ಕನ್ನಡಪ್ರಭ ವಾರ್ತೆ ಹಿರಿಯೂರು

ಜ್ಞಾನಾರ್ಜನೆಗೆ ಶಿಕ್ಷಣ ಅಗತ್ಯವಾಗಿದ್ದು ಅದರ ಜೊತೆಗೆ ಉದ್ಯೋಗಾಧಾರಿತ ಕೋರ್ಸ್‌ಗಳನ್ನು ಅಂದರೆ ಪ್ಯಾರಾಮೆಡಿಕಲ್ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಗಳು ವ್ಯಾಸಂಗದ ಅವಧಿಯಲ್ಲಿ ಉತ್ತಮ ಫಲಿತಾಂಶ ತೆಗೆದುಕೊಂಡು ನಿಸ್ವಾರ್ಥ ಸೇವೆ ಸಲ್ಲಿಸಬೇಕು ಎಂದು ಬಸವರಾಜ ಎಜುಕೇಶನ್ ಟ್ರಸ್ಟ್‌ ಹಾಗೂ ಹಾಸ್ಪಿಟಲ್‌ನ ಕಾರ್ಯದರ್ಶಿಗಳಾದ ಸಚಿನ್ ಗೌಡ ಹೇಳಿದರು.

ನಗರದ ಬೈಪಾಸ್ ರಸ್ತೆಯಲ್ಲಿನ ಆಲೂರು ಕ್ರಾಸ್ ಸಮೀಪವಿರುವ ಶ್ರೀ ಬಸವರಾಜ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಅಂಡ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಪ್ಯಾರಾಮೆಡಿಕಲ್ ಕೋರ್ಸ್ ಮುಗಿದ ನಂತರ ವೈದ್ಯರಲ್ಲದಿದ್ದರೂ ಚಿಕಿತ್ಸೆ ನೀಡಿ ಜನರ ಜೀವ ಕಾಪಾಡುವಂತಹ ಪುಣ್ಯದ ಕೆಲಸ ಮಾಡಬಹುದು. ಸೇವೆ ಮಾಡುವ ವೃತ್ತಿ ಆಯ್ಕೆ ಮಾಡಿಕೊಂಡಿರುವ ನೀವು ಆಸಕ್ತಿಯಿಂದ ಅಭ್ಯಾಸ ಮಾಡಿ ನಿಮ್ಮ ಬದುಕು ಕಟ್ಟಿಕೊಳ್ಳುವ ಜೊತೆಗೆ ಸಾಕಷ್ಟು ಜನರ ಜೀವ ಉಳಿಸುವ ಕಾರ್ಯವನ್ನು ಮಾಡಬಹುದು. ಆದ್ದರಿಂದ ಸಮಯ ವ್ಯರ್ಥ ಮಾಡದೆ ಶ್ರಮಪಟ್ಟು ಓದಿ ತಾಳ್ಮೆಯಿಂದ ನಿಸ್ವಾರ್ಥ ಸೇವೆ ಮಾಡುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದರು.

ಸಂಸ್ಥೆಯ ಪ್ರಾಂಶುಪಾಲ ಸಂದೀಪ್ ಯಾದವ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಉದ್ಯೋಗ ಅರಸುವ ಕೋರ್ಸ್‌ಗಳತ್ತ ಗಮನಹರಿಸಬೇಕು. ಯಾವುದೇ ರೀತಿಯ ಶಿಕ್ಷಣವೇ ಆಗಲಿ, ಸಮಾಜದ ಸ್ವಾಸ್ತ್ಯ ವೃದ್ಧಿಸುವ ವ್ಯಕ್ತಿತ್ವ ಬೆಳೆಸಿಕೊಳ್ಳಿ. ವಿದ್ಯಾಭ್ಯಾಸದ ಸಮಯ ಅಮೂಲ್ಯವಾದುದಾಗಿದ್ದು ಈಗ ಸದ್ಭಳಕೆ ಮಾಡಿಕೊಂಡ ಒಂದೊಂದು ನಿಮಿಷವೂ ನಿಮ್ಮನ್ನು ಜೀವನದಲ್ಲಿ ಒಂದೊಂದೇ ಮೆಟ್ಟಿಲು ಯಶಸ್ಸಿನತ್ತ ಕರೆದೊಯ್ಯುತ್ತವೆ ಎಂದರು.


ಈ ವೇಳೆ ಮುಖ್ಯ ಶಿಕ್ಷಕರಾದ ಸ್ಪಂದನ ಬಿ.ಎಂ, ಸಂಸ್ಥೆಯ ಎಚ್ .ಆರ್.ಪ್ರಿಯಾಂಕ ಎಸ್, ಕಚೇರಿ ಮುಖ್ಯಸ್ಥೆ ಶ್ರೀಗೌರಿ, ಉಪನ್ಯಾಸಕರಾದ ಕೆ.ಲಿಖಿತ, ಎನ್.ಸಿಂಧು, ಎಂಜಿ ಭಾವನ, ಎಂಬಿ ಲಕ್ಷ್ಮಿ, ಸೌಂದರ್ಯ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.