ಮಾನವನಿಂದಾದ ಪ್ರಕೃತಿ ನಾಶದಿಂದಲೇ ಹವಾಮಾನ ವೈಪರೀತ್ಯ: ಡಾ. ಮಲ್ಲಿಕಾರ್ಜುನ ಸ್ವಾಮಿಗಳು

| Published : Apr 20 2024, 01:03 AM IST

ಮಾನವನಿಂದಾದ ಪ್ರಕೃತಿ ನಾಶದಿಂದಲೇ ಹವಾಮಾನ ವೈಪರೀತ್ಯ: ಡಾ. ಮಲ್ಲಿಕಾರ್ಜುನ ಸ್ವಾಮಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಶಿಗ್ಗಾಂವಿ ತಾಲೂಕಿನ ಸದಾಶಿವಪೇಟೆಯ ವಿರಕ್ತಮಠದಲ್ಲಿ ಲಿಂ. ಶ್ರೀ ಗದಿಗೇಶ್ವರರ ೪೯೪ನೇ ಹಾಗೂ ಲಿಂ. ಶ್ರೀ ಬಸವರಾಜೇಂದ್ರ ಶಿವಯೋಗಿಗಳ ೪೧೯ನೇ ಪುಣ್ಯ ಸ್ಮರಣೋತ್ಸವ ನಡೆಯಿತು.

ಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ಮನುಷ್ಯ ಭೂ ತಾಯಿಯ ಒಡಲನ್ನು ಬಗೆದು ಪ್ರಕೃತಿ ಸಂಪತ್ತು ನಾಶ ಮಾಡಿ ಕಾಯಕ ಮರೆತು ಬಾಳುತ್ತಿರುವುದರಿಂದಲೇ ಹವಾಮಾನ ವೈಪರೀತ್ಯ ಕಾಣುವಂತಾಗಿದೆ ಎಂದು ಶಿವಮೊಗ್ಗ ಮುರುಘರಾಜೇಂದ್ರ ಸಂಸ್ಥಾನಮಠದ ಡಾ. ಮಲ್ಲಿಕಾರ್ಜುನ ಸ್ವಾಮಿಗಳು ಹೇಳಿದರು.

ತಾಲೂಕಿನ ಸದಾಶಿವಪೇಟೆಯ ವಿರಕ್ತಮಠದ ಲಿಂ. ಶ್ರೀ ಗದಿಗೇಶ್ವರರ ೪೯೪ನೇ ಹಾಗೂ ಲಿಂ. ಶ್ರೀ ಬಸವರಾಜೇಂದ್ರ ಶಿವಯೋಗಿಗಳ ೪೧೯ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ನಡೆದ ಶರಣ ತತ್ವ ಚಿಂತನಾಗೋಷ್ಠಿಯಲ್ಲಿ ಆಶೀರ್ವಚನ ನೀಡಿದರು.

ಭೂ ತಾಯಿಗೆ ೨೦ ಕೆಜಿ ಬೀಜ ಬೀತ್ತಿದರೆ, ೨೦ ಕ್ವಿಂಟಲ್ ಫಸಲು ನೀಡುವಳು. ಆದರೆ, ಮನುಷ್ಯ ಪರಿಸರವನ್ನು ನಾಶ ಮಾಡುವಮೂಲಕ ಸ್ವಾರ್ಥ ಮೆರೆಯುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತ ಪಡಿಸಿದರು.

ಮಠಾಧೀಶರು ಸನಾತನ, ಹಿಂದು ಸಂಸ್ಕೃತಿ, ಸಂಸ್ಕಾರ, ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಮೂಲಕ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುತ್ತಿದ್ದಾರೆ. ಆದರೆ ಭಕ್ತಸಮೂಹ ಮಠ ಮಾನ್ಯಗಳಿಂದ ವಿಮುಖರಾಗುತ್ತಿರುವುದು ವಿಷಾದದ ಸಂಗತಿ. ಲಿಂ. ಗದಿಗೇಶ್ವರ ಶ್ರೀಗಳು ಕೈಲಾಸಕ್ಕೆ ಹೋಗುವಾಗ ಏನನ್ನು ತೆಗೆದುಕೋಂಡು ಹೋಗಿಲ್ಲ. ಆದರೆ, ಮಠದ ಪರಂಪರೆಯನ್ನು ಸಮಾಜದಲ್ಲಿ ಬಿತ್ತಿ ಹೋಗಿದ್ದಾರೆ. ಅದರ ಫಸಲನ್ನು ಉಳಿಸಿಕೊಂಡು ಬರಬೇಕಾದ ಜವಾಬ್ದಾರಿ ಸಮಸ್ತ ಭಕ್ತ ಸಮೂಹದ ಮೇಲಿದೆ ಎಂದು ಹೇಳಿದರು.

ಹತ್ತಿಮತ್ತೂರ ವಿರಕ್ತಮಠದ ಶ್ರೀ ನಿಜಗುಣ ಶಿವಯೋಗಿಗಳು ಮಾತನಾಡ, ಜ್ಞಾನ ದಾಸೋಹ, ಅನ್ನ ದಾಸೋಹ ಮುಂದುವರಿಸಿಕೊಂಡು ಬರುವ ಮೂಲಕ ಸಮಾಜವನ್ನು ಸರಿದಾರಿಗೆ ಕೊಂಡೊಯ್ಯುವ ಕಲಸವನ್ನು ಶಿವಶರಣ, ಸಂತ, ಮಠಾಧೀಶರು ಮಾಡಿಕೊಂಡು ಬರುತ್ತಿದ್ದಾರೆ. ಹುಟ್ಟು-ಸಾವುಗಳ ಮಧ್ಯ ಬದುಕನ್ನು ಸಾರ್ಥಕ ಪಡೆಸಿಕೊಂಡವರು ಲಿಂ. ಗದಿಗೇಶ್ವರ ಶ್ರೀಗಳಾದರೆ, ಪ್ರಸ್ತುತ ಪೀಠಾಧಿಪತಿಗಳು ಕಠೋರ ಹೃದಯದವರಾದರೂ ಹೃದಯ ವೈಶಾಲ್ಯತೆ ಹೊಂದಿದವರಾಗಿದ್ದಾರೆ ಎಂದು ಹೇಳಿದರು.

ದೇಸಾಯಿಮಠದ ಶ್ರೀ ಮಹಾಂತಸ್ವಾಮಿಗಳು ಮಾತನಾಡಿದರು. ಚನಬಸಯ್ಯ ಪ್ರಭಯ್ಯನವರಮಠ ಪ್ರಾಸ್ತಾವಿಕ ನುಡಿ ನಮನ ಸಲ್ಲಿಸಿದರು. ಸಭೆಯಲ್ಲಿ ಪಿಯುನಲ್ಲಿ ಹೆಚ್ಚು ಅಂಕ ಪಡೆದು ಪಾಸಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸುರೇಶ ಗವಾಯಿ ಹಾಗು ಶಿವಯ್ಯ ಇಟಗಿಮಠ ಅವರಿಂದ ಸಂಗೀತ ಸೇವೆ ನಡೆಯಿತು.

ಶ್ರೀ ಮಠದ ಪೀಠಾಧಿಪತಿ ಗದಿಗೇಶ್ವರ ಸ್ವಾಮೀಜಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸವಣೂರ ಅಡವಿಸ್ವಾಮಿಮಠದ ಶ್ರೀ ಕುಮಾರ ಮಹಾಸ್ವಾಮಜಿ, ಶಿಗ್ಗಾಂವಿ ಶ್ರೀ ಸಂಗನಬಸವ ಸ್ವಾಮೀಜಿ ಮುಖಂಡರಾದ ಸಂಗಪ್ಪ ವಡವಿ, ಚಂದ್ರಶೇಖರ ಛಬ್ಬಿಮಠ, ಶಿವಕುಮಾರ ಅಡವಿಸ್ವಾಮಿಮಠ, ಗದಿಗೆಪ್ಪ ಗಂಗೂರ, ಎ.ಸಿ. ಪಾಟೀಲ, ವೀರಣ್ಣ ನೇಕಾರ ಗಿರಿರಾಜ್ ದೇಸಾಯಿ ಸೇರಿದಂತೆ ಇತರರು ಇದ್ದರು.ದುಂಡಪ್ಪ ಮಾಸನಕಟ್ಟಿ ನಿರೂಪಿಸಿದರು.