ಸಾರಾಂಶ
ಬಳ್ಳಾರಿ: ನಗರ ಹೊರವಲಯದ ಬಂಡಿಮೋಟ್ ಪ್ರದೇಶದ ರಾಜ್ಯ ಉಗ್ರಾಣ ನಿಗಮ ಘಟಕ-2ಕ್ಕೆ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ, ಅಧಿಕಾರಿಗಳ ತಂಡ ಅನಿರೀಕ್ಷಿತ ಭೇಟಿ ನೀಡಿತು.ಇದೇ ವೇಳೆ ಉಗ್ರಾಣದಲ್ಲಿ ಕೊಳೆಯುತ್ತಿರುವ ಪಡಿತರ ಹಾಗೂ ಉಗ್ರಾಣದಲ್ಲಿನ ಅವ್ಯವಸ್ಥೆಯನ್ನು ಕಂಡು ತೀವ್ರ ಅಸಮಾಧಾನಗೊಂಡ ಉಪ ಲೋಕಾಯುಕ್ತರು, ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳ ಬೇಜವಾಬ್ದಾರಿತನದಿಂದ ಬಡಜನರು ಸೇವಿಸುವ ಆಹಾರವು ನಷ್ಟಗೊಳ್ಳುತ್ತಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರು. ನಷ್ಟವಾಗಿದೆ. ಇಲ್ಲಿ ದಾಸ್ತಾನಾಗಿರುವ ಜೋಳ ಪ್ರಾಣಿಗಳು ತಿನ್ನಲು ಸಹ ಯೋಗ್ಯವಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಇದು ಸಾಕ್ಷಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಉಗ್ರಾಣದಲ್ಲಿ ಸುಮಾರು 48 ಸಾವಿರ ಜೋಳದ ಚೀಲಗಳು (24 ಸಾವಿರ ಕ್ವಿಂಟಲ್) ಹುಳ ತುಂಬಿಕೊಂಡು ಪುಡಿಗಟ್ಟಿರುವುದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ ಉಪಲೋಕಾಯುಕ್ತರು, ಈ ಸಂಬಂಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವುದಾಗಿ ತಿಳಿಸಿದರು.ಸರ್ಕಾರದಿಂದ ಬೆಂಬಲ ಬೆಲೆ ಯೋಜನೆಯಡಿ 2023-24ನೇ ಸಾಲಿನಲ್ಲಿ ಜಿಲ್ಲೆಯ ರೈತರಿಂದ 4,90,164 ಕ್ವಿಂಟಲ್ ಜೋಳ ಖರೀದಿಸಿತ್ತು. ಇದನ್ನು ಬಳ್ಳಾರಿ, ಹಾವೇರಿ ಹಾಗೂ ಬಳ್ಲಾರಿ ಜಿಲ್ಲೆಗಳ ಪಡಿತರದಾರರಿಗೆ ಅಕ್ಕಿಯೊಂದಿಗೆ ಹಂಚಿಕೆ ಮಾಡುವ ಉದ್ದೇಶದಿಂದ ಸರ್ಕಾರದ ಉಗ್ರಾಣದಲ್ಲಿಡಲಾಗಿತ್ತು. ಆದರೆ, ಉಗ್ರಾಣದಲ್ಲಿ ಸೂಕ್ತ ನಿರ್ವಹಣೆಯಿಲ್ಲದೆ ಜೋಳದ ಚೀಲಗಳಲ್ಲಿ ಹುಳುಗಳು ತುಂಬಿಕೊಂಡಿರುವುದನ್ನು ಗಮನಿಸಿದ ಉಪ ಲೋಕಾಯುಕ್ತರು, ಸ್ಥಳದಲ್ಲಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕ ಕೆ.ಎಂ.ರಾಜಶೇಖರ್, ಸಹಾಯಕ ನಿಬಂಧಕ ಶುಭವೀರ್ ಜೈನ್.ಬಿ., ಉಪ ನಿಬಂಧಕ ಅರವಿಂದ ಎನ್.ವಿ., ಲೋಕಾಯುಕ್ತ ಬಳ್ಳಾರಿ ವಿಭಾಗದ ಪೊಲೀಸ್ ಅಧೀಕ್ಷಕ ಸಿದ್ಧರಾಜು ಸಿ, ರಾಜ್ಯ ಉಗ್ರಾಣ ನಿಗಮ ಮಂಡಳಿ ಘಟಕ-2 ಕೇಂದ್ರದ ಅಧಿಕಾರಿ ಶರಾವತಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಸಕೀನಾ, ಎಡಿಸಿ ಮಹಮ್ಮದ್ ಝುಬೇರ್, ತಹಶೀಲ್ದಾರ ಗುರುರಾಜ ಇತರರಿದ್ದರು.ನಗರದ ಅನಂತಪುರ ರಸ್ತೆಯ 46 ಎಕರೆ ಪ್ರದೇಶದ ಎಸ್‌ಟಿಪಿ (ತ್ಯಾಜ್ಯ ನೀರು ಸಂಸ್ಕರಣಾ ಘಟಕ) ಮತ್ತು ಮುಂಡರಿಗಿ-2 ಹಂತ ಕೈಗಾರಿಕಾ ಪ್ರದೇಶಾಭಿವೃದ್ಧಿ ಕೇಂದ್ರಕ್ಕೆ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಜೈವಿಕ ತಂತ್ರಜ್ಞಾನದ ಮೂಲಕ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಪುನಃ ಉಪಯೋಗ ಮಾಡಿಕೊಳ್ಳುವುದರಿಂದ ಪಾಲಿಕೆಗೆ ಆದಾಯ ಬರಲಿದೆ. ತ್ಯಾಜ್ಯ ನೀರನ್ನು ನಿಯಮಿತವಾಗಿ ಪರೀಕ್ಷಿಸಬೇಕು. ಅದರಿಂದ ಬರುವ ಕೆಸರು ಮಣ್ಣನ್ನು ಕೃಷಿ ಚಟುವಟಿಕೆಗಳಿಗೆ ಯೋಗ್ಯವಾಗುವುದೇ ಎಂಬುದನ್ನು ಸಹ ಬಳಸಿ ಪರಿಶೀಲನೆ ಮಾಡಬೇಕು. ಯಾವುದೇ ಕಾರಣಕ್ಕೂ ಪರಿಸರಕ್ಕೆ ಹಾನಿಯಾಗಬಾರದು ಎಂದು ಹೇಳಿದರು.ಕೈಗಾರಿಕಾ ತ್ಯಾಜ್ಯನೀರಿನ ಸಂಸ್ಕರಣೆಯು ಪ್ರತ್ಯೇಕ ಕೈಗಾರಿಕಾ ತ್ಯಾಜ್ಯನೀರಿನ ಸಂಸ್ಕರಣೆಯಲ್ಲಿ ಅಥವಾ ಒಳಚರಂಡಿ ಸಂಸ್ಕರಣಾ ಘಟಕದಲ್ಲಿ ಮಾಡಬೇಕು. ಈ ಭಾಗದಲ್ಲಿ ಹೆಚ್ಚಾಗಿ ಸ್ಪಾಂಜ್ ಐರನ್ ಕೈಗಾರಿಕೆಗಳು ಇದ್ದು, ತ್ಯಾಜ್ಯ ನೀರು ಸಂಸ್ಕರಣೆಗೆ ಅವರೇ ಮಾಡಿಕೊಳ್ಳುವಂತೆ ಸೂಚಿಸಬೇಕು ಎಂದು ಉಪಲೋಕಾಯುಕ್ತರು ನಿರ್ದೇಶನ ನೀಡಿದರು.
ಮುಂಡರಿಗಿ ಕೈಗಾರಿಕಾ ಪ್ರದೇಶದಲ್ಲಿ ತ್ಯಾಜ್ಯದ ನೀರು ನಾಲೆಗೆ ಹರಿಯುವುದನ್ನು ಕಂಡ ಉಪಲೋಕಾಯುಕ್ತರು, ತ್ಯಾಜ್ಯ ನೀರು ಹರಿಸುವ ಕೈಗಾರಿಕೆಗಳಿಗೆ ನೋಟಿಸ್ ಜಾರಿ ಮಾಡಬೇಕು. ಅಂತಹ ಕೈಗಾರಿಕೆಗಳನ್ನು ಕೂಡಲೇ ಕಾರ್ಯ ನಿಲ್ಲಿಸುವಂತೆ ಆದೇಶ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಕೈಗಾರಿಕೆಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮೇಲೆ ಬೇಸರ ವ್ಯಕ್ತಪಡಿಸಿದರು.
ಲೋಕಾಯುಕ್ತದ ಅಪರ ನಿಬಂಧಕ ಕೆ.ಎಂ. ರಾಜಶೇಖರ್, ಸಹಾಯಕ ನಿಬಂಧಕ ಶುಭವೀರ್ ಜೈನ್.ಬಿ., ಉಪ ನಿಬಂಧಕ ಅರವಿಂದ ಎನ್.ವಿ., ಲೋಕಾಯುಕ್ತ ಎಸ್ಪಿ ಸಿದ್ದರಾಜು, ಡಿವೈಎಸ್ಪಿ ವಸಂತಕುಮಾರ್, ಜಿಲ್ಲಾ ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಸೋಮಶೇಖರ್ ಇದ್ದರು.