸೇಖರ್, ನಿವೃತ್ತ ಶಿಕ್ಷಕರಾದ ಎಚ್.ಎಂ.ರಮೇಶ್, ಜೆ.ಸಿ.ಶೇಖರ್, ವಕೀಲರಾದ ಎಚ್.ಸಿ.ನಾಗೇಶ್, ಬಿ.ಇ. ಜಯೇಂದ್ರ, ಎಚ್.ಆರ್.ಸುರೇಶ್ ಇದ್ದರು.