ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ವಿದ್ಯುತ್ ಕಣ್ಣಾ ಮುಚ್ಚಾಲೆ ಆಟದಿಂದ ರೈತರ ಬೆಳೆಗಳು ಸಂಪೂರ್ಣವಾಗಿ ಹಾಳಾಗುತ್ತಿದ್ದು ಸರ್ಕಾರದ ನಿಯಮದಂತೆ ಚೆಸ್ಕಾಂ ಇಲಾಖೆ ವಿದ್ಯುತ್ ಪೂರೈಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ಒತ್ತಾಯಿಸಿದರು.ಹನೂರು ಪಟ್ಟಣದ ಚೆಸ್ಕಾಂ ಕಚೇರಿ ಮುಂಭಾಗ ಪ್ರತಿಭಟನೆ ಅಧ್ಯಕ್ಷತೆ ವಹಿಸಿ ಅಧಿಕಾರಿಗಳ ಜೊತೆ ಮಾತನಾಡಿ, ರಾತ್ರಿ ವೇಳೆ ತೋಟದ ಮನೆಗಳಿಗೆ ವಿದ್ಯುತ್ ನೀಡದೆ ಕಣ್ಣಾಮುಚ್ಚಾಲೆ ಆಟ ಆಡುತ್ತಿರುವ ಚೆಸ್ಕಾಂ ಇಲಾಖೆ ನೀಡುತ್ತಿರುವ ತ್ರೀ ಫೇಸ್ ವಿದ್ಯುತ್ ಸಹ ಗುಣಮಟ್ಟದಿಂದ ಕೂಡಿರುವುದಿಲ್ಲ. ಹೀಗಾಗಿ ತಾಲೂಕಿನ ವಿವಿಧ ಗ್ರಾಮಗಳಿಂದ ರೈತರು ಬೇಸತ್ತು ಬೆಳೆಗಳು ಒಣಗುತ್ತಿದೆ. ಜೊತೆಗೆ ಜನ ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ ಎಂದು ದೂರಿದರು.ಚೆಸ್ಕಾಂ ಇಲಾಖೆ ಅಧಿಕಾರಿಗಳು ಯಾವುದೇ ಮಾನದಂಡವಿಲ್ಲದೆ ರೈತರ ಜಮೀನುಗಳಿಗೆ ನುಗ್ಗಿ ವಿದ್ಯುತ್ ಪರಿಕರಗಳನ್ನು ವಶ ಪಡಿಸಿಕೊಳ್ಳುತ್ತಿರುವುದು ದುರದೃಷ್ಟಕರವಾಗಿದೆ. ಸಂಬಂಧಪಟ್ಟ ರೈತರಿಗೂ ಈ ವಿಚಾರ ತಿಳಿ ಹೇಳುವ ಅಧಿಕಾರಿಗಳೇ ರಾತ್ರಿ ವೇಳೆಯಲ್ಲಿ ತಮ್ಮ ಅಧಿಕಾರಿ, ಸಿಬ್ಬಂದಿ ಕಳುಹಿಸಿ ವಿದ್ಯುತ್ ಪರಿವರ್ತಕ ಸ್ಟಾರ್ಟರ್ ಗಳನ್ನು ವಶಪಡಿಸಿಕೊಳ್ಳುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚೆಸ್ಕಾಂ ಅಧಿಕಾರಿಗಳು ನಿಗದಿತ ಸಮಯಕ್ಕೆ ವಿದ್ಯುತ್ ನೀಡುತ್ತಿಲ್ಲ. ಹೀಗಾಗಿ ದಿನನಿತ್ಯ ರೈತರು ಜಮೀನುಗಳಲ್ಲಿ ಪಡುವ ಪಾಡು ಅಧಿಕಾರಿಗಳಿಗೆ ತಿಳಿಯುವುದಿಲ್ಲ. ಯಾವುದೇ ಅಧಿಕಾರಿ ಸಿಬ್ಬಂದಿ ಬಂದರೆ ಡಿಸ್ಕ್ ಕನೆಕ್ಷನ್‌ಗೆ ರೈತ ಮಹಿಳೆಯರೇ ಮುಂದೆ ನಿಂತು ತಡೆಯಿರಿ. ಜೊತೆಗೆ ಕೃಷಿ ಹೊಂಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಚೆಸ್ಕಾಂ ಇಲಾಖೆಗೆ ಅರ್ಜಿ ಸಲ್ಲಿಸಿ. ಅದಕ್ಕೆ ತಗಲುವ ವೆಚ್ಚವನ್ನು ಸಹ 15 ದಿನದಲ್ಲಿ ಪಾವತಿಸಿ ರೈತರಿಗೆ ನೀಡುವ ವಿದ್ಯುತ್ ಜೊತೆಗೆ ತೋಟದ ಮನೆಗಳಿಗೆ ರಾತ್ರಿ ವೇಳೆ ವಿದ್ಯುತ್ ನೀಡಬೇಕು ಎಂದು ಇದೆ ವೇಳೆ ತಿಳಿಸಿದರು.ತಾಲೂಕು ಘಟಕದ ಅಧ್ಯಕ್ಷ ಚೆಂಗಡಿ ಕರಿಯಪ್ಪ ಮಾತನಾಡಿ, ತಾಲೂಕಿನಲ್ಲಿ ಕಾಡುಪ್ರಾಣಿಗಳು ಹೆಚ್ಚಾಗಿದೆ. ರಾತ್ರಿ ವೇಳೆಯಲ್ಲಿ ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೆ ಜನರು ಹೊರಬರದಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಬರ ಬಿಸಿಲಿನಿಂದ ತತ್ತರಿಸಿರುವ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಸಹ ತಾಲೂಕಿನಲ್ಲಿ ಉಂಟಾಗುತ್ತಿದೆ. ಹೀಗಾಗಿ ನೀಡುವಂತಹ ವಿದ್ಯುತ್ತನ್ನು ಸಹ ಚೆಸ್ಕಂ ಇಲಾಖೆ ರೈತರಿಗೆ ಹಾಗೂ ಗ್ರಾಮಸ್ಥರಿಗೆ ನೀಡಬೇಕು. ಜೊತೆಗೆ ರಾತ್ರಿ ವೇಳೆ ತೋಟದ ಮನೆಗಳಿಗೆ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿದರು.ಸರ್ಕಾರದ ನಡೆಗೆ ಭಾರಿ ಆಕ್ರೋಶ:
ಬೇಸಿಗೆ ಮುನ್ನವೇ ಸುಡು ಬಿಸಿಲಿನಲ್ಲಿ ಬೆಳೆಗಳು ಹಾಳಾಗುತ್ತಿರುವ ಜೊತೆಗೆ ವಿದ್ಯುತ್ ಇಲ್ಲದೆ ಇರುವ ಅಲ್ಪ ಸ್ವಲ್ಪ ನೀರಿನಲ್ಲಿ ಬೆಳೆಗಳನ್ನು ರಕ್ಷಿಸಿಕೊಳ್ಳಲು ಆಗುತ್ತಿಲ್ಲ. ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಚೆಸ್ಕಾಂ ಇಲಾಖೆ ಹಾಗೂ ಸರ್ಕಾರ ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಸುವಲ್ಲಿ ವಿಫಲವಾಗಿದೆ. ಹೀಗಾಗಿ ಅಧಿಕಾರಿಗಳು ಸರಿಯಾದ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿಲ್ಲ. ಅನ್ನದಾತನ ಕಷ್ಟ ಕೇಳುವವರಿಲ್ಲದೆ ರೈತರೇ ಇಂದು ನೇರವಾಗಿ ಕಚೇರಿ ಮುಂಭಾಗ ವಿದ್ಯುತ್ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.ಇದೇ ವೇಳೆಯಲ್ಲಿ ಚೆಸ್ಕಾಂ ಇಇ ತಬ್ಸುಬಾನು ಮಾತನಾಡಿ, ನಿರಂತರವಾಗಿ ರೈತರಿಗೆ ಜಮೀನುಗಳಿಗೆ ತ್ರೀ ಫೇಸ್ ವಿದ್ಯುತ್ ನೀಡಲಾಗುತ್ತಿದೆ. ರಾತ್ರಿ ವೇಳೆ ನೀಡುವ ವಿದ್ಯುತ್ ಮೋಟಾರ್‌ಗಳನ್ನು ಚಾಲನೆ ಮಾಡುತ್ತಿರುವುದರಿಂದ ಚೆಸ್ಕಾಂನಲ್ಲಿ ಟಿಸಿ ನಿಲ್ಲುತ್ತಿಲ್ಲ. ಹೀಗಾಗಿ ನೀಡುತ್ತಿರುವ ವಿದ್ಯುತ್ 20 ಆಮ್ಸ್ ನೀಡಲಾಗುತ್ತಿದೆ. 2 ಫೇಸ್ ಮೋಟಾರ್‌ಗಳನ್ನು ರೈತರು ರಾತ್ರಿ ವೇಳೆ ಚಾಲನೆ ಮಾಡುವುದರಿಂದ ತೊಂದರೆಯಾಗುತ್ತಿದೆ. ಪ್ರತಿಯೊಬ್ಬ ರೈತರು ತ್ರೀ ಫೇಸ್ ನಲ್ಲಿ ಚಾಲನೆ ಮಾಡಿ ನಂತರ ರಾತ್ರಿ ವೇಳೆ ನೀಡುವ ವಿದ್ಯುತ್ ತೊಂದರೆಯಾಗುತ್ತಿದೆ. ಚೆಸ್ಕಾಂ ಘಟಕದಲ್ಲಿ ವಿದ್ಯುತ್ ನಿಲುಗಡೆಗೊಳ್ಳುತ್ತಿದ್ದು ರೈತರು ಸಹಕಾರ ನೀಡಬೇಕು ನಿಮ್ಮ ಬೇಡಿಕೆಗಳು ಏನಿದ್ದರೂ ಹಿರಿಯ ಅಧಿಕಾರಿಗಳಿಗೆ ತಿಳಿಸಿ ಕ್ರಮ ತಗೆದುಕೊಳ್ಳಲಾಗುವುದು ಎಂದರು.ಇದು ವೇಳೆ ಎಇಇ ಶಂಕರ್ ಉಪಸ್ಥಿತರಿದ್ದರು. ರೈತ ಮುಖಂಡರಾದ ಚಂಗಡಿ ಕರಿಯಪ್ಪ, ಮಾದಪ್ಪ, ಗಣೇಶ ದೊರೆ, ರಾಜೇಶ, ವೆಂಕಟೇಶ್ ವಿವಿಧ ಗ್ರಾಮದ ರೈತ ಮುಖಂಡರು ಭಾರಿ ಸಂಖ್ಯೆಯಲ್ಲಿ ಇದ್ದರು ಹನೂರು ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಪ್ರಸಾದ್ ಹಾಗೂ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ ಹಾಗೂ ಪೊಲೀಸ್ ಪೇದೆ ರಾಘವೇಂದ್ರ ಪ್ರಕಾಶ್ ಇನ್ನಿತರ ಸಿಬ್ಬಂದಿಗೆ ಸೂಕ್ತ ಬಂದೋಬಸ್ತ್ ವ್ಯವಸ್ಥೆಮಾಡಲಾಗಿತ್ತು.