18ಕ್ಕೆ ವಿವಿ ಸಾಗರ ಜಲಾಶಯಕ್ಕೆ ಸಿಎಂ ಬಾಗಿನ

| Published : Jan 12 2025, 01:16 AM IST

18ಕ್ಕೆ ವಿವಿ ಸಾಗರ ಜಲಾಶಯಕ್ಕೆ ಸಿಎಂ ಬಾಗಿನ
Share this Article
  • FB
  • TW
  • Linkdin
  • Email

ಸಾರಾಂಶ

CM to visit VV Sagar reservoir on 18th

-18ರಂದು 3ಗಂಟೆಗೆ ಬಾಗಿನ ಅರ್ಪಣೆಗೆ ಭರದ ಸಿದ್ಧತೆ । ಮುಖ್ಯಮಂತ್ರಿಗಳ ಜೊತೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಗಿ

------

ಕನ್ನಡಪ್ರಭ ವಾರ್ತೆ ಹಿರಿಯೂರು

ವಿವಿ ಸಾಗರ ಜಲಾಶಯ 130 ಅಡಿ ತಲುಪಿದ್ದು ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸಲಿದ್ದಾರೆ.

18ರಂದು ಮುಖ್ಯಮಂತ್ರಿಗಳ ಕಾರ್ಯಕ್ರಮ ಆಯೋಜನೆಯಾಗಿದ್ದು, ಅಂದು ಮದ್ಯಾಹ್ನ 3ಗಂಟೆಗೆ ಬಾಗಿನ ಅರ್ಪಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿಗಳ ಜೊತೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹ ಆಗಮಿಸಲಿದ್ದು, ಸಚಿವರು ಎಷ್ಟು ಮಂದಿ ಆಗಮಿಸುವರು ಎಂಬ ಮಾಹಿತಿ ಇನ್ನೂ ದೊರಕಿಲ್ಲ.

ಹೊಸವರ್ಷದ ಮೊದಲ ತಿಂಗಳಲ್ಲೇ ರೈತರಿಗೆ ಖುಷಿ ಕ್ಷಣಗಳು ಸೃಷ್ಟಿಯಾಗಿದ್ದು, ಈಗಾಗಲೇ ಜಲಾಶಯ ವೀಕ್ಷಣೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ. 1933ರಲ್ಲಿ ಜಲಾಶಯದಲ್ಲಿ 135.25 ಅಡಿಯಷ್ಟು ನೀರು ಸಂಗ್ರಹವಾಗಿ ಕೋಡಿ ಹರಿದ ನಂತರ 2022 ರಲ್ಲಿ 89 ವರ್ಷಗಳ ನಂತರ ಜಲಾಶಯ ಕೋಡಿ ಬಿದ್ದಿತ್ತು. ಅದಾಗಿ ಕೇವಲ ಎರಡು ವರ್ಷಗಳ ಅಂತರದಲ್ಲಿ ಮತ್ತೊಮ್ಮೆ ಜಲಾಶಯ ಕೋಡಿ ಬಿದ್ದಿದ್ದು, ಜಿಲ್ಲೆಯ ಜನರಲ್ಲಿ ಸಂತಸ ಉಂಟು ಮಾಡಿದೆ. ಈ ಹಿಂದೆ ಜಲಾಶಯದಲ್ಲಿ ನೀರು ಡೆಡ್ ಸ್ಟೋರೇಜ್ ತಲುಪಿದ್ದಾಗ, ತಾಲೂಕಲ್ಲಿ ಸಾವಿರಾರು ತೆಂಗಿನ ಮರಗಳು ಒಣಗಿದ್ದವು. ಇದೀಗ ಜಲಾಶಯ ಭರ್ತಿಯಾಗಿರುವುದು ಅಚ್ಚುಕಟ್ಟುದಾರರು ಮತ್ತೆ ತೋಟಗಾರಿಕೆ ಬೆಳೆಗಳತ್ತ ಮುಖ ಮಾಡುವಂತಾಗಿದೆ.

2022 ರಲ್ಲಿ ಜಲಾಶಯದ ಸುರಕ್ಷತೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಊಹಾಪೋಹಗಳು ಎದ್ದಿದ್ದವು. ಆಗ 2022ರ ಸೆಪ್ಟೆಂಬರ್ ತಿಂಗಳಿನಲ್ಲಿ ಅಣೆಕಟ್ಟು ತಜ್ಞ, ನಿವೃತ್ತ ಚೀಫ್ ಇಂಜಿನಿಯರ್ ಎಸ್.ಬಿ.ಕೊಯಮತ್ತೂರು, ಕರ್ನಾಟಕ ಎಂಜಿನಿಯರ್ ರೀಸರ್ಚ್ ಸ್ಟೇಷನ್ ಮುಖ್ಯ ಇಂಜಿನಿಯರ್ ಮಹೇಶ್, ಅಣೆಕಟ್ಟೆ ಸುರಕ್ಷಾ ಸಮಿತಿ ಸದಸ್ಯ ಕಮಲ ಶೇಖರನ್ ಮುಂತಾದವರ ತಂಡ ಆಣೆಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಣೆಕಟ್ಟೆ ಸುಭದ್ರವಾಗಿದೆ ಎಂದು ಹೇಳಿ ಕೆಲವು ಸಲಹೆಗಳನ್ನು ನೀಡಿತ್ತು.

ಶತಮಾನ ಕಂಡ ಜಲಾಶಯ ತುಂಬಾ ಇದೀಗ ಜಲರಾಶಿಯದ್ದೇ ಸೊಬಗು ಆಗಿದೆ. ಭದ್ರಾದಿಂದ ಹರಿವ 700 ಕ್ಯೂಸೆಕ್ ನೀರು ಕೋಡಿಯ ಮೂಲಕ ಸರಾಗ ಹರಿದು ವೇದಾವತಿ ನದಿ ಸೇರಲು ಸಂಬಂಧಪಟ್ಟ ಇಲಾಖೆ ಸೂಕ್ತ ವ್ಯವಸ್ಥೆ ಮಾಡಿಕೊಂಡಿದೆ. ನದಿಪಾತ್ರದ ಹಳ್ಳಿಗಳ ಜನಜಾನುವಾರು ಸುರಕ್ಷಿತೆಗೆ ಮನವಿ ಮಾಡಲಾಗಿದ್ದು, 18ರ ಬಾಗಿನ ಕಾರ್ಯಕ್ರಮಕ್ಕೆ ತಾಲೂಕು ಭರದಿಂದ ಸಜ್ಜಾಗುತ್ತಿದೆ. ಕಾಂಗ್ರೆಸ್ ಪಕ್ಷದ ಅಧಿಕಾರದ ಅವಧಿಯಲ್ಲಿ ಬರ, ಮಳೆ ಕಡಿಮೆ ಎಂಬ ವಿರೋಧಿಗಳ ಟೀಕೆಗೆ ವಿವಿ ಸಾಗರ ಜಲಾಶಯ ಭರ್ತಿಯಾಗುವ ಮೂಲಕ ಉತ್ತರ ಕೊಟ್ಟಿದೆ.

ವಿಶ್ವೇಶ್ವರಯ್ಯ ಜಲ ನಿಗಮದ ಎಇಇ ಚಂದ್ರಶೇಖರಯ್ಯ ಅವರು ಬಾಗಿನ ಕಾರ್ಯಕ್ರಮದ ಮಾಹಿತಿ ನೀಡಿ ತಾಲೂಕಿನ ವಾಣಿ ವಿಲಾಸ ಜಲಾಶಯ ಮೂರನೇ ಬಾರಿಗೆ ಭರ್ತಿಯಾಗಿದ್ದು, ಈಗಾಗಲೇ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಸಿಎಂ ಮತ್ತು ಡಿಸಿಎಂ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಬಾಗಿನ ಕಾರ್ಯಕ್ರಮದ ಪ್ರಯುಕ್ತ ಜಲಾಶಯಕ್ಕೆ ವರ್ಣರಂಜಿತ ಅಲಂಕಾರ ಮಾಡಲಾಗುವುದು. ಗಣ್ಯರಿಗೆ ಕುಳಿತುಕೊಳ್ಳುವ ಆಸನಗಳು ಸೇರಿದಂತೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ವೇದಿಕೆ ಕಾರ್ಯಕ್ರಮದ ಬಗ್ಗೆ ಜಿಲ್ಲಾಡಳಿತ ಹಾಗೂ ಸಚಿವರು ತೀರ್ಮಾನಿಸಲಿದ್ದಾರೆ ಎಂದರು.

.... ಬಾಕ್ಸ್ ......

ನಾಲ್ಕು ತಿಂಗಳ ಹಿಂದೆ ಕೋಡಿ ಸೂಚನೆ ನೀಡಿದ್ದ ಕನ್ನಡಪ್ರಭ

ಸೆಪ್ಟೆಂಬರ್ 3 ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ವಾಣಿವಿಲಾಸ ಜಲಾಶಯ ಮತ್ತೊಮ್ಮೆ ಕೋಡಿ ಎಂಬ ಸುದ್ದಿ ಪ್ರಕಟಿಸಿತ್ತು. ಅದಾಗಿ ಇಂದಿಗೆ ನಾಲ್ಕು ತಿಂಗಳಾಗಿದ್ದು, ಜಲಾಶಯ ಭರ್ತಿಯಾಗಿ ಬಾಗಿನ ಕಾರ್ಯಕ್ರಮದವರೆಗೂ ಬಂದು ನಿಂತಿದೆ. ತಾಲೂಕು ಕೇಂದ್ರದಿಂದ 20 ಕಿಮೀ ದೂರವಿರುವ ಜಲಾಶಯ 135 ಅಡಿ ನೀರು ಸಂಗ್ರಹಣೆ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಮೈಸೂರು ಮಹಾರಾಜರ ದೂರದೃಷ್ಟಿಯ ಫಲವಾಗಿ ಎದ್ದು ನಿಂತ ಜಲಾಶಯ ತಾಲೂಕಿನ ಮೂರನೇ ಒಂದು ಭಾಗದಷ್ಟು ರೈತರ ಕೃಷಿ ಚಟುವಟಿಕೆಗಳಿಗೆ ಆಧಾರವಾಗಿದೆ.

....ಬಾಕ್ಸ್ ....

ಜನರ ಕುಡಿವ ನೀರಿನ ಬವಣೆ ನೀಗಲಿದೆ

ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ಮಾತನಾಡಿ, ವಿವಿ ಸಾಗರ ಜಲಾಶಯ ಸಚಿವರ ರೈತರ ಬಗೆಗಿನ ಕಾಳಜಿಯ ಫಲವಾಗಿ ಭರ್ತಿಯಾಗಿದ್ದು ಇದೀಗ 18ಕ್ಕೆ ಸಿಎಂ ಮತ್ತು ಡಿಸಿಎಂ ಅವರು ತಾಲೂಕಿಗೆ ಆಗಮಿಸಿ ಬಾಗಿನ ಬಿಡುವ ಕಾರ್ಯಕ್ರಮ ನಿಗದಿಯಾಗಿದೆ. ಬ್ಲಾಕ್ ಕಾಂಗ್ರೆಸ್ ವತಿಯಿಂದ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳನ್ನು ಸ್ವಾಗತಿಸುವ ಸಿದ್ಧತೆ ನಡೆಸಲಾಗಿದೆ. ತಾಲೂಕಿನ ರೈತರ ಮತ್ತು ಜಿಲ್ಲೆಯ ಜನರ ಕುಡಿಯುವ ನೀರಿನ ಬವಣೆ ನೀಗಲಿದೆ ಎಂದರು.

------

ಚಿತ್ರ 1 ವಿವಿ ಸಾಗರ ಜಲಾಷಯ

ಚಿತ್ರ 2 ಸೆಪ್ಟೆಂಬರ್ 3 ರ ಕನ್ನಡಪ್ರಭ ಸುದ್ದಿ

ಚಿತ್ರ 3 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್