ಅಧಿಕೃತವಾಗಿ ಪಾಲಿಕೆಯಿಂದ ಅನುಮತಿ ಪಡೆದು ಜಾಹೀರಾತು ಬಿತ್ತರಿಸಲು 2023ರಲ್ಲಿಯೇ ಹು-ಧಾ ಮಹಾನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಡಿಜಿಟಲ್ ಡಿಸ್‌ಪ್ಲೇ ಬೋರ್ಡ್‌ ಅಳವಡಿಸಿ ಜನವರಿಯಲ್ಲಿ ಪಾಲಿಕೆಗೆ ಹಸ್ತಾಂತರಿಸಲಾಗಿತ್ತು.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಮಹಾನಗರದಲ್ಲಿ ಪಾಲಿಕೆಯಿಂದ ₹4.17 ಕೋಟಿ ವೆಚ್ಚದಲ್ಲಿ ಅಳವಡಿಸಿರುವ ಡಿಜಿಟಲ್‌ ಡಿಸ್‌ಪ್ಲೇ ಬೋರ್ಡ್‌ಗಳ ವಿದ್ಯುತ್‌ ಶುಲ್ಕ ಪಾವತಿಸದ ಹಿನ್ನೆಲೆಯಲ್ಲಿ ಎರಡ್ಮೂರು ತಿಂಗಳಿಂದ ಹೆಸ್ಕಾಂ ಸಂಪರ್ಕ ಕಡಿತಗೊಳಿಸಿ ಶಾಕ್‌ ನೀಡಿದೆ.

ಅಧಿಕೃತವಾಗಿ ಪಾಲಿಕೆಯಿಂದ ಅನುಮತಿ ಪಡೆದು ಜಾಹೀರಾತು ಬಿತ್ತರಿಸಲು 2023ರಲ್ಲಿಯೇ ಹು-ಧಾ ಮಹಾನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಡಿಜಿಟಲ್ ಡಿಸ್‌ಪ್ಲೇ ಬೋರ್ಡ್‌ ಅಳವಡಿಸಿ ಜನವರಿಯಲ್ಲಿ ಪಾಲಿಕೆಗೆ ಹಸ್ತಾಂತರಿಸಲಾಗಿತ್ತು. ಆರಂಭದಲ್ಲಿ ಸರ್ಕಾರ, ಪಾಲಿಕೆಗೆ ಸಂಬಂಧಿಸಿದ ಕಾರ್ಯಕ್ರಮಗಳ ಜಾಹೀರಾತು ಬಿತ್ತರಿಸಲಾಗಿತ್ತು. ಆದರೆ, ಬೋರ್ಡ್‌ಗೆ ಇಂತಿಷ್ಟು ಎಂದು ಪಾಲಿಕೆ ದರ ನಿಗದಿಗೊಳಿಸಿರಲಿಲ್ಲ. ಹೀಗಾಗಿ ಪಾಲಿಕೆಗೆ ₹ 1 ಸಹ ಆದಾಯ ಬಂದಿಲ್ಲ.

30 ಬೋರ್ಡ್‌ ಅಳವಡಿಕೆ:

ಬೇಕಾಬಿಟ್ಟಿ ಪೋಸ್ಟರ್, ಬ್ಯಾನರ್, ಪ್ಲೆಕ್ಸ್‌ ಅಳವಡಿಸಿ ನಗರದ ಅಂದ ಹಾಳಾಗುವುದನ್ನು ಹಾಗೂ ಪರಿಸರ ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ಸ್ಮಾರ್ಟ್‌ಸಿಟಿ ಯೋಜನೆಯಡಿ ₹4.17 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿಯ ತೋಳನಕೆರೆ, ಉಣಕಲ್ ಕೆರೆ, ಮಹಾನಗರ ಪಾಲಿಕೆ ಸಾಂಸ್ಕೃತಿಕ ಭವನದ ಪಕ್ಕ, ಕೇಶ್ವಾಪುರ ವೃತ್ತ, ರಮೇಶ ಭವನ, ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ, ಸಿಬಿಟಿ ಮತ್ತು ಧಾರವಾಡದ ಕೆ.ಸಿ. ಪಾರ್ಕ್, ಪಾಲಿಕೆ ಆಯುಕ್ತರ ಕಚೇರಿ, ಬಸ್ ನಿಲ್ದಾಣ, ಎನ್‌ಟಿಟಿಎಫ್, ದಾಂಡೇಲಿ ರಸ್ತೆ ಸೇರಿದಂತೆ ಹುಬ್ಬಳ್ಳಿಯಲ್ಲಿ 16 ಹಾಗೂ ಧಾರವಾಡದಲ್ಲಿ 14 ಡಿಜಿಟಲ್‌ ಡಿಸ್‌ಪ್ಲೆ ಬೋರ್ಡ್‌ ಅಳವಡಿಸಲಾಗಿದೆ.

ದರ ನಿಗದಿಗೊಳಿಸಿಲ್ಲ:

ಸ್ಮಾರ್ಟ್‌ ಸಿಟಿ ಯೋಜನೆಯಡಿ 2024ರ ಜನವರಿಯಲ್ಲೇ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ಆದರೂ ಈ ವರೆಗೂ ಟೆಂಡರ್‌ ಕರೆದು ದರ ನಿಗದಿಗೊಳಿಸಿಲ್ಲ. ಈ ಡಿಸ್‌ಪ್ಲೆ ಬೋರ್ಡ್‌ಗಳಿಗೆ ಪ್ರತಿ ತಿಂಗಳು ₹30ರಿಂದ 35 ಸಾವಿರ ವಿದ್ಯುತ್‌ ಬಿಲ್‌ ಬರುತ್ತಿರುವುದು ಪಾಲಿಕೆಗೆ ಹೊರೆಯಾಗಿದೆ. ಪಾಲಿಕೆಗೆ ಆದಾಯ ನೀಡಬೇಕಿದ್ದ ಡಿಜಿಟಲ್‌ ಬೋರ್ಡ್‌ಗಳು ಹೊರೆಯಾಗಿ ಮಾರ್ಪಟ್ಟಿದ್ದು, ನಾಲ್ಕೈದು ತಿಂಗಳಿನಿಂದ ಹೆಸ್ಕಾಂಗೆ ವಿದ್ಯುತ್‌ ಬಿಲ್‌ ಭರಿಸಿಲ್ಲ. ಹಾಗಾಗಿ ಕಳೆದ ಎರಡ್ಮೂರು ತಿಂಗಳಿನಿಂದ ಹೆಸ್ಕಾಂ ವಿದ್ಯುತ್‌ ಸಂಪರ್ಕ ಖಡಿತ ಮಾಡಿದೆ.ಪಾಲಿಕೆ ತಡೆಗೋಡೆಗೆ ಅನಧಿಕೃತ ಪೋಸ್ಟ್‌

ಹು-ಧಾ ಮಹಾನಗರದಲ್ಲಿ ಅನಧಿಕೃತ ಜಾಹೀರಾತು, ಬ್ಯಾನರ್‌, ಫ್ಲೆಕ್ಸ್‌ಗಳ ಹಾವಳಿ ಮಿತಿಮೀರಿದೆ. ಗೋಡೆ, ರಸ್ತೆಗಳ ಅಕ್ಕಪಕ್ಕದ ತಡೆಗೋಡೆ, ಮರಗಳ ಮೇಲೆ ಬ್ಯಾನರ್‌, ಫ್ಲೆಕ್ಸ್‌ ಹಾಕಲಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಿದ್ದ ಮಹಾನಗರ ಪಾಲಿಕೆಯ ತಡೆಗೋಡೆಯ ಮೇಲೆಯೇ ತರಹೇವಾರಿ ಬ್ಯಾನರ್‌, ಪೋಸ್ಟರ್‌ ಹಾಕಿದ್ದರೂ ಅಧಿಕಾರಿಗಳು ಕ್ರಮಕೈಗೊಂಡಿಲ್ಲ.ಸ್ಮಾರ್ಟ್‌ಸಿಟಿ ಯೋಜನೆಯಡಿ ಹಾಕಲಾಗಿರುವ ಡಿಜಿಟಲ್‌ ಡಿಸ್‌ಪ್ಲೇ ಬೋರ್ಡ್‌ಗಳಿಗೆ ಕೆಲ ಅನಿವಾರ್ಯ ಕಾರಣಗಳಿಂದ ಈ ವರೆಗೂ ದರ ನಿಗದಿಗೊಳಿಸಿಲ್ಲ. ಈಗಾಗಲೇ ಇವುಗಳ ನಿರ್ವಹಣೆಗಾಗಿ ಟೆಂಡರ್‌ ಕರೆಯಲಾಗಿದೆ. ಆದಷ್ಟು ಬೇಗನೆ ಟೆಂಡರ್‌ ಪೂರ್ಣಗೊಳಿಸಿ ದರ ನಿಗದಿಗೊಳಿಸಲಾಗುವುದು.

ವಿಜಯಕುಮಾರ ಆರ್‌. ಮಹಾನಗರ ಪಾಲಿಕೆ ಉಪ ಆಯುಕ್ತಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಪಾಲಿಕೆಗೆ ಆದಾಯ ನೀಡಬೇಕಿದ್ದ ಡಿಜಿಟಲ್‌ ಡಿಸ್‌ಪ್ಲೆ ಬೋರ್ಡ್‌ಗಳು ವಿದ್ಯುತ್‌ ಬಿಲ್‌ ಕಟ್ಟಲು ಆಗದೇ ಬಂದಾಗಿರುವುದು ದುರ್ದೈವದ ಸಂಗತಿ. ಇದಕ್ಕೆಲ್ಲ ಪಾಲಿಕೆಯ ಅಧಿಕಾರಿಗಳೇ ನೇರ ಹೊಣೆ. ಈಗಲಾದರೂ ಆದಷ್ಟು ಬೇಗನೇ ಟೆಂಡರ್‌ ಕರೆದು ಪ್ರಾರಂಭಿಸಲಿ.

ಇಮ್ರಾನ್‌ ಯಲಿಗಾರ, ಹು-ಧಾ ಮಹಾನಗರ ಪಾಲಿಕೆ ಪ್ರತಿಪಕ್ಷದ ನಾಯಕ