ಜೀತ ಪದ್ಧತಿ ಬುಡ ಸಮೇತ ಕಿತ್ತೊಗೆಯಲು ಸಹಕರಿಸಿ: ನ್ಯಾ.ರಾಜೇಶ್ವರಿ ಹೆಗಡೆ

| Published : Feb 10 2024, 01:50 AM IST / Updated: Feb 10 2024, 03:57 PM IST

ಜೀತ ಪದ್ಧತಿ ಬುಡ ಸಮೇತ ಕಿತ್ತೊಗೆಯಲು ಸಹಕರಿಸಿ: ನ್ಯಾ.ರಾಜೇಶ್ವರಿ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಜೀತ ಪದ್ಧತಿ ನಿರ್ಮೂಲನೆ ಮಾಡಲು ಕಾಯ್ದೆ ರೂಪಿಸಿದ್ದರೂ ಅಲ್ಲಲ್ಲಿ ವರದಿಯಾಗುತ್ತಿದ್ದು ಇದನ್ನು ಬುಡ ಸಮೇತ ಕಿತ್ತೊಗೆಯಲು ಎಲ್ಲರೂ ಸಹಕಾರ ಅಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರಾದ ರಾಜೇಶ್ವರಿ ಎನ್. ಹೆಗಡೆ ಹೇಳಿದರು

ಕನ್ನಡಪ್ರಭ ವಾರ್ತೆ ದಾವಣಗೆರೆ

ಜೀತ ಪದ್ಧತಿ ನಿರ್ಮೂಲನೆ ಮಾಡಲು ಕಾಯ್ದೆ ರೂಪಿಸಿದ್ದರೂ ಅಲ್ಲಲ್ಲಿ ವರದಿಯಾಗುತ್ತಿದ್ದು ಇದನ್ನು ಬುಡ ಸಮೇತ ಕಿತ್ತೊಗೆಯಲು ಎಲ್ಲರೂ ಸಹಕಾರ ಅಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರಾದ ರಾಜೇಶ್ವರಿ ಎನ್. ಹೆಗಡೆ ಹೇಳಿದರು.

ನಗರದ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಜಿಲ್ಲಾಡಳಿತ, ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಜೀತಪದ್ಧತಿ ನಿರ್ಮೂಲನಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಮಾತನಾಡಿ ಹಿಂದಿನ ಕಾಲದಿಂದಲೂ ಜೀತ ಪದ್ಧತಿ ರೂಡಿಯಲ್ಲಿದೆ, ಮನೆಯಲ್ಲಿ ಹಣಕಾಸಿನ ತೊಂದರೆಯಾದರೆ ಶ್ರೀಮಂತರ ಬಳಿ ಹಣವನ್ನು ಪಡೆಯುತ್ತಿದ್ದರು. 

ಪಡೆದ ಹಣಕ್ಕೆ ಬಡ್ಡಿಯ ರೂಪದಲ್ಲಿ ಎಲ್ಲರೂ ಅವರ ಮನೆಯಲ್ಲಿ ಜೀತವನ್ನು ಮಾಡಬೇಕಿತ್ತು. ಜೀತ ಪದ್ಧತಿ ರದ್ದತಿ ಕಾಯ್ದೆ 1976 ರಲ್ಲಿ ದೇಶದಾದ್ಯಂತ ಜಾರಿ ಮಾಡಲಾಯಿತು. ಜೀತ ಪದ್ಧತಿ ಎಲ್ಲಿ ಇದೆ, ಅದನ್ನು ಗುರುತಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಅದನ್ನು ನಿರ್ಮೂಲನೆ ಮಾಡಬೇಕು. 

ಇಂತಹ ಪ್ರಕರಣಗಳು ಕಂಡು ಬಂದರೆ ಅಂಥವರಿಗೆ ಪುನರ್ವಸತಿ ಕಲ್ಪಿಸಬೇಕು. ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಅಂಗವಾಗಿ ಪ್ರತಿಜ್ಞಾ ವಿಧಿ ಬೋಧಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಯಾವುದೇ ಒಬ್ಬ ವ್ಯಕ್ತಿಗೆ ಅವನ ಇಚ್ಛೆ ವಿರುದ್ಧವಾಗಿ ಅವನನ್ನು ಕೂಡಿಟ್ಟು ಕೆಲಸವನ್ನು ಮಾಡಿಸುತ್ತಾರೆ, ಅದು ನಮ್ಮ ಗಮನಕ್ಕೆ ಬಂದರೆ, ನಾವು ಕಾನೂನು ರೀತಿ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಇರಬೇಕು, ಜೀತ ಪದ್ಧತಿ ನಿರ್ಮೂಲನೆ ಕಾನೂನು ತಿಳಿದು ಇಂತಹ ಘಟನೆಗಳು ಎಲ್ಲಿಯಾದರೂ ನಡೆದರೆ ಅದನ್ನು ಗುರುತಿಸಿ ಸಂಬಂಧ ಪಟ್ಟವರ ಗಮನಕ್ಕೆ ತರಬೇಕು. 

ಆಗ ಮಾತ್ರ ಕಾನೂನು ರೀತಿ ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯ. ಪ್ರತಿಯೊಬ್ಬ ತಂದೆ, ತಾಯಿ ಜೀತಪದ್ಧತಿಯ ಅಥವಾ ಜೀತದ ಕೆಲಸದಲ್ಲಿ ತೊಡಗಿದಲ್ಲಿ ಅವರ ಮಕ್ಕಳು ಸಹ ಆ ಕೆಲಸ ಮಾಡುತ್ತಾರೆ. ಈ ಜೀತಪದ್ಧತಿ ಸಂಪೂರ್ಣವಾಗಿ ನಿರ್ಮೂಲನೆ ಆಗಬೇಕೆಂಬುದು ಪ್ರತಿಯೊಬ್ಬರ ಧ್ಯೇಯ ಆಗಿದೆ. ಜೀತ ಪದ್ಧತಿ ಸಂಪೂರ್ಣವಾಗಿ ತೊಡೆದು ಹಾಕಲು ಬದ್ದರಾಗಿದ್ದಲ್ಲಿ ಮಾತ್ರ ನಿರ್ಮೂಲನೆ ಸಾಧ್ಯವಾಗುತ್ತದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ ಜಿಲ್ಲಾ ಮಟ್ಟದ ಜೀತಪದ್ದತಿ ನಿರ್ಮೂಲನಾ ದಿನಾಚರಣೆಯ ಜಾಥಾ ಅಂಗವಾಗಿ ಸಂವಿಧಾನದ ಪ್ರಸ್ತಾವನೆ ಓದುವ ಮೂಲಕ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.

ತಹಸೀಲ್ದಾರ್ ಅಶ್ವತ್ಥ್, ಜಿಪಂ ಸಿಪಿಒ ಮಲ್ಲನಾಯ್ಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಿಕಿ ವಾಸಂತಿ ಉಪ್ಪಾರ್, ಡಿಡಿಪಿಐ ಜಿ.ಕೊಟ್ರೇಶ್, ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣಕುಮಾರ ಹಾಗೂ ಇನ್ನಿತರರಿದ್ದರು.

ಜೀತ ಪದ್ಧತಿ ನಿರ್ಮೂಲನೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯವಿದೆ. ಸರ್ಕಾರ ಜನ ಕಲ್ಯಾಣಕ್ಕೆ ಸಾಕಷ್ಟು ಯೋಜನೆಗಳ ರೂಪಿಸಿದ್ದು ಅವುಗಳ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗುವಂತೆ ಹೇಳುವುದು ನಮ್ಮ ಕರ್ತವ್ಯ. ಸುರೇಶ್ ಬಿ.ಇಟ್ನಾಳ್, ಜಿಪಂ ಸಿಇಒ