ಸಾರಾಂಶ
ಹೊಸಪೇಟೆ: ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡನೀಯ. ಲವ್ ಜಿಹಾದ್‌ಗಾಗಿ ಈ ಹತ್ಯೆ ಮಾಡಲಾಗಿದೆ. ಆರೋಪಿಗೆ ಶಿಕ್ಷೆ ವಿಧಿಸಬೇಕು ಎಂದು ನಗರದ ತಹಸೀಲ್ದಾರ ಕಚೇರಿ ಎದುರು ಶುಕ್ರವಾರ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎಂಸಿಎ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಫಯಾಜ್ ಎಂಬಾತ ಆಕೆಯನ್ನುಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಈ ಪ್ರೀತಿಯನ್ನು ನಿರಾಕರಿಸಿದಕ್ಕಾಗಿ ವಿದ್ಯಾರ್ಥಿನಿಗೆ ಚಾಕುವಿನಿಂದ ಬರ್ಬರವಾಗಿ ಹತ್ಯೆಗೈದಿದ್ದಾನೆ. ಆರೋಪಿ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಜ್ಞಾನದ ದೇಗುಲವಾದ ಕಾಲೇಜು ಆವರಣದಲ್ಲೇ ಹಾಡಹಗಲೇ ಭೀಕರ ಹತ್ಯೆ ಹೆದರಿಕೆ ಹುಟ್ಟುವಂತೆ ಮಾಡಿದೆ. ಈ ಘಟನೆ ನಿಜಕ್ಕೂ ವಿದ್ಯಾರ್ಥಿ ಸಮುದಾಯದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಈ ಕೃತ್ಯ ಎಸಗಿದ ಆರೋಪಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಎಬಿಪಿ ರಾಜ್ಯದ ಹೋರಾಟಕ್ಕೆ ಕರೆ ನೀಡಿದ ಈ ಹಿನ್ನೆಲೆಯಲ್ಲಿ ಹೊಸಪೇಟೆ ನಗರ ಶಾಖೆಯಿಂದ ಪ್ರತಿಭಟನೆ ನಡೆಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಂಕರ್ ಆನಂದ ಸಿಂಗ್ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.ಎಬಿವಿಪಿಯ ನಗರ ಕಾರ್ಯದರ್ಶಿ ಪ್ರದೀಪಕುಮಾರ್, ಪದಾಧಿಕಾರಿಗಳಾದ ವಿನೀತಕುಮಾರ್, ವೆಂಕಟ್ ಸಾಯಿ, ವಿಶ್ವ, ನವೀನ್, ವಿಜಯ್ ಕುಮಾರ್, ಕಾರ್ತಿಕ್ ಮತ್ತಿತರರಿದ್ದರು.