ಜೋಪಡಿಯಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೆ ಸಿಎಂ ಸ್ಪಂದನೆ

| Published : Apr 30 2025, 12:36 AM IST

ಸಾರಾಂಶ

ಮುಖ್ಯಮಂತ್ರಿಗಳು ವಿಶೇಷ ಕಾಳಜಿ ವಹಿಸಿ ಈ ಕುಟುಂಬಕ್ಕೆ ಒಂದು ಮನೆ ಮಂಜೂರು ಮಾಡಿಕೊಟ್ಟಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ

ಕೂಡ್ಲಿಗಿ: ತಾಲೂಕಿನ ಹುರುಳಿಹಾಳ ಗ್ರಾಪಂ ವ್ಯಾಪ್ತಿಯ ವಲಸೆ ಗ್ರಾಮದ ತುಪ್ಪಲಬೋರಯ್ಯರ ನಾಗರಾಜ, ಪಾಪಮ್ಮ ದಂಪತಿ 25 ವರ್ಷಗಳಿಂದ ಜೋಪಡಿಯಲ್ಲಿ ವಾಸಿಸುತ್ತಿದ್ದು, ಈ ಕುರಿತು ಕನ್ನಡಪ್ರಭ ಇತ್ತೀಚಿಗೆ ಮಾಡಿದ ವರದಿಗೆ ಸ್ಪಂದಿಸಿರುವ ಸಿಎಂ ಸಿದ್ದರಾಮಯ್ಯ ಅವರು ಅವರಿಗೆ ತಕ್ಷಣ ಅಂಬೇಡ್ಕರ್‌ ವಸತಿ ಯೋಜನೆಯಲ್ಲಿ ಮನೆ ಕೊಡಿಸುವಂತೆ ಸ್ಥಳೀಯ ಶಾಸಕ ಎನ್‌.ಟಿ. ಶ್ರೀನಿವಾಸ ಅವರಿಗೆ ಸೂಚಿಸಿದ್ದಾರೆ.

ಅದರಂತೆ ಶ್ರೀನಿವಾಸ ಅವರು ಮನೆ ಮಂಜೂರು ಮಾಡಿದ್ದಲ್ಲದೇ ಗ್ರಾಮಕ್ಕೆ ತೆರಳಿ ಹಕ್ಕುಪತ್ರ ನೀಡಿದ್ದಾರೆ.

ಕಳೆದ 25 ವರ್ಷಗಳಿಂದ ಈ ದಂಪತಿ ತಮ್ಮ ಆರು ಹೆಣ್ಣು ಮಕ್ಕಳು ಮತ್ತು ಓರ್ವ ಪುತ್ರನ ಜೊತೆ ಜೋಪಡಿಯಲ್ಲಿ ವಾಸವಾಗಿದ್ದರು. ಸ್ಥಳೀಯ ಆಡಳಿತ ಇವರಿಗೆ ಆಶ್ರಯ ಸೇರಿದಂತೆ ಯಾವುದೇ ವಸತಿ ಯೋಜನೆಯಡಿ ಮನೆ ನೀಡಿರಲಿಲ್ಲ. ಈ ಕುರಿತು ಕಳೆದ ಡಿ.6 ರಂದು ಕನ್ನಡಪ್ರಭ ''''25 ವರ್ಷಗಳಿಂದ ಜೋಪಡಿಯಲ್ಲಿ ವಾಸ, ಸಿಗುತ್ತಿಲ್ಲ ಆಶ್ರಯ ಮನೆ'''' ಎನ್ನುವ ಶೀರ್ಷಿಕೆಯಡಿ ವಿಶೇಷ ವರದಿ ಮಾಡಿತ್ತು.

ಈ ವರದಿ ಮುಖ್ಯಮಂತ್ರಿಗಳ ಗಮನಕ್ಕೆ ಬರುತ್ತಿದ್ದಂತೆ ಅವರ ಕಚೇರಿಯಿಂದ ಅವರ ಆಪ್ತ ಸಹಾಯಕ ವೆಂಕಟೇಶ ಅವರು ಕೂಡ್ಲಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್‌ ಅವರನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದಾರೆ. ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರನ್ನೂ ಸಹ ಸಂಪರ್ಕಿಸಿದ್ದು, ಅಂಬೇಡ್ಕರ್‌ ವಸತಿ ಯೋಜನೆ ರಾಜ್ಯದಲ್ಲಿ ಲಾಕ್ ಆಗಿದ್ದರೂ ಮುಖ್ಯಮಂತ್ರಿಗಳು ವಿಶೇಷ ಕಾಳಜಿ ವಹಿಸಿ ಈ ಕುಟುಂಬಕ್ಕೆ ಒಂದು ಮನೆ ಮಂಜೂರು ಮಾಡಿಕೊಟ್ಟಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ. ತಕ್ಷಣ ಶಾಸಕರು ಗ್ರಾಮಕ್ಕೆ ತೆರಳಿ ಅವರಿಗೆ ಹಕ್ಕುಪತ್ರ ನೀಡಿ ಮುಂದಿನ ಕ್ರಮ ಕೈಗೊಂಡದ್ದಾರೆ.

ಈ ಸಂದರ್ಭದಲ್ಲಿ ಹುರುಳಿಹಾಳ ಗ್ರಾಪಂ ಪಿಡಿಓ ಕವಿತಾ, ಪಿಡಬ್ಲ್ಯೂಡಿ ಎಇಇ ನಾಗನಗೌಡ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.ಕನ್ನಡಪ್ರಭ ವರದಿ ಬಂದ ದಿನವೇ ಮುಖ್ಯಮಂತ್ರಿ ಕಚೇರಿಯಿಂದ ಆಪ್ತ ಸಹಾಯಕ ವೆಂಕಟೇಶ್ ಪೋನ್ ಮಾಡಿ ಮುಖ್ಯಮಂತ್ರಿಯವರ ಗಮನಕ್ಕೆ ಕನ್ನಡಪ್ರಭ ವರದಿ ಬಂದಿದೆ. ಪೋನ್ ಮಾಡುವಂತೆ ತಿಳಿಸಿದ್ದಾರೆ ಎಂದರು. ನಾನು ತಕ್ಷಣವೇ ಮುಖ್ಯಮಂತ್ರಿಗಳ ಜತೆ ಮಾತನಾಡಿದೆ. ರಾಜ್ಯದಲ್ಲಿ ಅಂಬೇಡ್ಕರ್ ವಸತಿ ಯೋಜನೆಯಡಿ ಮನೆಗಳು ಈಗ ಯಾವುದೇ ಟಾರ್ಗೆಟ್ ಇಲ್ಲ, ಹೆಚ್ಚುವರಿಯಾಗಿ ವಿಶೇಷವಾಗಿ ಇವರಿಗೆ 1 ಮನೆ ನಿರ್ಮಿಸಲು ಹೇಳುತ್ತೇನೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸೋಮವಾರ ಮನೆಗೇ ತೆರಳಿ ಹಕ್ಕುಪತ್ರ ನೀಡಿದ್ದೇನೆ. ಮಕ್ಕಳಿಗೆ ವಸತಿ ಶಾಲೆಯೊಳಗೆ ಈ ವರ್ಷವೇ ಸೇರಿಸಿ ಅವರ ಓದಿಗೂ ನಾನು ಸಹಕಾರ ಮಾಡುವೆ ಎಂದು ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.