ಸಾರಾಂಶ
ಟನ್ ಕಬ್ಬಿಗೆ 3500 ರು. ನೀಡುವಂತೆ ಆಗ್ರಹಿಸಿ ಉತ್ತರ ಕರ್ನಾಟಕದ ರೈತರು ಬೀದಿಗಿಳಿದು ತೀವ್ರ ಸ್ವರೂಪದ ಹೋರಾಟ ನಡೆಸುತ್ತಿರುವಾಗಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತ ಮುಖಂಡರ ಪ್ರತ್ಯೇಕ ಸಭೆ ಕರೆದಿದ್ದಾರೆ.
ಬೆಂಗಳೂರು : ಟನ್ ಕಬ್ಬಿಗೆ 3500 ರು. ನೀಡುವಂತೆ ಆಗ್ರಹಿಸಿ ಉತ್ತರ ಕರ್ನಾಟಕದ ರೈತರು ಬೀದಿಗಿಳಿದು ತೀವ್ರ ಸ್ವರೂಪದ ಹೋರಾಟ ನಡೆಸುತ್ತಿರುವಾಗಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತ ಮುಖಂಡರ ಪ್ರತ್ಯೇಕ ಸಭೆ ಕರೆದಿದ್ದಾರೆ.
ಈ ಸಭೆಯಲ್ಲಿ ಕಗ್ಗಂಟಿಗೆ ಪರಿಹಾರ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.‘ಕಬ್ಬು ಎಫ್ಆರ್‌ಪಿ (ನ್ಯಾಯ ಮತ್ತು ಮೌಲ್ಯವರ್ಧಿತ ಬೆಲೆ) ಬೆಲೆ ನಿಗದಿ ಮಾಡಿರುವುದು ಕೇಂದ್ರ ಸರ್ಕಾರ. ಕೇಂದ್ರ ಬಿಜೆಪಿ ಸರ್ಕಾರ ರಾಜ್ಯ ರೈತರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿದ್ದು, ರೈತರ ಸಮಸ್ಯೆ ಬಗೆಹರಿಸಲು ಶುಕ್ರವಾರ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗುವುದು’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ತಕ್ಷಣ ಹೋಗಿ ಚರ್ಚೆ ನಡೆಸುತ್ತೇನೆ
ಜತೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಸಮಸ್ಯೆ ಹಾಗೂ ಎಫ್‌ಆರ್‌ಪಿ ನಿಗದಿ ಬಗ್ಗೆ ಚರ್ಚೆಗೆ ಅವಕಾಶ ನೀಡಿದರೆ ತಕ್ಷಣ ಹೋಗಿ ಚರ್ಚೆ ನಡೆಸುತ್ತೇನೆ ಎಂದೂ ಅವರು ಭರವಸೆ ನೀಡಿದ್ದಾರೆ. ಭೇಟಿಗೆ ಅನುಮತಿ ಕೋರಿ ಪ್ರಧಾನಿಗೆ ಪತ್ರವನ್ನೂ ಬರೆದಿದ್ದಾರೆ.ರಾಜ್ಯದಲ್ಲಿ ಪ್ರತಿ ಟನ್ ಕಬ್ಬಿಗೆ ಕಟಾವು, ಸಾಗಣೆ ವೆಚ್ಚ ಹೊರತುಪಡಿಸಿ 3,500 ರು. ನಿಗದಿ ಮಾಡಬೇಕು ಎಂದು ರೈತರು ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು 3 ಗಂಟೆ ಕಾಲ ವಿಸ್ತೃತ ಚರ್ಚೆ ನಡೆಯಿತು.ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರವು ಮೇ 6 ರಂದು ಕಬ್ಬಿನ ಎಫ್‌ಆರ್‌ಪಿ ನಿಗದಿ ಮಾಡಿದ್ದು, ಶೇ.10.25 ರಷ್ಟು ರಿಕವರಿ ಇರುವ ಪ್ರತಿ ಟನ್ ಕಬ್ಬಿಗೆ ಕಟಾವು ಮತ್ತು ಸಾಗಣೆ ವೆಚ್ಚ ಸೇರಿ 3,550 ರು. ನಿಗದಿಯಾಗಿದೆ. ಈ ಮಾನದಂಡದ ಪ್ರಕಾರವೇ ರಾಜ್ಯದಲ್ಲಿ ರೈತರಿಗೆ ಕಬ್ಬಿನ ಬೆಲೆ ನೀಡಲಾಗುತ್ತಿದೆ ಎಂದು ಸಮರ್ಥಿಸಿಕೊಂಡದರು.
ಮಹಾರಾಷ್ಟ್ರ ಮಾದರಿಗೆ ಬೇಡಿಕೆ:
ವಾಸ್ತವವಾಗಿ ಮಹಾರಾಷ್ಟ್ರದಲ್ಲಿ ಪ್ರತಿ ಟನ್‌ಗೆ 3,630 ರು. ನೀಡಲಾಗುತ್ತಿದೆ. ಇದೇ ಪ್ರಕಾರ ನೀಡಿ ಎಂಬುದು ಬಿಜೆಪಿಯವರ ವಾದ. ಮಹಾರಾಷ್ಟ್ರದಲ್ಲಿ ಕಬ್ಬಿನ ರಿಕವರಿ ದರ ಶೇ.13 ರಷ್ಟು ಇರುತ್ತದೆ. ಜತೆಗೆ 3,639 ರು. ಸಾಗಣೆ ಮತ್ತು ಕಟಾವು ವೆಚ್ಚ ಸೇರಿ ನೀಡಲಾಗುತ್ತದೆ. ರಾಜ್ಯದಲ್ಲಿ ಬೆಳಗಾವಿ ವ್ಯಾಪ್ತಿಯಲ್ಲಿ ಸಾಗಣೆ ಮತ್ತು ಕಟಾವು ವೆಚ್ಚವೇ ಪ್ರತಿ ಟನ್‌ಗೆ 800-900 ರು. ನೀಡಲಾಗುತ್ತದೆ. ಹೀಗಾಗಿ ಪ್ರತಿ ಟನ್‌ಗೆ ಸುಮಾರು 4,000 ರು.ಗಳಷ್ಟು ಪಾವತಿಯಾಗುತ್ತಿದೆ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.ಸಕ್ಕರೆ ಕಾರ್ಖಾನೆಗಳು ಅಷ್ಟು ಹಣ ನೀಡುತ್ತಿಲ್ಲ ಎಂಬುದೇ ಈಗ ವಿವಾದ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಈ ಬಗ್ಗೆ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಚರ್ಚಿಸಲಾಗುವುದು. ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು’ ಎಂದರು.
ರೈತರೊಂದಿಗೆ ಪ್ರತ್ಯೇಕ ಸಭೆ:
ಶುಕ್ರವಾರ ಮಧ್ಯಾಹ್ನ ರೈತರೊಂದಿಗೆ ಪ್ರತ್ಯೇಕ ಸಭೆ ನಡೆಸುತ್ತೇನೆ. ಎಫ್‌ಆರ್‌ಪಿ ದರವನ್ನು ಕೇಂದ್ರವೇ ನಿಗದಿ ಮಾಡಿದೆ. ಆ ದರ ರೈತರಿಗೆ ಲಭಿಸುವಂತೆ ನೋಡಿಕೊಳ್ಳುವುದು, ರೈತರಿಗೆ ತೂಕ, ಬೆಲೆ, ಹಾಗೂ ನಿಗದಿತ ಅವಧಿಯಲ್ಲಿ ಪಾವತಿ ಇತ್ಯಾದಿಗಳನ್ನು ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ ಹಾಗೂ ಕಬ್ಬು ನಿಯಂತ್ರಣಕ್ಕೆ ಸಂಬಂಧಪಟ್ಟ ಕಾಯ್ದೆಯಲ್ಲೂ ಸ್ಪಷ್ಟವಾಗಿ ಪ್ರಸ್ತಾಪಿಸಲಾಗಿದೆ. ಈ ಬಗ್ಗೆ ರೈತರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲು ಕೇಂದ್ರಕ್ಕೆ ಒತ್ತಾಯಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.ರಾಜ್ಯದಿಂದ ಸಲಹಾ
ದರ ನಿಗದಿ ಇಲ್ಲ: ಸಿಎಂಎಫ್ಆರ್‌ಪಿ ಜತೆಗೆ ರಾಜ್ಯ ಸಲಹಾ ದರ (ಎಸ್‌ಎಪಿ) ನಿಗದಿ ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲ. 2013-14ರಲ್ಲಿ ನಾನೇ ಒಂದು ಬಾರಿಗೆ ಸೀಮಿತವಾಗಿ ರಾಜ್ಯದಿಂದ ಪ್ರತಿ ಟನ್‌ಗೆ ಹೆಚ್ಚುವರಿಯಾಗಿ ಹಣ ನೀಡಿದ್ದೆ. ಆದರೆ ಪ್ರತಿ ವರ್ಷ ನೀಡಲು ನಿಯಮವಿಲ್ಲ. ಬಸವರಾಜ ಬೊಮ್ಮಾಯಿ ಅವರು ಚುನಾವಣೆಗಾಗಿ ಪ್ರತಿ ಟನ್‌ಗೆ 150 ರು. ಘೋಷಿಸಿದರೂ ಅದನ್ನು ನೀಡಲಿಲ್ಲ. ಈಗ ರೈತರಿಗೆ ಸಹಾಯ ಮಾಡುವ ಬಗ್ಗೆ ಶುಕ್ರವಾರ ನಡೆಯಲಿರುವ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು.
ಕೇಂದ್ರದಿಂದ ತೀವ್ರ ಅನ್ಯಾಯ:
ಸಕ್ಕರೆ ಮೇಲಿನ ನಿಯಂತ್ರಣವನ್ನು ಅಗತ್ಯವಸ್ತುಗಳ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರ ಹೊಂದಿರುತ್ತದೆ. ಹಿಂದೆ ಯುಪಿಎ ಸರ್ಕಾರದ ಅವಧಿಯಿಂದಲೂ 2017-18 ರವರೆಗೆ ರಿಕವರಿ ಪ್ರತಿ ಕ್ವಿಂಟಲ್‌ಗೆ ಶೇ. 9.5 ರಷ್ಟು ನಿಗದಿಪಡಿಸಲಾಗುತ್ತಿತ್ತು. 2018-19 ನಿಂದ 2021-22 ರವರೆಗೆ ಅದನ್ನು ಶೇ.10ಕ್ಕೆ ಹೆಚ್ಚಿಸಲಾಯಿತು. 2022-23 ರಿಂದ ಈಚೆಗೆ ಎಫ್.ಆರ್.ಪಿ.ಯನ್ನು ಶೇ.10.25ಕ್ಕೆ ಏರಿಕೆ ಮಾಡಲಾಗಿದೆ. ಈ ವಿಚಾರದಲ್ಲೂ ನಮ್ಮ ರೈತರಿಗೆ ಅನ್ಯಾಯ ಮಾಡಲಾಗಿದೆ.
ಇನ್ನು ಸಕ್ಕರೆಗೆ 2019 ರಲ್ಲಿ ಪ್ರತಿ ಕೆಜಿಗೆ ನಿಗದಿ ಮಾಡಿರುವ 31 ರು. ಎಂಎಸ್‌ಪಿ ಈವರೆಗೆ ಪರಿಷ್ಕರಣೆ ಮಾಡಿಲ್ಲ. ಕಳೆದ ಕೆಲ ವರ್ಷಗಳಿಂದ ಕೇಂದ್ರ ಸರ್ಕಾರ ಸಕ್ಕರೆ ರಫ್ತು ನಿಲ್ಲಿಸಿದೆ. ಕಳೆದ ವರ್ಷ ಇಡೀ ದೇಶಕ್ಕೆ ಕೇವಲ 10 ಲಕ್ಷ ಮೆಟ್ರಿಕ್ ಟನ್ ರಫ್ತು ಮಾಡಲು ಮಾತ್ರ ಅವಕಾಶ ನೀಡಲಾಗಿತ್ತು. ಕರ್ನಾಟಕವೊಂದರಲ್ಲೆ 41 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗಿತ್ತು. ಈ ಕಾರಣದಿಂದಲೂ ರೈತರಿಗೆ ಸಮಸ್ಯೆಯಾಗುತ್ತಿದೆ.ಇದಷ್ಟೇ ಅಲ್ಲದೆ, ಎಥೆನಾಲ್ ವಿಚಾರದಲ್ಲೂ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ಕರ್ನಾಟಕದಲ್ಲಿ 270 ಕೋಟಿ ಲೀಟರ್ ಉತ್ಪಾದನಾ ಸಾಮರ್ಥ್ಯ ಇದ್ದರೂ 2024-25 ರಲ್ಲಿ 47 ಕೋಟಿ ಲೀಟರ್‌ಗಳನ್ನು (ಶೇ.17) ತೈಲ ಕಂಪನಿಗಳಿಗೆ ಖರೀದಿ ಮಾಡಲು ಹಂಚಿಕೆ ಮಾಡಲಾಗಿದೆ. ಅದೇ ಗುಜರಾತ್‌ನಲ್ಲಿ ಉತ್ಪಾದನೆಯಾಗುವ ಶೇ.75 ರಷ್ಟು ಎಥೆನಾಲ್ ತೈಲ ಕಂಪೆನಿಗಳಿಗೆ ಖರೀದಿಸಲು ಸೂಚಿಸಿದೆ. ಈ ಅನ್ಯಾಯವನ್ನು ರಾಜ್ಯ ಬಿಜೆಪಿ ಸಂಸದರು, ಕೇಂದ್ರ ಸಚಿವರು ಪ್ರಶ್ನಿಸಬೇಕಲ್ಲವೇ? ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಪ್ರಧಾನಿ ಮೋದಿ ಅವರು ಭೇಟಿಗೆ ಅವಕಾಶ ನೀಡಿದರೆ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು. ರಾಜ್ಯದ ರೈತರ ಪರ ನ್ಯಾಯ ಕೇಳಲಾಗುವುದು ಎಂದರು.
;Resize=(690,390))
;Resize=(128,128))
;Resize=(128,128))
;Resize=(128,128))