ದುರ್ಬಲರ ಬದುಕು ಕಟ್ಟಿಕೊಳ್ಳಲು ಸಹಕಾರಿ ಸಂಘಗಳು ಪೂರಕ: ಜಂಬರಗಟ್ಟಿ ಮಂಜಪ್ಪ

| Published : Sep 23 2024, 01:22 AM IST

ದುರ್ಬಲರ ಬದುಕು ಕಟ್ಟಿಕೊಳ್ಳಲು ಸಹಕಾರಿ ಸಂಘಗಳು ಪೂರಕ: ಜಂಬರಗಟ್ಟಿ ಮಂಜಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕಾರಿಪುರದ ಶ್ರೀ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಆರ್ಥಿಕವಾಗಿ ಹಿಂದುಳಿದವರು, ಬಡವರು, ಸಣ್ಣ ರೈತರು, ಸಣ್ಣ ವ್ಯಾಪಾರಿಗಳ ಸಹಿತ ಸಮಾಜದಲ್ಲಿನ ಎಲ್ಲ ಆರ್ಥಿಕ ದುರ್ಬಲರು ಬದುಕು ಕಟ್ಟಿಕೊಳ್ಳಲು ಸಹಕಾರಿ ಸಂಘಗಳು ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಶಿವಮೊಗ್ಗ ಜಿಲ್ಲೆ ವಾಲ್ಮೀಕಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಜಂಬರಗಟ್ಟಿ ಮಂಜಪ್ಪ ಹೆಮ್ಮೆ ವ್ಯಕ್ತಪಡಿಸಿದರು.

ಅವರು ಇಲ್ಲಿನ ವಾಲ್ಮೀಕಿ ಭವನದಲ್ಲಿ ನಡೆದ ಶಿಕಾರಿಪುರ ತಾ.ಶ್ರೀ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ದೊಡ್ಡ ದೊಡ್ಡ ಬ್ಯಾಂಕುಗಳು ಹೆಚ್ಚು ಹಣ ಹೊಂದಿರುವವರಿಗೆ ಹೆಚ್ಚು ಆದ್ಯತೆಗಳನ್ನು ನೀಡುತ್ತವೆ ಆದರೆ ಸಣ್ಣ ಪುಟ್ಟ ಸಹಕಾರಿ ಸಂಘಗಳು ಆರ್ಥಿಕವಾಗಿ ತೀರಾ ಹಿಂದುಳಿದವರನ್ನು ಮೇಲೆತ್ತುವ ಪ್ರಯತ್ನ ಮಾಡುತ್ತಿರುವುದು ಅತ್ಯಂತ ಪ್ರಶಂಶನೀಯ ಕಾರ್ಯವಾಗಿದೆ. ಸಹಕಾರಿ ಸಂಘಗಳ ಅಭಿವೃದ್ಧಿಗೆ ಉತ್ತಮ ಆಡಳಿತ ಮಂಡಳಿ ಹಾಗೂ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸುವ ಸದಸ್ಯರು ಇದ್ದಾಗ ಮಾತ್ರ ಆ ಸಂಘಗಳು ಲಾಭದಾಯಕವಾಗಿ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಲಿದೆ ಈ ದಿಸೆಯಲ್ಲಿ ಇಲ್ಲಿನ ವಾಲ್ಮೀಕಿ ಪತ್ತಿನ ಸಹಕಾರಿ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಲ್ಮೀಕಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಎಚ್.ಟಿ.ಬಳಿಗಾರ್ ಮಾತನಾಡಿ, ಹಿಂದುಳಿದ ವರ್ಗ,ಪರಿಶಿಷ್ಟ ಜಾತಿ/ಪಂಗಡದ ಸಹಿತ ಶೋಷಿತ ವರ್ಗದ ಏಳಿಗೆಗಾಗಿ ಹಾಗೂ ಸಹಕಾರಿ ಕ್ಷೇತ್ರದ ಪ್ರಗತಿಗೆ ಶ್ರಮಿಸಿದ ದೇವರಾಜ್ ಅರಸು ಹಾಗೂ ಎಲ್.ಜಿ. ಹಾವನೂರಂತಹ ಮಹಾನ್ ನಾಯಕರನ್ನು ನಾವು ಮರೆಯಬಾರದು, ಸದಾ ಅವರನ್ನು ಎಲ್ಲ ವರ್ಗದ ಜನರು ಗೌರವಿಸುವ ಅಗತ್ಯವಿದೆ

ಪಿಟಿಸಿಎಲ್ ಕಾಯ್ದೆ ಜಾರಿಗೆ ತಂದು ಪರಿಶಿಷ್ಟ ಜಾತಿ, ಪಂಗಡಗಳ ಜನರ ಜಮೀನುಗಳನ್ನು ಮಾರಾಟ ಮಾಡಲು ಅವಕಾಶವಾಗದಂತಹ ಕಾನೂನು ಮೂಲಕ ಈ ವರ್ಗದ ಜನರ ಬದುಕು ಹಸನಾಗಲು ಕಾರಣಕರ್ತರಾದ ಅರಸು ಹಾಗೂ ಹಾವನೂರ್ ಶೋಷಿತರ ಆಶಾಕಿರಣವಾಗಿದ್ದರು. ಎಲ್ಲರೂ ಒಂದೇ ಎಂಬ ಸಂದೇಶದೊಂದಿಗೆ ಸಹ ಭೋಜನದಂತಹ ವ್ಯವಸ್ಥೆ ಜಾರಿಗೊಳಿಸಿದ ಮಹಾ ನಾಯಕರನ್ನು ನಾವು ಎಂದಿಗೂ ಮರೆಯಬಾರದು ಎಂದರು.

ಪ್ರಾಸ್ತಾವಿಕವಾಗಿ ಸಂಘದ ಸದಸ್ಯ ಕೆ.ಎಸ್.ಹುಚ್ರಾಯಪ್ಪ ಮಾತನಾಡಿದರು. ಆಹ್ವಾನ ಪತ್ರಿಕೆಯನ್ನು ಅನ್ನಪೂರ್ಣಮ್ಮ ಓದಿದರು. ಸಹಕಾರಿ ಸಂಘದ ಆಡಳಿತ ವರದಿಯನ್ನು ಉಮೇಶ್ ಮಾರವಳ್ಳಿ ವಾಚಿಸಿದರು.2023-24 ರ ಸಾಲಿನ ಸಂಘದ ಆಡಿಟ್ ಆದ ವರದಿಯನ್ನು ಕಾರ್ಯದರ್ಶಿ ಕಿರಿಟ್.ಎಸ್.ರಾಯ್ಕರ್ ಸಭೆಗೆ ಮಂಡಿಸಿದರು.ವೇದಿಕೆಯಲ್ಲಿ ಮುಖ್ಯ ಅತಿಥಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲೀಕರಣ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್

ಎಚ್‌.ನಾಗೇಶಪ್ಪ,ಶಿವಮೊಗ್ಗ ವಾಲ್ಮೀಕಿ ಸಹಕಾರಿ ಸಂಘದ ಖಜಾಂಚಿ ವಿದ್ಯಾನಗರ ರಾಮಪ್ಪ, ಶಿಕಾರಿಪುರ ತಾ. ವಾಲ್ಮೀಕಿ ಸಮಾಜದ ಅಧ್ಯಕ್ಷ ಎಚ್.ಹನುಮಂತಪ್ಪ, ಸಹಕಾರಿ ಸಂಘದ ಉಪಾಧ್ಯಕ್ಷ ಎಚ್.ಡಿ ಮಾದೇವಪ್ಪ, ಪ್ರಾಂಶುಪಾಲ ಸತೀಶ್‌ಕುಮಾರ್, ಪರಿಶಿಷ್ಟ ಪಂಗಡಗಳ ನೌಕರರ ಸಂಘದ ಅಧ್ಯಕ್ಷ ಎಮ್.ಎಚ್.ಮಲ್ಲಿಕಾರ್ಜುನ್,ಸಂಘದ ನಿರ್ದೇಶಕರಾದ ಜ.ವಿ ಸುರೇಶ್, ಕೆ.ಎಸ್ ದೇವೇಂದ್ರಪ್ಪ, ಕರಿಬಸಪ್ಪ ಮಂಚಿಕೊಪ್ಪ, ರಾಜಪ್ಪ ಎ.ಎಚ್. ಸುರೇಶ್ ಎಸ್. ಭದ್ರಾಪುರ, ಮೆಸ್ಕಾಂ ನಿವೃತ್ತ ಇಂಜಿನಿಯರ್‌ ಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.

ಪ್ರಸಕ್ತ ಸಾಲಿನಲ್ಲಿ ಅಗಲಿದ ಶೇರುದಾರರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು ಹಾಗೂ ಪ್ರತಿಭಾನ್ವಿತ ಮಕ್ಕಳನ್ನು ಗೌರವಿಸಲಾಯಿತು. ಮಮತಾಸಾಲಿ ಪ್ರಾರ್ಥಿಸಿ, ಜಗದೀಶ್‌ ಸ್ವಾಗತಿಸಿ, ಸುರೇಶ್ ನಿರೂಪಿಸಿದರು.