ಖಾರದ ಪುಡಿ ಎರಚಿ ಮಾಂಗಲ್ಯ ಅಪಹರಣ

| Published : Jan 28 2025, 12:47 AM IST

ಖಾರದ ಪುಡಿ ಎರಚಿ ಮಾಂಗಲ್ಯ ಅಪಹರಣ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆ ಮುಖಕ್ಕೆ ಕಾರದ ಪುಡಿ ಎರಚಿದ ಕಳ್ಳ, ಸುಮಾರು ₹2 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಅಪಹರಿಸಿದ ಘಟನೆ ಜಿಲ್ಲೆಯ ಹರಿಹರ ತಾಲೂಕು ಕೊಕ್ಕನೂರು ಗ್ರಾಮದಲ್ಲಿ ನಡೆದಿದೆ.

ದಾವಣಗೆರೆ: ಮಹಿಳೆ ಮುಖಕ್ಕೆ ಕಾರದ ಪುಡಿ ಎರಚಿದ ಕಳ್ಳ, ಸುಮಾರು ₹2 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಅಪಹರಿಸಿದ ಘಟನೆ ಜಿಲ್ಲೆಯ ಹರಿಹರ ತಾಲೂಕು ಕೊಕ್ಕನೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಲ್ಲಮ್ಮ 37 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಳೆದುಕೊಂಡ ಸಂತ್ರಸ್ತೆ. ಎಂದಿನಂತೆ ಮಲ್ಲಮ್ಮ ಬೆಳಗ್ಗೆ ಮನೆಯಂಗಳದ ಕಸ ಗುಡಿಸುತ್ತಿದ್ದರು. ಈ ವೇಳೆ ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ಬಂದ ವ್ಯಕ್ತಿಯು ಮಲ್ಲಮ್ಮ ಅವರ ಮುಖಕ್ಕೆ ಖಾರದ ಪುಡಿ ಎರಚಿ, ಮಾಂಗಲ್ಯ ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಮಲ್ಲಮ್ಮ ಜೋರಾಗಿ ಕೂಗಿಕೊಂಡಾಗ ಅಕ್ಕಪಕ್ಕದವರು ನೆರವಿಗೆ ಧಾವಿಸಿದರು. ಅಷ್ಟರಲ್ಲಾಗಲೇ, ಸರಗಳ್ಳ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದರು. ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೊಕ್ಕನೂರಿನಲ್ಲಿ ಎಸ್‌ಪಿ ನೇತೃತ್ವದಲ್ಲಿ ಸಭೆಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ಅವರು ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ಕನೂರು ಗ್ರಾಮದಲ್ಲಿ ಸರಗಳ್ಳತನ ನಡೆದ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ, ಸಂತ್ರಸ್ತೆಯಿಂದ ಘಟನೆ ಬಗ್ಗೆ ಮಾಹಿತಿ ಪಡೆದರು ಆರೋಪಿಗಳ ಪತ್ತೆಗೆ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದರು.ಗ್ರಾಮದ ಶ್ರೀ ಆಂಜನೇಯ ದೇವಸ್ಥಾನ ಮುಂಭಾಗದಲ್ಲಿ ಇಲಾಖೆ, ಗ್ರಾಪಂ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು, ಗ್ರಾಮಸ್ಥರೊಂದಿಗೆ ಜನಸಂಪರ್ಕ ಸಭೆ ನಡೆಸಿದರು. ಗ್ರಾಮಸ್ಥರ ಅವಹಾಲಗಳನ್ನು ಸ್ವೀಕರಿಸಿದರು.

ಅಪರಾಧಗಳನ್ನು ತಡೆಗಟ್ಟಲು ಸಾರ್ವಜನಿಕರು ವಹಿಸಬೇಕಾದ ಮುನ್ನಚರಿಕೆ ಕ್ರಮಗಳು, ಬಾಲ್ಯವಿವಾಹ, ಫೋಕ್ಲೋ ಕಾಯ್ದೆ, ಮಹಿಳೆ ಮೇಲಿನ ದೌರ್ಜನ್ಯ ರಕ್ಷಣಾ ಕಾಯ್ದೆ, ಸೈಬರ್ ಅಪರಾಧಗಳು, ಸಂಚಾರ ನಿಯಮಗಳು, ಮೈಕ್ರೋ ಫೈನಾನ್ಸ್ ಬಗ್ಗೆ, ಇಆರ್‌ಎಸ್‌ಎಸ್-112 ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿಸಿ ಟಿವಿ ಅಳವಡಿಸಬೇಕು. ಇದರಿಂದ ಅಪರಾಧಗಳನ್ನು ತಡೆಗಟ್ಟಲು, ಅಪರಾಧಿಗಳನ್ನು ಪತ್ತೆ ಹಚ್ಚಲು ತುಂಬಾ ಸಹಕಾರಿ ಆಗುತ್ತದೆ ಎಂದರು.ಸಭೆಯಲ್ಲಿ 3 ದಿನಗಳ ಹಿಂದೆ ಪ್ರಶಾಂತ್ ಎಂಬವರು ಮೊಬೈಲ್ ಕಳೆದುಕೊಂಡಿದ್ದು, ಸಿಇಐಆರ್ ಪೋರ್ಟಲ್ ಸಹಾಯದಿಂದ ಪತ್ತೆ ಮಾಡಿ, ಪ್ರಶಾಂತ ಅವರಿಗೆ ಮೊಬೈಲ್‌ ಹಸ್ತಾಂತರಿಸಿ, ಸಿಇಐಆರ್ ಪೋರ್ಟಲ್ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಎಸ್.ಬಸವರಾಜ, ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ, ಪಿಎಸ್‌ಐರವರಾದ ಪ್ರಭು ಡಿ. ಕೆಳಗಿನಮನಿ (ಕಾ.ಸು.), ಚಿದಾನಂದಪ್ಪ (ತನಿಖೆ) ಗ್ರಾಮಸ್ಥರು, ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.- - -

-27ಕೆಡಿವಿಜಿ44.ಜೆಪಿಜಿ:

ಮಲೇಬೆನ್ನೂರು ವ್ಯಾಪ್ತಿಯ ಕೊಕ್ಕನೂರಿನಲ್ಲಿ ಎಸ್‌ಪಿ ಉಮಾ ಪ್ರಶಾಂತ್ ಜನಸಂಪರ್ಕ ಸಭೆ ನಡೆಸಿದರು.