ಹೆರಿಗೆಗೆ ಅನಗತ್ಯ ಶಸ್ತ್ರಚಿಕಿತ್ಸೆ: ಕಳವಳ

| Published : Nov 07 2025, 01:15 AM IST

ಸಾರಾಂಶ

ಕೋಲಾರ ಜಿಲ್ಲೆಯಲ್ಲಿ ಒಟ್ಟು ಹೆರಿಗೆಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.೫೬ರ ಸಿ-ಸೆಕ್ಷನ್‌ಗಳು ಆಗಿವೆ. ಇದು ಅತ್ಯಂತ ಆತಂಕಕಾರಿ. ವಿಶೇಷವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಈ ಪ್ರಮಾಣ ಶೇ.೭೩ರಷ್ಟಿರುವುದು ಕಳವಳಕಾರಿ. ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.೪೨ರಷ್ಟಿದೆ. ಕೋಲಾರ ತಾಲ್ಲೂಕು ಶೇ.೬೬ರಷ್ಟು ಅತಿ ಹೆಚ್ಚು ಸಿ-ಸೆಕ್ಷನ್ ಪ್ರಮಾಣ ದಾಖಲಿಸಿದೆ.

ಕನ್ನಡಪ್ರಭ ವಾರ್ತೆ ಕೋಲಾರ ತಾಯಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮಗಳಡಿ ಜಿಲ್ಲೆಯಲ್ಲಿ ಸಂಪೂರ್ಣ ಲಸಿಕಾಕರಣ ಶೇ.೯೫ರಷ್ಟು ಸಾಧನೆಯೊಂದಿಗೆ ಉತ್ತಮ ಪ್ರಗತಿ ಕಂಡುಬಂದಿದ್ದರೂ, ಒಟ್ಟು ಹೆರಿಗೆಗಳಲ್ಲಿ ಸಿ-ಸೆಕ್ಷನ್ (ಶಸ್ರಚಿಕಿತ್ಸೆ ಮೂಲಕ ಹೆರಿಗೆ) ಪ್ರಮಾಣ ಶೇ.೫೬ಕ್ಕೆ ಏರಿರುವುದು ಕಳವಳಕಾರಿ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಎಂದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮಿಷನ್‌ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆಯು ಮಂಡಿಸಿದ ವರದಿ ಪರಿಶೀಲಿಸಿ ಮಾತನಾಡಿದರು.ಆರೋಗ್ಯ ಸೂಚ್ಯಂಕಗಳಲ್ಲಿ ಪ್ರಗತಿಜಿಲ್ಲೆಯಲ್ಲಿ ಒಟ್ಟು ೧೭.೫೪ ಲಕ್ಷ ಅಂದಾಜು ಜನಸಂಖ್ಯೆ ಇದ್ದು, ಪ್ರಸ್ತುತ ೧೦ "ನಮ್ಮ ಕ್ಲಿನಿಕ್ "ಗಳು ಸೇರಿದಂತೆ ೭೮ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಏಪ್ರಿಲ್‌ನಿಂದ ಸೆಪ್ಟೆಂಬರ್ ೨೦೨೫ರ ಅವಧಿಯಲ್ಲಿ ಗರ್ಭಿಣಿಯರ ನೋಂದಣಿ ಶೇ.೯೨ರಷ್ಟಾಗಿದೆ. ಸಂಪೂರ್ಣ ನಾಲ್ಕು ಎಎನ್‌ಸಿ ತಪಾಸಣೆ ಶೇ.೯೧ರಷ್ಟು ತಾಯಂದಿರು ಪಡೆದಿದ್ದಾರೆ. ಜಿಲ್ಲೆಯಲ್ಲಿ ಸಂಪೂರ್ಣ ಲಸಿಕಾಕರಣದ ಗುರಿ ಶೇ.೯೫ರಷ್ಟು ಸಾಧನೆಯಾಗಿದೆ. ಶಿಶು ನೋಂದಣಿಯಲ್ಲಿ ಕೋಲಾರ ತಾಲ್ಲೂಕು ಶೇ.೧೦೭ರ? ಸಾಧನೆ ಮಾಡಿರುವುದು ಶ್ಲಾಘನೀಯ ಎಂದರು.

ಜಿಲ್ಲೆಯ ಶಿಶು ಮರಣ ದರ ಪ್ರತಿ ೧,೦೦೦ ಜೀವಂತ ಜನನಗಳಿಗೆ ೧೦ರಷ್ಟಿದ್ದು, ತಾಯಂದಿರ ಮರಣ ದರ ಪ್ರತಿ ೧,೦೦,೦೦೦ ಜೀವಂತ ಜನನಗಳಿಗೆ ೨೪ರಷ್ಟಿದೆ. ಈ ಅಂಕಿಅಂಶಗಳನ್ನು ಮತ್ತು ಕಡಿಮೆ ಮಾಡಲು ಕ್ರಮವಹಿಸಲು ಅವರು ಸೂಚಿಸಿದರು.

ಸಿ-ಸೆಕ್ಷನ್ ಹೆಚ್ಚಳಕ್ಕೆ ಅಸಮಾಧಾನಜಿಲ್ಲೆಯಲ್ಲಿ ಒಟ್ಟು ಹೆರಿಗೆಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.೫೬ರ ಸಿ-ಸೆಕ್ಷನ್‌ಗಳು ಆಗಿವೆ. ಇದು ಅತ್ಯಂತ ಆತಂಕಕಾರಿ. ವಿಶೇಷವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಈ ಪ್ರಮಾಣ ಶೇ.೭೩ರಷ್ಟಿರುವುದು ಕಳವಳಕಾರಿ. ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.೪೨ರಷ್ಟಿದೆ. ಕೋಲಾರ ತಾಲ್ಲೂಕು ಶೇ.೬೬ರಷ್ಟು ಅತಿ ಹೆಚ್ಚು ಸಿ-ಸೆಕ್ಷನ್ ಪ್ರಮಾಣ ದಾಖಲಿಸಿದೆ ಎಂದು ಹೇಳಿದರು.ಶಸ್ತ್ರಚಿಕಿತ್ಸೆ ಅಗತ್ಯವಿದ್ದಾಗ ಮಾತ್ರ ಸಿ-ಸೆಕ್ಷನ್ ಮಾಡಬೇಕು. ಅನಗತ್ಯ ಸಿ-ಸೆಕ್ಷನ್‌ಗಳನ್ನು ತಡೆಗಟ್ಟಲು ಎಲ್ಲ ಆಸ್ಪತ್ರೆಗಳು, ವಿಶೇಷವಾಗಿ ಖಾಸಗಿ ಆಸ್ಪತ್ರೆಗಳು, ವೈಜ್ಞಾನಿಕ ಮತ್ತು ವೈದ್ಯಕೀಯ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು. ಈ ಕುರಿತು ಕೂಡಲೇ ಸೂಕ್ತ ಪರಿಶೀಲನಾ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಡೆಂಘೀ ತಡೆಗಟ್ಟಲು ಸೂಚನೆ

ಜನವರಿಯಿಂದ ಸೆಪ್ಟೆಂಬರ್‌ವರೆಗೆ ಡೆಂಘಿ ೯೯ ಪ್ರಕರಣಗಳು ಮತ್ತು ಚಿಕ್ಕನ್‌ಗುನ್ಯಾದ ೧೧ ಪ್ರಕರಣಗಳು ದೃಢಪಟ್ಟಿವೆ. ನಿಯಂತ್ರಣಕ್ಕೆ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಯಿತು. ಜಿಲ್ಲೆಯಲ್ಲಿ ಈ ಅವಧಿಯಲ್ಲಿ ೯,೦೭೬ ನಾಯಿ ಕಡಿತ ಮತ್ತು ೨೩೨ ಹಾವು ಕಡಿತ ಪ್ರಕರಣಗಳು ವರದಿಯಾಗಿವೆ. ಇಂತಹ ಪ್ರಕರಣಗಳ ನಿರ್ವಹಣೆ ಮತ್ತು ಲಸಿಕೆಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದರು.

ಪೋಸ್ಟರ್ ಬಿಡುಗಡೆ

ಇದೆ ಸಂದರ್ಭದಲ್ಲಿ ತಂಬಾಕು ಪರಿಣಾಮ ಕುರಿತು ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಡಿಹೆಚ್‌ಓ ಡಾ.ಶ್ರೀನಿವಾಸ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಗದೀಶ್, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಚಾರಿಣಿ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ರವಿ ಕುಮಾರ್ ಎಂ.ವಿ, ಜಿಲ್ಲಾಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಪ್ರಸನ್ನ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾರಾಯಣ ಸ್ವಾಮಿ, ಡಾ.ರಮೇಶ್ ಬಾಬು, ಡಾ.ಸುನೀಲ್, ಡಾ.ಸುಗುಣ, ಜಿಪಂ ಸಹಾಯಕ ಕಾರ್ಯದರ್ಶಿ ವೆಂಕಟಾ ಚಲಪತಿ.ಎಸ್, ಕೆ.ಎಸ್.ಆರ್.ಟಿ.ಸಿ ಆಡಳಿತಾಧಿಕಾರಿ ಭಾಗ್ಯಲಕ್ಷ್ಮೀ ಎಂ.ವಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಮಹಮದ್.ಪಿ ಇದ್ದರು.