ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ
ಮಕ್ಕಳಲ್ಲಿ ಸಮಯ ಸ್ಥಿತಿಪ್ರಜ್ಞೆ ಮುಖ್ಯವಾಗಿದೆ. ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ನಿರ್ಣಯ ತಮ್ಮ ಕೈಯಲ್ಲಿದೆ ಆ ನಿಟ್ಟಿನಲ್ಲಿ ಉತ್ತಮ ಶಿಕ್ಷಣ ಪಡೆದು ದೇಶದ ಆಸ್ತಿಯಾಗಬೇಕು ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.ಸಮೀಪದ ಸಿದ್ದಾಪೂರದ ಶ್ರೀ ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪುಷ್ಪಾತಾಯಿ ಕನ್ನಡ ಮಾಧ್ಯಮ ಪ್ರಾಥಮಿಕ, ಪ್ರೌಡ ಶಾಲೆ ಹಾಗೂ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ಸಭಾ ಭವನದಲ್ಲಿ ನಡೆದ ಪ್ರಭು ಅವಾರ್ಡ್ಸ್ 2024-25 ವಾರ್ಷಿಕ ಸ್ನೇಹ ಸಮ್ಮಿಲನ ಹಾಗೂ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ರಂಗದಲ್ಲೂ ಸ್ಪರ್ಧೆಯೊಡ್ಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳು ಸ್ಪರ್ಧಾಮನೋಭಾವನೆ ಬೆಳೆಸಿಕೊಳ್ಳಬೇಕು. ಹೊಸ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಾನಸಿಕ, ದೈಹಿಕವಾಗಿ ಸದೃಢವಾಗಿರಲು ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಮಹಾ ಪುರುಷರ, ಮಹಾನ್ ವ್ಯಕ್ತಿಗಳ ಮಾರ್ಗದರ್ಶನ ಜೀವನದಲ್ಲಿ ಅಳವಡಿಸಿಕೊಂಡು ಆದರ್ಶರಾಗಿ ಭಾವಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಬೇರೊಬ್ಬರ ಕೈಗೊಂಬೆಯಾಗಿರದೆ ಸ್ವಯಂ ಉದ್ಯೋಗಿಗಳಾಗಿ ಬೇರೊಬ್ಬರಿಗೆ ಉದ್ಯೋಗ ನೀಡುವಂತವರಾಗಬೇಕು. ದೃಢ ಶಕ್ತಿ ಹೊಂದಿ ನಾಯಕತ್ವದ ಗುಣ ಬೆಳಸಿಕೊಳ್ಳಬೇಕು. ನಮ್ಮ ಶಾಲೆಯ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಸುತ್ತಮುತ್ತಲಿನ ಎಲ್ಲ ಶಾಲೆಯ ವಿದ್ಯಾರ್ಥಿಗಳು ಜಾನಪದ ನೃತ್ಯ ಪ್ರಭು ಪ್ರತಿಭೆ ಕಬ್ಬಡಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಭು ಅವಾರ್ಡ್ ಪಡೆದುಕೊಳ್ಳುವ ನಿಟ್ಟಿನಲ್ಲಿ ಛಲಗಾರಿಕೆ ಹೊಂದಬೇಕು ಎಂಬ ಉದ್ದೇಶ ನನ್ನದಾಗಿದೆ ಎಂದರು.ಕೊಣ್ಣೂರ ಕಲ್ಯಾಣ ಹೊರಗಿನಮಠದ ಡಾ.ವಿಶ್ವಪ್ರಭು ಶಿವಾಚಾರ್ಯ ಶ್ರೀಗಳು ಮಾತನಾಡಿ, ಶಾಸಕ ಜಗದೀಶ ಗುಡಗುಂಟಿಯವರು ಸುತ್ತಮುತ್ತಿಲಿನ ಬಡ ಮಕ್ಕಳಿಗೆ ಮೌಲಿಕ ಶಿಕ್ಷಣ ತಲುಪಲಿ ಎಂಬ ಉದ್ದೇಶದಿಂದ ಈ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ್ದಾರೆ. ಮತ್ತು ತಮ್ಮ ಶಾಲೆಯ ಮಕ್ಕಳು ಹೊರತುಪಡಿಸಿ ಸುತ್ತಮುತ್ತಲಿನ ಶಾಲೆಯ ಮಕ್ಕಳಿಗೆ ಪ್ರಭು ಅವಾರ್ಡ್ಸ್ ಮೂಲಕ ನಗದು ಬಹುಮಾನ ನೀಡುತ್ತಿರುವುದು ಮಹತ್ತರ ಯೋಜನೆಯಾಗಿದೆ. ಎಸ್ಎಸ್ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಐದು ವಿದ್ಯಾರ್ಥಿಗಳಿಗೆ ಎರಡು ವರ್ಷದ ಪ್ರವೇಶ ಫೀ ಇಲ್ಲದೆ ಉಚಿತವಾಗಿ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು. ಖಾಸಗಿ ಶಾಲೆಯ ಜೊತೆಗೆ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಒತ್ತು ನೀಡಿ ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ ತಾಲೂಕಿನ 26 ಸಾವಿರ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಕೂಲ್ ಬ್ಯಾಗ್‌ಗಳನ್ನು ಕೊಡುವ ಯೋಜನೆ ಹೊಂದಿದ್ದಾರೆ ಎಂದರು. ಭಗವಂತನಲ್ಲಿ ನಿಶ್ವಾರ್ಥವಾದ ಪ್ರೀತಿ ಇದ್ದರೆ ಮಾತ್ರ ಭಕ್ತಿ ಪ್ರಾಪ್ತಿಯಾಗುವದು. ಆ ನಿಟ್ಟಿನಲ್ಲಿ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ನಾವು ಕಲಿತ ವಿದ್ಯೆ ಎಂದು ಹಾಳಾಗುವುದಿಲ್ಲ ಇದು ನಮಗೆ ಶಾಶ್ವತ ಸಂಪತ್ತು ಎಂದರು.
ಆಡಳಿತಾಧಿಕಾರಿ ಪ್ರೊ.ವೈ.ಬಿ.ಹೊಟ್ಟಿ ಮಾತನಾಡಿ, ಪ್ರಾಥಮಿಕ, ಪ್ರೌಢ ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು ೧೫೦೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿ ವರ್ಷ ಪ್ರಭು ಅರ್ವಾಡ್ಸ್ ಜೊತೆಗೆ ನಗದು ಬಹುಮಾನ ನೀಡಲಾಗುತ್ತಿದೆ ಎಂದರು.ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಧರ್ಮಲಿಂಗಯ್ಯ ಗುಡಗುಂಟಿ ನಿರ್ದೇಶಕರಾದ ದೇವಲ ದೇಸಾಯಿ, ನಾಗಪ್ಪ ಸನದಿ, ಡಾ.ಎಸ್.ಎಸ್ ಹೂಲಿ, ಪಾರ್ವತಿ ಧರ್ಮಲಿಂಗಯ್ಯ ಗುಡಗುಂಟಿ, ಶಾಲಾ ಮುಖ್ಯಗುರು ಕೆ.ವಾಯ್ ಭೂತಾಳಿ ಇದ್ದರು. ಶಿಕ್ಷಕ ಬಿ.ಎಮ್ ಹಿಡಕಲ್ ಪ್ರಾರ್ಥಿಸಿದರು. ಶಿಕ್ಷಕ ಕೆ.ಬಿ ಮಠ ಸ್ವಾಗತಿಸಿದರು. ಶಿಕ್ಷಕಿ ಎಮ್ ಬಿ ಗುಮಾಸ್ತೆ ನಿರೂಪಿಸಿ ವಂದಿಸಿದರು.