ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ರೂಪಿಸಿಕೊಳ್ಳುವುದು ಬಹು ಮುಖ್ಯವಾಗಿದ್ದು, ಶಿಕ್ಷಣಕ್ಕೆ ನೀಡುವ ಪ್ರಾಮುಖ್ಯತೆಯನ್ನು ಸಂಸ್ಕಾರ ರೂಪಿಸಿಕೊಳ್ಳಲು ನೀಡಬೇಕಾಗಿದೆ ಎಂದು ಉಪನ್ಯಾಸಕ ಹಾಗೂ ರಾಜ್ಯ ಸರ್ಕಾರಿ ನೌಕರ ಸಂಘದ ತಾ.ಘಟಕದ ಉಪಾಧ್ಯಕ್ಷ ಬಂಗಾರಪ್ಪ ಹೇಳಿದರು
ಕನ್ನಡಪ್ರಭ ವಾರ್ತೆ ಶಿಕಾರಿಪುರ
ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ರೂಪಿಸಿಕೊಳ್ಳುವುದು ಬಹು ಮುಖ್ಯವಾಗಿದ್ದು, ಶಿಕ್ಷಣಕ್ಕೆ ನೀಡುವ ಪ್ರಾಮುಖ್ಯತೆಯನ್ನು ಸಂಸ್ಕಾರ ರೂಪಿಸಿಕೊಳ್ಳಲು ನೀಡಬೇಕಾಗಿದೆ ಎಂದು ಉಪನ್ಯಾಸಕ ಹಾಗೂ ರಾಜ್ಯ ಸರ್ಕಾರಿ ನೌಕರ ಸಂಘದ ತಾ.ಘಟಕದ ಉಪಾಧ್ಯಕ್ಷ ಬಂಗಾರಪ್ಪ ಹೇಳಿದರುಪಟ್ಟಣದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಡೆದ ಬೀಳ್ಕೊಡುಗೆ ಸಮಾರಂಭ ಹಾಗೂ ಸರಸ್ವತಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚಿನ ವರ್ಷದಲ್ಲಿ ಪೋಷಕರು ಮಕ್ಕಳ ಉನ್ನತ ಫಲಿತಾಂಶಕ್ಕೆ ಮಾತ್ರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಉನ್ನತ ಶಿಕ್ಷಣದಿಂದ ಅಧಿಕಾರ, ಹಣ, ಆಂತಸ್ತು ಹೆಚ್ಚಿಸಿಕೊಳ್ಳುವ ಏಕೈಕ ಉದ್ದೇಶದಿಂದ ಮಕ್ಕಳಿಗೆ ಅಂಕ ಹೆಚ್ಚು ಗಳಿಸಲು ಮಾತ್ರ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುತ್ತಿದೆ ಎಂದ ಅವರು, ಪರ್ಯಾಯವಾಗಿ ಮಕ್ಕಳಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಇದರಿಂದಾಗಿ ಗುರುಹಿರಿಯರಿಗೆ ಗೌರವ ನೀಡುವ ಸಂಪ್ರದಾಯ ಕಣ್ಮರೆಯಾಗುವ ಆತಂಕ ಹೆಚ್ಚಾಗಿದೆ, ಸಂಸ್ಕಾರದ ಕೊರತೆಯಿಂದ ಭವಿಷ್ಯದಲ್ಲಿ ಸಮಾಜದ ಅಧಪತನಕ್ಕೆ ಕಾರಣವಾಗಲಿದೆ ಎಂಬ ಅರಿವು ಪ್ರತಿಯೊಬ್ಬ ಪೋಷಕರಿಗೆ ಉಂಟಾಗಬೇಕು ಎಂದು ತಿಳಿಸಿದರು.ಶಿಕ್ಷಣ ಮತ್ತು ಸಂಸ್ಕಾರದಿಂದ ಮಾತ್ರ ವ್ಯಕ್ತಿಯ ಭವಿಷ್ಯ ಸುಂದರವಾಗಲಿದೆ. ಪಿಯುಸಿ ಹಂತದಲ್ಲಿಯೇ ಶಿಕ್ಷಣಕ್ಕೆ ನೀಡುವ ಮಹತ್ವ ಸಂಸ್ಕಾರ ರೂಪಿಸಿಕೊಳ್ಳಲು ನೀಡುವಂತೆ ತಿಳಿಸಿದ ಅವರು, ಕಾಲೇಜಿನಲ್ಲಿ ಭವಿಷ್ಯದ ಕನಸು ಕಟ್ಟಿಕೊಂಡು ಅಧ್ಯಯನ ಮಾಡುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿ ಜಗತ್ತಿನಲ್ಲಿ ಶಿಕ್ಷಣಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ ಎಂಬುದನ್ನು ಅರಿಯಬೇಕು, ನಹೀ ಜ್ಞಾನೇನ ಸದೃಶಂ ಎಂಬ ಶ್ಲೋಕದ ಮಹತ್ವ ಜ್ಞಾನಕ್ಕಿಂತ ಮಿಗಿಲಾದ ವಸ್ತು ಮತ್ತೊಂದಿಲ್ಲ ಎಂಬುದನ್ನು ಪ್ರತಿಪಾದಿಸುತ್ತದೆ. ವಿದ್ಯೆ ಇಲ್ಲದವನು ಪಶುವಿಗೆ ಸಮಾನವಾಗಿದ್ದು, ಸಂಪತ್ತನ್ನು ಯಾರು ಬೇಕಾದರೂ ಸಂಪಾದನೆ ಮಾಡಬಹುದು ಎಂದರು.
ಈ ಜಗತ್ತು ಒಂದು ಪುಟ್ಟ ಕನ್ನಡಿ ರೀತಿಯಾಗಿದ್ದು, ಪ್ರತಿಯೊಬ್ಬರ ಮೈಂಡ್ ಸೆಟ್ ಅವಲಂಭಿಸಿರುತ್ತದೆ. ಸಮಾಜಕ್ಕೆ ನೀವು ಏನು ಕೊಡುತ್ತೀರಿ ಅದನ್ನು ನಿಮಗೆ ಸಮಾಜ ವಾಪಸ್ ಕೊಡುತ್ತದೆ. ಒಳ್ಳೆಯದನ್ನು ನೀಡಿದಲ್ಲಿ ಒಳ್ಳೆಯದನ್ನು ಪಡೆಯಬಹುದಾಗಿದ್ದು, ಬೇವು ಭಿತ್ತಿ ಮಾವಿನ ಫಲ ನಿರೀಕ್ಷಿಸಬಾರದು ಎಂದ ಅವರು, ಎರಡು ವರ್ಷ ಕಷ್ಟಪಟ್ಟು ಓದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಿ ಸಿಇಟಿ, ನೀಟ್, ಐಎಎಸ್, ಐಪಿಎಸ್‌ಗಳಿಗೆ ಪೂರ್ವ ತಯಾರಿ ಕೈಗೊಂಡು ನಿರ್ದಿಷ್ಟ ಗುರಿ ತಲುಪುವಂತೆ ತಿಳಿಸಿದರು.ಹಿರಿಯ ಉಪನ್ಯಾಸಕ ಸುರೇಶ್ ಲಮಾಣಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಶಿಸ್ತು ಸಂಯಮ ಸಂಸ್ಕಾರ ಸಹ ಬಹು ಮುಖ್ಯವಾಗಿದ್ದು, ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನ ಎದುರಿಸಿ ಯಶಸ್ಸು ಗಳಿಸಿ ಎಂದು ಹೇಳಿದರು.
ಉಪನ್ಯಾಸಕ ಮಂಜುನಾಥ್ ನಾಯಕ್, ಕಾಲೇಜಿನ ಪ್ರಾಂಶುಪಾಲ ರಮೇಶ್ ಡಿ., ಉಪನ್ಯಾಸಕರಾದ ಸುರೇಶ್ ಡಿ., ದಿನಕರ್, ಸಂತೋಷ್, ಫಾಮಿದ, ಯತೀಶ್ ಕುಮಾರ್, ಸಂತೋಷ ಅಂಗಡಿ ಮತ್ತಿತರರು ಹಾಜರಿದ್ದರು.