ಸಾರಾಂಶ
ಕನ್ನಡಪ್ರಭ ವಾರ್ತೆ ಮಸ್ಕಿ
ವೀರಶೈವ ಲಿಂಗಾಯತ ಸಮಾಜದಲ್ಲಿ ಕುರುಹಿನ ಶಟ್ಟಿ ಸಮಾಜ ಚಿಕ್ಕ ಚೊಕ್ಕ ಸಮಾಜವಾಗಿದ್ದು, ತಾವಾಯಿತು ತಮ್ಮ ಬದಕಾಯಿತು ಎಂಬಂತೆ ಜೀವನ ನಡೆಸುತ್ತಿದ್ದಾರೆ. ಈ ಸಮಾಜದ ನೀಲಕಂಠೇಶ್ವರ ದೇವಸ್ಥಾನಕ್ಕೆ 50ವರ್ಷ ತುಂಬಿ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ನಾವೆಲ್ಲ ಸಹಕರಿಸಬೇಕು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.ಮಸ್ಕಿ ಪಟ್ಟಣದ ನೀಲಕಂಠಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಗಚ್ಚಿನ ಹಿರೇಮಠದ ಶ್ರೀವರರುದ್ರಮುನಿ ಶಿವಾಚಾರ್ಯರು ಮಾತನಾಡಿ, ಕುರುಹಿನ ಶಟ್ಟಿ ಸಮಾಜದವರು ನೀಲಕಂಠಶ್ವರನ ಪರಮ ಭಕ್ತರಾಗಿದ್ದು ಕಳೆದ 50 ವರ್ಷಗಳಿಂದ ಮಸ್ಕಿಯಲ್ಲಿ ದೇವಸ್ಥಾನ ನಿರ್ಮಿಸಿಕೊಂಡು ಸಾಮಾಜಿಕವಾಗಿ ಧಾರ್ಮಿಕವಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅದರ ಜತೆಗೆ ಉಳಿದ ಸಮಾಜದವರೊಂದಿಗೆ ಸೌಹಾರ್ದಯುತವಾಗಿ ಬದಕುತ್ತಿರುವುದು ಆದರ್ಶವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುರುಹಿನ ಶಟ್ಟಿ ಸಮಾಜದ ಅಧ್ಯಕ್ಷ ಈಶಪ್ಪ ಗಂಗಾವತಿ ಮಾತನಾಡಿ, ಕುರುಹಿನ ಶಟ್ಟಿ ಸಮಾಜ ಆರ್ಥಿಕವಾಗಿ ಸದೃಢವಾಗಿಲ್ಲ. ಧಾರ್ಮಿಕ ತಳಹದಿ ಮೇಲೆ ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ನಮ್ಮ ಸಮಾಜದ ಯುವಕರು ಹೆಚ್ಚು ಹೆಚ್ಚು ವಿದ್ಯಾವಂತರಾಗಬೇಕಾದುದು ಅವಶ್ಯಕವಾಗಿದೆ ಎಂದರು.ಗ್ರಾಮದ ಹಿರಿಯರಾದ ಕೆ.ವೀರನಗೌಡ, ಬಣಜಿಗ ಸಮಾಜದ ಅಧ್ಯಕ್ಷರಾದ ಉಮಾಕಾಂತಪ್ಪ ಸಂಗನಾಳ, ಡಾ.ಬಿ.ಎಚ್.ದಿವಟರ್, ಜಂಗಮ ಸಮಾಜದ ಅಧ್ಯಕ್ಷರಾದ ಕರಿಬಸಯ್ಯ ಸಿಂಧನೂರುಮಠ, ದೇವಾಂಗ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಕುಚ್ಚಾ, ಶಿವಸಿಂಪಿಗ ಸಮಾಜದ ಅಧ್ಯಕ್ಷ ಸುರೇಶ ಹರಸೂರು, ಬಸವರಾಜಪ್ಪ ಕಲ್ಲೂರು, ಅಮರೇಶ ಜೋತಾನ, ವಿರುಪಾಕ್ಷಪ್ಪ ಪರಕಾಳಿ, ಬಸವರಾಜ ದಿನ್ನಿ, ಸಂಗಮೇಶ ಕೊಳ್ಳಿ, ಸಂಗಮೇಶ ಶ್ಯಾವಿ, ಮಂಜುನಾಥ ಗೊಗ್ಗಲ್ ಹಾಗೂ ಇತರರು ಇದ್ದರು.