ಪೌರಕಾರ್ಮಿಕರು ಡಾಕ್ಟರ್‌ಗಳಿದ್ದಂತೆ: ಸಚಿವ ವೈದ್ಯ

| Published : Mar 12 2024, 02:04 AM IST

ಸಾರಾಂಶ

ನಿಸ್ವಾರ್ಥ ಸೇವೆಯ ಮೂಲಕ ನಗರವನ್ನು ಸ್ವಚ್ಛವಾಗಿರಿಸುವ ಪೌರಕಾರ್ಮಿಕರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ.

ಕಾರವಾರ: ವೈದ್ಯರು ರೋಗ ಬಂದ ಮೇಲೆ ಚಿಕಿತ್ಸೆ ನೀಡಿದರೆ ಪೌರಕಾರ್ಮಿಕರು ಪರಿಸರವನ್ನು ಸ್ವಚ್ಛಗೊಳಿಸಿ, ಸಾರ್ವಜನಿಕರಿಗೆ ರೋಗಗಳು ಹರಡದಂತೆ ನೈರ್ಮಲ್ಯ ಕಾಪಾಡುವ ಡಾಕ್ಟರ್‌ಗಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ತಿಳಿಸಿದರು.

ಇಲ್ಲಿನ ರವೀಂದ್ರನಾಥ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಸೋಮವಾರ ಆಯೋಜಿಸಿದ ಸ್ವಚ್ಛತಾ ಕಾರ್ಮಿಕರ ಅರಿವು ಸಮಾಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಿಸ್ವಾರ್ಥ ಸೇವೆಯ ಮೂಲಕ ನಗರವನ್ನು ಸ್ವಚ್ಛವಾಗಿರಿಸುವ ಪೌರಕಾರ್ಮಿಕರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ. ಪೌರಕಾರ್ಮಿಕರು ಸಂತೋಷದಿಂದ ಇದ್ದರೆ ನಗರವು ಸ್ವಚ್ಛವಾಗಿರುತ್ತದೆ. ಯಾರೂ ಮಾಡದ ಕೆಲಸಗಳನ್ನು ಪೌರಕಾರ್ಮಿಕರು ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರಥಮಾದ್ಯತೆಯಲ್ಲಿ ಮನೆ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ ದಿನಗೂಲಿ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ 127 ಪೌರಕಾರ್ಮಿಕರನ್ನು ಪ್ರಥಮ ಹಂತದಲ್ಲಿ ಕಾಯಂ ನೌಕರರನ್ನಾಗಿ ನೇಮಕ ಮಾಡಲಾಗುತ್ತಿದ್ದು, ಬಾಕಿ ಉಳಿದಿರುವ 44 ಪೌರಕಾರ್ಮಿಕರನ್ನು ಶೀಘ್ರದಲ್ಲಿ ಕಾಯಂ ನೌಕಕರನ್ನಾಗಿ ನೇಮಕ ಮಾಡಲಾಗುತ್ತದೆ. ಇನ್ನೂ 88 ಪೌರಕಾರ್ಮಿಕರನ್ನು ಹಂತ ಹಂತವಾಗಿ ಕಾಯಂ ನೌಕರರನ್ನಾಗಿ ನೇಮಕ ಮಾಡಲಾಗುವುದು ಎಂದರು.

ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ, ಪೌರಕಾರ್ಮಿಕರ ಹಲವು ವರ್ಷಗಳ ಕನಸು ಇಂದು ನನಸಾಗುತ್ತಿದ್ದು, 127 ಪೌರಕಾರ್ಮಿಕರನ್ನು ಕಾಯಂ ನೌಕರರನ್ನಾಗಿ ನೇಮಕ ಮಾಡಲಾಗಿದೆ. ಅವರ ಸಮಸ್ಯೆಗಳಿಗೆ ಜಿಲ್ಲಾಡಳಿತ ಸೂಕ್ತವಾಗಿ ಸ್ಪಂದಿಸುವ ಜತೆಗೆ ಅವರಿಗೆ ಎಲ್ಲ ರೀತಿಯ ಸಹಕಾರ ಮತ್ತು ಮೂಲ ಸೌಕರ್ಯ ಒದಗಿಸಲಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳ 127 ಪೌರಕಾರ್ಮಿಕರಿಗೆ ಕಾಯಂ ನೇಮಕಾತಿ ಆದೇಶದ ಪತ್ರವನ್ನು ಸಚಿವರು ವಿತರಿಸಿದರು.

ಶಾಸಕ ಭೀಮಣ್ಣ ನಾಯ್ಕ, ಎಂಸಿಎ ಅಧ್ಯಕ್ಷ ಸತೀಶ ಸೈಲ್, ಜಿಪಂ ಸಿಇಒ ಈಶ್ವರಕುಮಾರ ಕಾಂದೂ, ಎಸ್‌ಪಿ ಎನ್. ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸ್ಟೇಲಾ ವರ್ಗಿಸ್, ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ಜಾಗೃತ ಸಮಿತಿಯ ನಾಮ ನಿರ್ದೇಶಿತ ಸದಸ್ಯರಾದ ಮಾಲ ಹುಲಸ್ವಾರ, ಹನುಮಂತ ತಳವಾರ, ರಮೇಶ್ ಬಾಬು ಬುದಾಲ್, ಶಿವ ಶಂಕರ, ನಾಗೇಶ ಹರಿಜನ, ಮಂಜೇಶ್ವರ ಇದ್ದರು. ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಮತ್ತು ಉತ್ತರ ಕನ್ನಡ ನಗರ ಸ್ಥಳೀಯ ಸಂಸ್ಥೆಗಳ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.