ಬಾಳೆಹೊನ್ನೂರುಮುಸಲ್ಮಾನ್ ಬಾಂಧವರು ಪವಿತ್ರ ರಂಜಾನ್ ಸಂದರ್ಭದಲ್ಲಿ ಆಚರಿಸುವ ಸೌಹಾರ್ದ ಇಫ್ತಾರ್ ಕೂಟಗಳಿಂದ ಸಮಾಜದಲ್ಲಿ ಶಾಂತಿ, ಸಾಮರಸ್ಯ ನೆಲೆಸಲು ಸಾಧ್ಯ ಎಂದು ಚಿಕ್ಕಮಗಳೂರಿನ ವಿಶ್ವಧರ್ಮ ಪೀಠದ ಶ್ರೀ ಜಯ ಬಸವಾನಂದ ಸ್ವಾಮೀಜಿ ಹೇಳಿದರು.

ಮಸೀದಿಕೆರೆ ಅಲ್ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ರಂಜಾನ್ ಅಂಗವಾಗಿ ನಡೆದ ಸೌಹಾರ್ದ ಇಫ್ತಾರ್ ಸಂಗಮ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಮುಸಲ್ಮಾನ್ ಬಾಂಧವರು ಪವಿತ್ರ ರಂಜಾನ್ ಸಂದರ್ಭದಲ್ಲಿ ಆಚರಿಸುವ ಸೌಹಾರ್ದ ಇಫ್ತಾರ್ ಕೂಟಗಳಿಂದ ಸಮಾಜದಲ್ಲಿ ಶಾಂತಿ, ಸಾಮರಸ್ಯ ನೆಲೆಸಲು ಸಾಧ್ಯ ಎಂದು ಚಿಕ್ಕಮಗಳೂರಿನ ವಿಶ್ವಧರ್ಮ ಪೀಠದ ಶ್ರೀ ಜಯ ಬಸವಾನಂದ ಸ್ವಾಮೀಜಿ ಹೇಳಿದರು.ಮಸೀದಿಕೆರೆ ಅಲ್ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ರಂಜಾನ್ ಅಂಗವಾಗಿ ನಡೆದ ಸೌಹಾರ್ದ ಇಫ್ತಾರ್ ಸಂಗಮದಲ್ಲಿ ಮಾತನಾಡಿದರು. ಮುಸಲ್ಮಾನ್ ಬಾಂಧವರಿಗೆ ರಂಜಾನ್ ಮಾಸ ಅತ್ಯಂತ ಪವಿತ್ರ. ಈ ಸಂದರ್ಭದಲ್ಲಿ ದಾನ, ಧರ್ಮ, ಸೌಹಾರ್ದತೆ, ಶಾಂತಿ, ಪ್ರೀತಿ ಬೆಳೆಸುವುದು ಅಗತ್ಯ. ಇಂತಹ ಸಂದರ್ಭದಲ್ಲಿ ಎಲ್ಲಾ ಜಾತಿ, ಧರ್ಮದವರನ್ನು ಒಗ್ಗೂಡಿಸಿ ಇಫ್ತಾರ್ ಕೂಟ ಆಯೋಜಿಸಿರುವುದು ಸಮಂಜಸ ಮತ್ತು ಶ್ಲಾಘನೀಯ ಎಂದರು.

ಸಮಾಜದಲ್ಲಿ ಎಲ್ಲಾ ಧರ್ಮ, ಜಾತಿಗಳು ಪರಸ್ಪರ ಸಾಮರಸ್ಯ, ಸೌಹಾರ್ದತೆಯಿಂದ ಬದುಕಿದಾಗ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ ಸಾಧ್ಯವಿದೆ. ಈ ನಿಟ್ಟಿನಲ್ಲಿ ಶಾಂತಿ ಕಾಪಾಡಲು ಇಂತಹ ಇಫ್ತಾರ್ ಕೂಟಗಳು ಪೂರಕವಾಗಿವೆ ಎಂದರು.ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ, ಎಲ್ಲಾ ಜಾತಿ, ಧರ್ಮದವರಿಗೂ ಅವರದ್ದೇ ಆದ ಆಚರಣೆಗಳು, ವಿವಿಧ ಹಬ್ಬಗಳಿದ್ದು, ಅವುಗಳನ್ನು ಎಲ್ಲರೊಂದಿಗೆ ಸೇರಿ ಆಚರಿಸಿದಾಗ ಮಾತ್ರ ಆ ಹಬ್ಬಗಳಿಗೆ ವಿಶೇಷ ಅರ್ಥ ದೊರೆಯಲು ಸಾಧ್ಯವಿದೆ. ಪರಸ್ಪರ ಒಗ್ಗೂಡಿ ಆಚರಿಸುವ ಎಲ್ಲಾ ಧರ್ಮದವರ ಹಬ್ಬಗಳು ಮುಂದಿನ ಪೀಳಿಗೆಗೆ, ಸಮಾಜಕ್ಕೆ ಒಂದು ವಿಶೇಷ ಅರ್ಥ ನೀಡಲಿದೆ.ಭಾರತ ಸರ್ವಧರ್ಮ ನಾಡಾಗಿದ್ದು, ಇಲ್ಲಿ ಎಲ್ಲ ಧರ್ಮದವರಿಗೂ ವಿಶೇಷ ಗೌರವವಿದೆ ಎಂದರು.

ಅಲ್ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಟಿ.ಎಂ.ನಾಸಿರ್, ಮಂಜಿಲ್ ಅಕಾಡೆಮಿ ಸ್ಥಾಪಕ ಸಯ್ಯೀದ್ ಹಾಮೀಂ ತಂಙಳ್, ಮಸೀದಿ ಖತೀಬ್ ಝಬೈರ್ ಫಾಳಿಲಿ ಕಾಮಿಲ್ ಸಖಾಫಿ, ಇಶ್ಕ್ ವುಮೆನ್ ಕಾಲೇಜ್ ಪ್ರಾಚಾರ್ಯ ಸಫ್ವಾನ್ ಸಖಾಫಿ, ಇಫ್ತಾರ್ ಸಂಗಮದ ಆಯೋಜಕ ಇಬ್ರಾಹಿಂ ಮಸ್ಕತ್, ಸಿದ್ದಿಕ್, ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ್, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಅರುಣೇಶ್, ಬಿ.ಕೆ.ಮಧುಸೂದನ್, ಎಂ.ಎಸ್.ಜಯಪ್ರಕಾಶ್, ಇಬ್ರಾಹಿಂ ಶಾಫಿ, ವಿನ್ಸಿ ಲೋಬೋ, ಮಹಮ್ಮದ್ ಹನೀಫ್, ಬಶೀರ್ ಇಂಪಾಲ್, ಸೈಯದ್ ಆಲಿ ಬಾವು, ಓ.ಡಿ.ಸ್ಟೀಫನ್, ಕೌಶಿಕ್ ಪಟೇಲ್ ಮತ್ತಿತರರು ಹಾಜರಿದ್ದರು. ೧೦ಬಿಹೆಚ್‌ಆರ್ ೩:

ಬಾಳೆಹೊನ್ನೂರಿನ ಮಸೀದಿಕೆರೆಯ ಅಲ್ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ರಂಜಾನ್ ಅಂಗವಾಗಿ ಆಯೋಜಿಸಿದ್ದ ಸೌಹಾರ್ದ ಇಫ್ತಾರ್ ಸಂಗಮ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರಿನ ವಿಶ್ವಧರ್ಮ ಪೀಠದ ಶ್ರೀ ಜಯ ಬಸವಾನಂದ ಸ್ವಾಮೀಜಿ ಮಾತನಾಡಿದರು.