ಸಾರಾಂಶ
ಬೇಲೂರು: ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸುತ್ತಿದ್ದು, ಜನರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಇರುವ ಶಿಬಿರದಲ್ಲಿ ಪಾಲ್ಗೊಳ್ಳುವುದರ ಮೂಲಕ ಸದುಪಯೋಗ ಪಡೆದುಕೊಳ್ಳಬೇಕು ಎಂದು ಲಯನ್ಸ್ ಸೇವಾಸಂಸ್ಥೆ ಅಧ್ಯಕ್ಷ ಡಾ. ಚಂದ್ರಮೌಳಿ ಹೇಳಿದರು.
ಪಟ್ಟಣದ ದೇವಸ್ಥಾನ ರಸ್ತೆಯ ಕಾವೇರಿ ಕ್ಲಿನಿಕ್‌ನಲ್ಲಿ ಲಯನ್ಸ್ ಸೇವಾಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಉಚಿತ ವೈದ್ಯಕೀಯ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿ, ನಮ್ಮಲ್ಲಿ ವಾಂತಿ - ಭೇದಿ, ಟೈಫಾಯಿಡ್, ಕ್ಷಯ, ಕಾಲರಾದಂತಹ ರೋಗಗಳು ಸಾಮಾನ್ಯವಾಗಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದ್ರೋಗ ಹಾಗೂ ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿವೆ. ಇವು ಶ್ರೀಮಂತ ಕಾಯಿಲೆಗಳಾಗಿದ್ದು, ಬಡಜನರು ಆರ್ಥಿಕವಾಗಿ ಭರಿಸಲು ಅಸಾಧ್ಯ. ಗ್ರಾಮೀಣ ಭಾಗದ ಹಾಗೂ ಪಟ್ಟಣ ಪ್ರದೇಶದ ಬಡ ಜನರಿಗೆ ಉಚಿತ ಶಿಬಿರಗಳ ಮೂಲಕ ತಪಾಸಣೆ ನಡೆಸಿ ಅವರಿಗೆ ಅನಾರೋಗ್ಯ ಸಮಸ್ಯೆ ಕಂಡು ಬಂದಲ್ಲಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಕಳಿಸಲು ಸಾಧ್ಯವಾಗುತ್ತದೆ. ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ.ಪ್ರತಿ ತಿಂಗಳು ನಮ್ಮ ಲಯನ್ಸ್ ಸೇವಾ ಸಂಸ್ಥೆ ವತಿಯಿಂದ ಎಲ್ಲರಿಗೆ ಉಪಯೋಗವಾಗುವಂತೆ ನಾವು ಉಚಿತವಾಗಿ ಆರೋಗ್ಯ ತಪಾಸಣೆ ಶಿಬಿರವನ್ನು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ. ಇದರ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳುತ್ತಿದ್ದಾರೆ ಎಂದರು. ಕೆಲವರಿಗೆ ರೋಗಗಳಿದ್ದರೂ ಗೊತ್ತೇ ಇರುವುದಿಲ್ಲ. ಇಂತಹ ಶಿಬಿರಗಳಲ್ಲಿ ಬಂದು ತಪಾಸಣೆ ನಡೆಸಿದಾಗ ಮಾತ್ರ ತಿಳಿಯುತ್ತದೆ.
ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದು, ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು. ತಮ್ಮ ಆರೋಗ್ಯ ಸದೃಢವಾಗಿರಲು ಗುಣಮಟ್ಟದ ಆಹಾರವನ್ನು ಸೇವಿಸಬೇಕು, ಇಂದಿನ ಆಧುನಿಕ ಆಹಾರ ಪದ್ಧತಿಯಿಂದ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಕೆಲಸದ ಒತ್ತಡ ಇನ್ನಿತರ ಕಾರಣಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿತ್ತಾರೆ ಎಂದು ತಿಳಿಸಿದರು. ನಾವು ಹಮ್ಮಿ ಕೊಂಡಿರುವ ಶಿಬಿರದಲ್ಲಿ ರೋಗಿಗಳು ವೈದ್ಯರಿಗೆ ತೋರಿಸಿದರೆ ಉಚಿತ ಚಿಕಿತ್ಸೆ ಮತ್ತು ಔಷಧಿ ಕೊಡಲಾಗುತ್ತಿದೆ. ಅದಲ್ಲದೆ ಅಗತ್ಯ ಇರುವ ಶಸ್ತ್ರ ಚಿಕಿತ್ಸೆಗೆ ಸೂಕ್ತ ಸಲಹೆ ನೀಡಲಾಗುತ್ತಿದೆ. ಸ್ತ್ರೀ ರೋಗ ಮತ್ತು ಪ್ರಸೂತಿ, ಮತ್ತು ಮಕ್ಕಳ ಮೂಳೆ ಮತ್ತು ಕೀಲು, ರೋಗ, ತಪಾಸಣೆ, ಚರ್ಮ ರೋಗ, ಮೂತ್ರ ಪಿಂಡ, ಕಣ್ಣು, ಮೂಗು, ಕಿವಿ ಇವುಗಳ ತಪಾಸಣೆ ಹಾಗೂ ಸಲಹೆ ನೀಡುವುದಲ್ಲದೆ ಈಗಾಗಲೇ ಸುಮಾರು ಸಾಮಾನ್ಯ ರೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಕಾರ್ಯದರ್ಶಿ ಮುಕ್ತಾರ್ ಅಹಮದ್ ಖಜಾಂಚಿ ಪ್ರಶಾಂತ್, ಸಂತೋಷ್ ಪೂವಯ್ಯ, ಕುಮಾರ್, ಶ್ರೀನಿವಾಸ್, ಶ್ರೀನಿವಾಸ್, ತಾರಾ ಸುರೇಶ್, ಉಮೇಶ್ , ತಾರಾಮಣಿ ಸುರೇಶ್, ಪ್ರಭಾಕರ್, ವೈಬಿ ಲೊಕೇಶ್, ಅಬ್ದುಲ್ ಲತೀಫ್, ನೌಷದ್ ಪಾಷಾ, ಮೇಘನಾ, ವಿನೋದ ಪ್ರಭಾಕರ, ಜೀವಜ್ಯೋತಿ ಆಸ್ಪತ್ರೆ ಅರ್ಜುನ್, ನರರೋಗ ತಜ್ಞರು ಹಾಗೂ ತಜ್ಞ ವೈದ್ಯರು ಇದ್ದರು.