ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲು ಡಿ. 10ರ ವರೆಗೆ ಅವಕಾಶ ನೀಡಲಾಗಿದೆ. ಡಿ. 25ರಂದು ಹಕ್ಕು ಮತ್ತು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲಾಗುವುದು ಹಾಗೂ ಅಂತಿಮ ಮತದಾರರ ಪಟ್ಟಿಯನ್ನು ಡಿ. 30ರಂದು ಪ್ರಕಟಿಸಲಾಗುತ್ತಿದೆ.

ಹಾವೇರಿ: ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ-2026ರ ಸಂಬಂಧ ಮತದಾರರ ಪಟ್ಟಿಯ ಅರ್ಹತಾ ದಿನಾಂಕ 2025 ನ. 1ಕ್ಕೆ ಸಂಬಂಧಿಸಿದಂತೆ ನ. 25ರಂದು ಹಾವೇರಿ ಜಿಲ್ಲೆಯಾದ್ಯಂತ ಕರಡು ಮತದಾರರ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ರಾಜಕೀಯ ಪಕ್ಷದ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲ ತಾಲೂಕಿನ ತಹಸೀಲ್ದಾರರ, ತಾಲೂಕು ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ, ಮತಗಟ್ಟೆಗಳಲ್ಲಿ ಮತ್ತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಮತದಾರರು ಪಟ್ಟಿ ಪರಿಶೀಲಿಸಿಕೊಳ್ಳಬೇಕು ಹಾಗೂ ಸೇರ್ಪಡೆ, ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲು ಡಿ. 10ರ ವರೆಗೆ ಅವಕಾಶ ನೀಡಲಾಗಿದೆ. ಡಿ. 25ರಂದು ಹಕ್ಕು ಮತ್ತು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲಾಗುವುದು ಹಾಗೂ ಅಂತಿಮ ಮತದಾರರ ಪಟ್ಟಿಯನ್ನು ಡಿ. 30ರಂದು ಪ್ರಕಟಿಸಲಾಗುತ್ತಿದೆ ಎಂದು ಹೇಳಿದರು.

18,394 ಮತದಾರರು: ನ. 25ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿ ಅನುಸಾರ ಜಿಲ್ಲೆಯಲ್ಲಿ 11,718 ಪುರುಷ ಹಾಗೂ 6,676 ಮಹಿಳೆಯರು ಸೇರಿ 18,394 ಪದವೀಧರ ಮತದಾರರಿದ್ದಾರೆ. ಬ್ಯಾಡಗಿ ತಾಲೂಕಿನಲ್ಲಿ 1,088 ಪುರುಷ ಹಾಗೂ 623 ಮಹಿಳೆಯರು ಸೇರಿ 1,711, ಹಾನಗಲ್-1,512 ಪುರುಷ ಹಾಗೂ 717 ಮಹಿಳೆಯರು ಸೇರಿ 2,238, ಹಾವೇರಿ-2,155 ಪುರುಷ ಹಾಗೂ 1,238 ಮಹಿಳೆಯರು ಸೇರಿ 3,393, ಹಿರೇಕೆರೂರು-1,252 ಪುರುಷ ಹಾಗೂ 645 ಮಹಿಳೆಯರು ಸೇರಿ 1,897, ರಟ್ಟಿಹಳ್ಳಿ- 802 ಪುರುಷ ಹಾಗೂ 422 ಮಹಿಳೆಯರು ಸೇರಿ 1,224, ಸವಣೂರು-1,000 ಪುರುಷ ಹಾಗೂ 742 ಮಹಿಳೆಯರು ಸೇರಿ 1,742, ಶಿಗ್ಗಾಂವಿ-1,273 ಪುರುಷ ಹಾಗೂ 680 ಮಹಿಳೆಯರು ಸೇರಿ 1,953 ಹಾಗೂ ರಾಣಿಬೆನ್ನೂರು ತಾಲೂಕಿನಲ್ಲಿ 2,627 ಪುರುಷ ಹಾಗೂ 1,879 ಮಹಿಳೆಯರು ಸೇರಿ 4,506 ಮತದಾರರಿದ್ದಾರೆ.

ಪದವೀಧರರ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಪದವಿ ಪೂರೈಸಿ ಮೂರು ವರ್ಷಗಳಾಗಿರಬೇಕು. ಅಂತಹ ಅಭ್ಯರ್ಥಿಗಳು ಪದವೀಧರರ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಮಾಡಬಹುದು ಎಂದು ತಿಳಿಸಿದರು.

28 ಮತಗಟ್ಟೆ: ಜಿಲ್ಲೆಯಲ್ಲಿ ಒಟ್ಟು 28 ಮತಗಟ್ಟೆಗಳಿದ್ದು, ಬ್ಯಾಡಗಿ, ಹಿರೇಕೆರೂರು, ರಟ್ಟಿಹಳ್ಳಿ, ಸವಣೂರು ತಾಲೂಕಿನಲ್ಲಿ ತಲಾ ಎರಡು, ಶಿಗ್ಗಾಂವಿ-ಮೂರು, ಹಾನಗಲ್ಲ-ನಾಲ್ಕು, ಹಾವೇರಿ-ಐದು ಹಾಗೂ ರಾಣಿಬೆನ್ನೂರು ತಾಲೂಕಿನಲ್ಲಿ ಎಂಟು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ನ. 25ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಯ ಒಂದು ಪ್ರತಿಯನ್ನು ಅಧಿಕೃತ ರಾಜಕೀಯ ಪಕ್ಷಿಗಳಿಗೆ ಉಚಿತವಾಗಿ ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದಿಂದ ಪಡೆಯಬಹುದಾಗಿದೆ ಎಂದರು.

ಅರ್ಹ ಪದವೀಧರರು ತಮ್ಮ ಹೆಸರು ಮತ್ತು ವಿವರಗಳನ್ನು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬ ಬಗ್ಗೆ ಪರಿಶೀಲಿಸಿಕೊಳ್ಳಬೇಕು. ಒಂದು ವೇಳೆ ಹೆಸರು ಇಲ್ಲವಾದ, ನಿಗದಿತ ನಮೂನೆ-18ರಲ್ಲಿ ಹೆಸರು ಸೇರ್ಪಡೆ, ನಮೂನೆ-8ರಲ್ಲಿ ಹೆಸರು ತಿದ್ದುಪಡಿ ಅವಶ್ಯಕತೆ ಇದ್ದಲ್ಲಿ ಸೂಕ್ತ ದಾಖಲೆಯೊಂದಿಗೆ ಅರ್ಜಿಯನ್ನು ಸಹಾಯಕ ಮತದಾರರ ನೋಂದಾಣಾಧಿಕಾರಿಗಳ ಕಾರ್ಯಾಲಯ (ತಹಸೀಲ್ದಾರ್), ನಿಯೋಜಿತ ಅಧಿಕಾರಿಗಳ ಕಾರ್ಯಾಲಯ (ತಾಲೂಕು ಪಂಚಾಯಿತಿ ಹಾಗೂ ಸಹಾಯಕ ನಿಯೋಜಿತ ಅಧಿಕಾರಿಗಳ ಕಾರ್ಯಾಲಯ (ಕ್ಷೇತ್ರ ಶಿಕ್ಷಣಾಧಿಕಾರಿಗಳ)ಗಳಿಗೆ ನಿಗದಿತ ಸಮಯದೊಳಗಾಗಿ ಚುನಾವಣಾ ವೇಳಾಪಟ್ಟಿಯಂತೆ ಡಿ. 10ರ ವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಮತಗಟ್ಟೆ ಮಟ್ಟದ ಏಜೆಂಟರ ನೇಮಕ: ಮುಂಬರುವ ದಿನಗಳಲ್ಲಿ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕಾರ್ಯಕ್ರಮ ಜರುಗಿಸಬೇಕಾಗಿದೆ. ಜಿಲ್ಲೆಯ ಎಲ್ಲ 6 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,482 ಮತಗಟ್ಟೆಗಳಿದ್ದು, ಬಿಎಲ್‌ಒಗಳು ಸಹ ಕಾರ್ಯನಿರ್ವಹಿಸುತ್ತಿದ್ದಾರೆ. ಆದಾಗ್ಯೂ ರಾಜಕೀಯ ಪಕ್ಷಗಳಿಂದ ಬೂತ್ ಲೆವೆಲ್ ಏಜೆಂಟರನ್ನು ನೇಮಿಸಬೇಕಾಗಿದೆ. ಒಂದು ವೇಳೆ ಈಗಾಗಲೇ ನೇಮಿಸಿದ್ದಲ್ಲಿ ನೇಮಕಾತಿಯ ವಿವರವನ್ನು ಚುನಾವಣಾ ಶಾಖೆಗೆ ನೀಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್, ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ್ ಎಲ್., ಚುನಾವಣಾ ತಹಸೀಲ್ದಾರ್ ಅಮೃತಗೌಡ ಪಾಟೀಲ, ಕಾಂಗ್ರೆಸ್‌ನ ಶಂಕರ ಮೆಹರವಾಡೆ, ವಿನಯ ಪಾಟೀಲ, ಬಿಜೆಪಿಯ ಸುರೇಶ ಹೊಸಮನಿ, ಜಿಡಿಎಸ್‌ನ ಅಮೀರಜಾನ್‌ ಬೇಪಾರಿ ಇತರರಿದ್ದರು.