ಸಾರಾಂಶ
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಮುಂದಿನ ಅಭಿವೃದ್ಧಿಗೆ ಮೂರನೇ ಹಂತದ ಯೋಜನೆಯಂತೆ ಎರಡು ಆದ್ಯತೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ನಿರ್ಧರಿಸಲಾಗಿದೆ. ಮೊದಲ ಆದ್ಯತೆಯಲ್ಲಿ ರು.೨೧೨.೧೦ ಕೋಟಿ ವೆಚ್ಚದ ಕಾಮಗಾರಿಗಳನ್ನು ಹಾಗೂ ಎರಡನೇ ಆದ್ಯತೆಯಲ್ಲಿ ರು.೧೫೯.೫೦ ಕೋಟಿ ವೆಚ್ಚದ ಕಾಮಗಾರಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಮೂರನೇ ಹಂತದ ಪ್ರಸ್ತಾಪಿತ ಕಾಮಗಾರಿಗಳ ಬಗ್ಗೆ ಮಾಸ್ಟರ್ ಪ್ಲಾನ್ ಯೋಜನೆಯ ಮೇಲ್ವಿಚಾರಣಾ ಸಮಿತಿ ಸಭೆ ಬೆಂಗಳೂರಿನ ಧಾರ್ಮಿಕದತ್ತಿ ಇಲಾಖಾ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು.ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ನೇತೃತ್ವ ವಹಿಸಿದ್ದರು.
ಮುಂದಿನ ಆರು ತಿಂಗಳೊಳಗೆ ಪ್ರಸ್ತಾಪಿತ ಕಾಮಗಾರಿಗಳಿಗೆ ಕ್ಯಾಬಿನೆಟ್‌ನಲ್ಲಿ ಅನುಮತಿ ಪಡೆದು ಕಾಮಗಾರಿ ಆರಂಭಿಸುವ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರು ತಿಳಿಸಿದ್ದಾರೆ.ವಿವಿಧ ಕಾಮಗಾರಿಗಳು:
ಮೊದಲ ಆದ್ಯತೆಯಲ್ಲಿ ೭ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತದೆ. ೨೭ ಕೋಟಿ ವೆಚ್ಚದಲ್ಲಿ ಶ್ರೀ ದೇವಳದ ಸುತ್ತುಗೋಪುರ ನವೀಕರಣ ಕಾಮಗಾರಿ, ೩ ಕೋಟಿಯಲ್ಲಿ ಶ್ರೀದೇವಳದ ತುಳಸಿತೋಟದಲ್ಲಿ ಆಶ್ಲೇಷ ಪೂಜಾಮಂದಿರದ ನಿರ್ಮಾಣ, ೫೫ ಕೋಟಿಯಲ್ಲಿ ಅನ್ನದಾಸೋಹ ಭವನ, ೫೯ ಕೋಟಿಯಲ್ಲಿ ಪಾರಂಪರಿಕ ರಥಬೀದಿ, ೬೫ ಕೋಟಿಯಲ್ಲಿ ಇಂಜಾಡಿಯಲ್ಲಿ ೨೦೦ ಕೊಠಡಿಗಳ ವಸತಿಗೃಹ, ೧.೫೦ ಕೋಟಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸೇರಿದಂತೆ ಒಟ್ಟು ೨೧೨.೧೦ ರು. ಕೋಟಿ ವೆಚ್ಚದ ಕಾಮಗಾರಿಗಳು ನಡೆಸಲು ನಿರ್ಧರಿಸಲಾಗಿದೆ.ಎರಡನೇ ಆದ್ಯತೆಯಲ್ಲಿ ೧೧ ಕಾಮಗಾರಿಗಳನ್ನು ನಡೆಸಲಾಗುತ್ತದೆ. ೬೮ ಕೋಟಿಯಲ್ಲಿ ವಾಣಿಜ್ಯ ಸಂಕೀರ್ಣ ಕಟ್ಟಡ, ೨.೫೦ ಕೋಟಿಯಲ್ಲಿ ಕಾಶಿಕಟ್ಟೆ ಶ್ರೀ ಗಣಪತಿ ಮತ್ತು ಶ್ರೀ ಆಂಜನೇಯ ದೇವಸ್ಥಾನದ ಪುನರ್ ನಿರ್ಮಾಣ ಕಾಮಗಾರಿ, ೩ ಕೋಟಿಯಲ್ಲಿ ಶ್ರೀದೇವಳದ ಶೃಂಗೇರಿ ಮಠ ಪುನರ್ ನಿರ್ಮಾಣ ಕಾಮಗಾರಿ, ೧ ಕೋಟಿಯಲ್ಲಿ ಉತ್ತರಾಧಿಮಠದ ಬೀದಿ ಆಂಜನೇಯ ಗುಡಿ ನವೀಕರಣ, ೨೦ ಕೋಟಿಯಲ್ಲಿ ಇಂಜಾಡಿಯಲ್ಲಿ ಸಿಬ್ಬಂದಿ ವಾಸ್ತವ್ಯಕ್ಕಾಗಿ ೧೦೦ ಕೊಠಡಿಗಳ ವಸತಿಗೃಹ ನಿರ್ಮಾಣ, ೫ ಕೋಟಿಯಲ್ಲಿ ೫೦ ಕೊಠಡಿಗಳ ಡಾರ್ಮೆಟರಿ ಕಟ್ಟಡ ನಿರ್ಮಾಣ, ೦.೫೦ ಕೋಟಿಯಲ್ಲಿ ಶ್ರೀದೇವಳದಲ್ಲಿ ಪ್ರತ್ಯೇಕ ಸರ್ಪಸಂಸ್ಕಾರ ಬಯಸುವ ಭಕ್ತಾದಿಗಳಿಗೆ ಯಾಗಶಾಲೆ ನಿರ್ಮಾಣ, ೯.೫೦ ಕೋಟಿಯಲ್ಲಿ ರಥಬೀದಿಯ ಬಲಭಾಗದಲ್ಲಿ ಸೂಕ್ತ ಮೂಲಭೂತ ವ್ಯವಸ್ಥೆಯೊಂದಿಗೆ ಪ್ರಸಾದ ಭೋಜನಕ್ಕೆ ಸರದಿ ಸಾಲು ಹಾಗೂ ದೇವರ ದರ್ಶನಕ್ಕೆ ಸಾಲು ವ್ಯವಸ್ಥೆಗಳ ಕಾಮಗಾರಿ, ೧೦ ಕೋಟಿಯಲ್ಲಿ ಪವರ್‌ಹೌಸ್ ನಿರ್ಮಾಣ, ೫ ಕೋಟಿಯಲ್ಲಿ ಭಕ್ತಾದಿಗಳು ಪೂರ್ವಧ್ವಾರದಲ್ಲಿ ಪ್ರವೇಶಿಸಿ ದರ್ಶನ ಪಡೆದು ಪಶ್ಚಿಮ ಧ್ವಾರದಲ್ಲಿ ತೆರಳಲು ಅನುಕೂಲವಾಗುವಂತೆ ಒತ್ತಡ ನಿಯಂತ್ರಿಸಲು ದರ್ಪಣತೀರ್ಥ ನದಿಗೆ ಸೇತುವೆ ಹಾಗೂ ರಸ್ತೆ ನಿರ್ಮಾಣ, ೩೫ ಕೋಟಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಾರ್ತಿಕೇಯ ವಸತಿಗೃಹಗಳನ್ನು ತೆರವುಗೊಳಿಸಿ ಅಲ್ಲಿ ನೂತನವಾಗಿ ೧೦೦ ಕೊಠಡಿಗಳ ವಸತಿಗೃಹ ನಿರ್ಮಾಣ ಮಾಡುವುದು ಸೇರಿದಂತೆ ಒಟ್ಟು ೧೫೯.೫೦ ಕೋಟಿ ವೆಚ್ಚದ ಕಾಮಗಾರಿ ನಡೆಸಲು ನಿರ್ಧರಿಸಲಾಗಿದೆ.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ದೇವಳದ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಪವನ್ ಎಂ.ಡಿ., ಲೋಲಾಕ್ಷ ಕೈಕಂಬ, ಅಚ್ಚತ ಅಲ್ಕಾಬೆ, ಕುಕ್ಕೆ ದೇವಳದ ಇಒ ಅರವಿಂದ ಅಯ್ಯಪ್ಪ ಸುತಗುಂಡಿ, ಗ್ರಾ.ಪಂ. ಸದಸ್ಯ ಹರೀಶ್ ಇಂಜಾಡಿ, ಪಿಡಿಒ ಮಹೇಶ್, ದೇವಳದ ಇಂಜೀನಿಯರ್ ಉದಯಕುಮಾರ್, ಲೋಕೋಪಯೋಗಿ ಇಲಾಖೆ ಇಂಜೀನಿಯರ್ ಪ್ರಮೋದ್ ಕುಮಾರ್ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.