ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಕರ್ನಾಟಕ ಹೈಕೋರ್ಟ್‌ನ ಆದೇಶದಂತೆ ಜಿಲ್ಲಾಡಳಿತ ಚಿಕ್ಕಲ್ಲೂರಿನ ಶ್ರೀ ಸಿದ್ದಪ್ಪಾಜಿ ಜಾತ್ರೆ, ಬಿಳಿಗಿರಿ ರಂಗನ ಬೆಟ್ಟದ ರಂಗನಾಥಸ್ವಾಮಿ ಜಾತ್ರೆ ಹಾಗೂ ವಡಗೆರೆ ಶ್ರೀ ಆಂಜನೇಯಸ್ವಾಮಿ, ಕುರುಬನ ಕಟ್ಟೆ ಶ್ರೀ ಮಂಟೇಸ್ವಾಮಿ ಮತ್ತು ಶಿಂಷಾ ಮಾರಮ್ಮ ದೇವಾಲಯಗಳು ಮತ್ತು ಅವುಗಳ ಸುತ್ತಮುತ್ತಲಿನ ಪರಿಸರಗಳಲ್ಲಿ ಹಾಗೂ ಇನ್ನಿತರ ಧಾರ್ಮಿಕ ಸ್ಥಳಗಳಲ್ಲಿ ನಡೆಯಲಿರುವ ಪ್ರಾಣಿಗಳ ಬಲಿಯನ್ನು ತಡೆಯುವಂತೆ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ, ಪಶು ಪ್ರಾಣಿ ಬಲಿ ನಿರ್ಮೂಲನ ಜಾಗೃತಿ ಮಹಾ ಸಂಘದ ಅಧ್ಯಕ್ಷ ದಯಾನಂದಸ್ವಾಮಿ ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಲ್ಲೂರು ಸಿದ್ದಾಪ್ಪಾಜಿ ಜಾತ್ರೆಯಲ್ಲಿ ದೇವರ ಹಾಗೂ ಪಂಕ್ತಿ ಸೇವೆ ಹೆಸರಿನಲ್ಲಿ ನಡೆಯುತ್ತಿರುವ ಪ್ರಾಣಿ ಬಲಿ ಶೇ.೭೫ರಷ್ಟು ನಿಂತಿದೆ. ಇದಕ್ಕೆ ಜಿಲ್ಲಾಡಳಿತ ಹೈಕೋರ್ಟ್‌ನ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದೇ ಕಾರಣ. ಇದಕ್ಕಾಗಿ ನಾನು ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.ರಾಜ್ಯಾದ್ಯಂತ ದೇವರ ಹೆಸರಿನಲ್ಲಿ ನಡೆಯುವ ಪ್ರಾಣಿಗಳ ರಕ್ತಪಾತ ಕೈಬಿಟ್ಟು ಅಹಿಂಸಾತ್ಮಕವಾಗಿ ಸಾತ್ವಿಕ ಪದಾರ್ಥಗಳಿಂದ ಪೂಜೆ ಸಲ್ಲಿಸಲು, ಧಾರ್ಮಿಕ ಸೇವಾ ಕೈಂಕರ್ಯಗಳನ್ನು ಕೈಗೊಳ್ಳುವಂತೆ ಭಕ್ತರಲ್ಲಿ ಜಾಗೃತಿ ಮೂಡಿಸಲು ಈ ಅಹಿಂಸ- ಪ್ರಾಣಿ ದಯಾ- ಆಧ್ಯಾತ್ಮ ಸಂದೇಶ ಯಾತ್ರೆಯನ್ನು ಕೈಗೊಳ್ಳಲಾಗಿದೆ, ಸಾವಿರಾರು ಮೂಕ ಮುಗ್ದ, ನಿರಪರಾಧಿ ಪ್ರಾಣಿಗಳ ಜೀವ ಉಳಿಸುವುದೇ ಈ ಯಾತ್ರೆಯ ಉದ್ದೇಶ ಎಂದರು.
ಪಂಕ್ತಿ ಸೇವೆಗೆ ಹಾಗೂ ಮಾಂಸಾಹಾರಕ್ಕೆ ನಮ್ಮ ವಿರೋಧವಿಲ್ಲ, ಆದರೆ ಜಾತ್ರೆ ನಡೆಯುವ ಸ್ಥಳ ಹಾಗೂ ಸುತ್ತಮುತ್ತ ಯಾವುದೇ ಪ್ರಾಣಿ ಬಲಿ ನಡೆಯಬಾರದು, ಇಲ್ಲಿ ಬಲಿ ಪೀಠವಿಲ್ಲ, ಸಂವಿಧಾನದಲ್ಲಿ ಪ್ರತಿಯೊಂದು ಪ್ರಾಣಿಗೂ ಬದುಕುವ ಹಕ್ಕನ್ನು ನೀಡಲಾಗಿದೆ ಇದನ್ನು ನಾವು ಗೌರವಿಸಬೇಕು ಎಂದರು. ಪ್ರಾಣಿಬಲಿಯು ಅನಾಗರಿಕವೂ, ಅಂಧ ಶ್ರದ್ದೆಯೂ, ಪರಿಸರ ಮಾಲಿನ್ಯಕಾರಕವೂ, ಸಾಂಕ್ರಾಮಿಕ ರೋಗ-ರುಜಿನಕಾರಕವೂ ಆಗಿದ್ದು, ಇದು ಕಾನೂನು ಮತ್ತು ಧರ್ಮ ವಿರೋಧಿ ಆಗಿದೆ, ಆದ್ದರಿಂದ ಭಕ್ತಾದಿಗಳು ಪ್ರಾಣಿಬಲಿ ತ್ಯಜಿಸಿ ಅಹಿಂಸಾತ್ಮಕವಾಗಿ, ವಿಧಾರ್ಚನೆ ಮೂಲಕ ಸಾತ್ವಿಕ ಪೂಜೆ ಸಲ್ಲಿಸಬೇಕು.ದೇವಾಲಯಗಳು ವಧಾಲಯಗಳಾಗದೆ ದಿವ್ಯಾಲಯಗಳಾಗಬೇಕು, ಧ್ಯಾನಾಲಯಗಳಾಗಬೇಕು, ಜ್ಞಾನಾಲಯಗಳಾಗಬೇಕು. ಜಾತ್ರಾ ಪರಿಸರಗಳು, ಧಾರ್ಮಿಕ ಸ್ಥಳಗಳು, ಧಾರ್ಮಿಕ ಸಮಾವೇಶಗಳು, ಜೀವ ತೆಗೆಯುವ ಮೃತ್ಯು ಕೂಪಗಳಾಗಬಾರದು, ಭಾರತ ಸಂವಿಧಾನದ ಆರ್ಟಿಕಲ್ ೫೧-ಎ ರ ಅಡಿಯಲ್ಲಿ ಭಕ್ತರಲ್ಲಿ ಅಹಿಂಸೆ, ಜೀವದಯೆ ಮತ್ತು ಪ್ರಾಣಿಬಲಿ ತಡೆ ಕುರಿತು ಜಾಗೃತಿ ಮೂಡಿಸಲು ಅಹಿಂಸಾ- ಪ್ರಾಣಿದಯಾ-ಆಧ್ಯಾತ್ಮ ಸಂದೇಶ ಯಾತ್ರೆಯನ್ನು ಜಾತ್ರಾ ಪರಿಸರ ಮತ್ತು ಸುತ್ತ ಮುತ್ತಲಿನ ಊರುಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.ಜಿಲ್ಲಾಡಳಿತ, ಕೊಳ್ಳೆಗಾಲ ತಾಲೂಕು ಆಡಳಿತ ಹಾಗೂ ಪೋಲಿಸ್ ಇಲಾಖೆ ಇವರ ಮಾನ್ಯ ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಪ್ರಾಣಿಬಲಿ ತಡೆ ಕುರಿತು ಸಂಬಂಧಪಟ್ಟ ಸ್ಥಳಗಳಲ್ಲಿ, ಎಲ್ಲೆಡೆ ಕರಪತ್ರಗಳು, ಬ್ಯಾನರ್ಸ್, ಧ್ವನಿವರ್ಧಕ ಮುಂತಾದವುಗಳ ಮೂಲಕ ವ್ಯಾಪಕ ಜಾಗೃತಿ ಮೂಡಿಸಬೇಕೆಂದು ಮನವಿ ಮಾಡಿದರು.