ಆರೋಗ್ಯವಂತ ಮಕ್ಕಳು ದೇಶದ ಆಸ್ತಿ. ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸು ಇರಲಿದ್ದು, ಆರಂಭಿಕ ಜೀವನದಲ್ಲಿರುವುದು ಅತಿಮುಖ್ಯ.
ಧಾರವಾಡ:
ಪ್ರಸ್ತುತ ಸಂದರ್ಭದಲ್ಲಿ ಒಂದು ಸರ್ಕಾರೇತರ ಸಂಸ್ಥೆಯು 25 ಸಾವಿರ ಮಕ್ಕಳ ಆರೋಗ್ಯ ತಪಾಸಣೆ ಮಾಡಿರುವುದು ಸಾಮಾನ್ಯದ ಸಂಗತಿ ಏನಲ್ಲ ಎಂದಿರುವ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ, ಡಾ. ರಾಜನ್ ದೇಶಪಾಂಡೆ ನೇತೃತ್ವದ ಮಕ್ಕಳ ಅಕಾಡೆಮಿ ಕಾರ್ಯ ಶ್ಲಾಘನೀಯ ಎಂದು ಹೇಳಿದರು.ಮಕ್ಕಳ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಬೃಹತ್ ಆರೋಗ್ಯ ತಪಾಸಣೆಯ ಸಮಾರೋಪ ಉದ್ಘಾಟಿಸಿದ ಅವರು, ಆರೋಗ್ಯವಂತ ಮಕ್ಕಳು ದೇಶದ ಆಸ್ತಿ. ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸು ಇರಲಿದ್ದು, ಆರಂಭಿಕ ಜೀವನದಲ್ಲಿರುವುದು ಅತಿಮುಖ್ಯ. ಈ ಹಿನ್ನೆಲೆಯಲ್ಲಿ ಅಕಾಡೆಮಿ ಕಾರ್ಯ ಸ್ತುತ್ಯರ್ಹ ಎಂದರು.
ಮಾಜಿ ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ಬಾಲ್ಯದಲ್ಲಿ ಆರೋಗ್ಯಕರ ಆಹಾರ ಪದ್ಧತಿಗಳು ಇಡೀ ಜೀವನದ ಉತ್ತಮ ಆರೋಗ್ಯದ ದಾರಿ ತೋರುತ್ತವೆ. ಪಾಲಕ-ಪೋಷಕರು ಆ ದಿಕ್ಕಿನಲ್ಲಿ ತಮ್ಮ ಪ್ರಯತ್ನ ಮಾಡಬೇಕು ಎಂದು ಹೇಳಿದರು.ದಂತ ಶಸ್ತ್ರಚಿಕಿತ್ಸಕ ಡಾ. ವಿಜಯ್ ತ್ರಾಸದ್ ಮಾತನಾಡಿ, ಶಾಲೆಗಳಲ್ಲಿ ಅಕಾಡೆಮಿ ಮಾಡುತ್ತಿರುವ ಶಿಬಿರಗಳು ಅಪಾರ ತೃಪ್ತಿ ನೀಡಿದರೂ ಗ್ರಾಮೀಣ ಪ್ರದೇಶಗಳಲ್ಲಿ ಶೇ. 60ರಷ್ಟು, ನಗರದಲ್ಲಿ ಶೇ.40ರಷ್ಟು ಮಕ್ಕಳು ರಕ್ತಹೀನತೆ, ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ. ಆಶ್ಚರ್ಯಕರವಾಗಿ ನಗರ ಶಾಲೆಗಳಲ್ಲಿ ಶೇ.10-15ರಷ್ಟು ವಿದ್ಯಾರ್ಥಿಗಳು ಬೊಜ್ಜು ಹೊಂದಿದ್ದಾರೆ. ಕಬ್ಬಿಣದ ಅಂಶ ಹೆಚ್ಚಿಸಲು ಆರೋಗ್ಯಕರ ಆಹಾರ ಪದ್ಧತಿ ಮತ್ತು ತೂಕ ಹೆಚ್ಚಿಸಲು ಉತ್ತಮ ಪ್ರೋಟೀನ್‌ಗಳ ಬಗ್ಗೆ ವಿವರಿಸಲು ಆಹಾರ ತಜ್ಞರನ್ನು ಕರೆದೊಯ್ಯುವ ಮೂಲಕ ನಾವು ಈ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ. ರಾಜನ್ ದೇಶಪಾಂಡೆ ಮಾತನಾಡಿದರು. ಜೆಎಸ್‌ಎಸ್ ಐಟಿಐ ಕಾಲೇಜು ಪ್ರಾಚಾರ್ಯ ಮಹಾವೀರ ಉಪಾಧ್ಯ, ಕೆಇ ಬೋರ್ಡ್ ಸಂಸ್ಥೆಯ ರಾಜಪುರೋಹಿತ್, ರೇಣುಕಾ ಪಾಟೀಲ್, ಪಲ್ಲವಿ ಅಕಳವಾಡಿ, ಸತೀಶ್ ಪರ್ವತಿಕರ, ಸಿ.ಯು. ಬೆಳ್ಳಕ್ಕಿ, ಡಾ. ಎಂ.ವೈ. ಸಾವಂತ, ಡಾ. ಆನಂದ ತಾವರಗೇರಿ, ಪಂಕಜ ದೇಸಾಯಿ, ವಿನಯ ನಾಡಗೀರ, ಡಾ. ಪಲ್ಲವಿ ದೇಶಪಾಂಡೆ ಮತ್ತಿತರರು ಇದ್ದರು.