ನಗರೋತ್ಥಾನದಿಂದ ಒಟ್ಟು ₹೪.೨೬ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ

ಕನ್ನಡಪ್ರಭ ವಾರ್ತೆ ದಾಂಡೇಲಿ

ವಿವಿಧ ವ್ಯಾಪಾರಿ ಮಳಿಗೆಗಳನ್ನು ಒಂದು ಸೂರಿನಡಿ ತರುವ ಉತ್ತಮ ಯೋಜನೆಯೊಂದಿಗೆ ನಗರದ ಮುಖ್ಯ ರಸ್ತೆಯಾದ ಜೆ.ಎನ್. ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಹೆಚ್ಚು ಕಡಿಮೆ ನಿರ್ಮಾಣಗೊಂಡಂತಿರುವ ವಾಣಿಜ್ಯ ಸಂಕೀರ್ಣ ಕಳೆದ ನಾಲ್ಕು ವರ್ಷಗಳಿಂದ ಕುಂಟುತ್ತಾ ಸಾಗಿರುವುದು ನಗರದ ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ.ಉತ್ತಮ ದರ್ಜೆಯ ವ್ಯಾಪಾರ ಮಳಿಗೆಯನ್ನು ದಾಂಡೇಲಿಗೆ ಕೊಡಬೇಕು ಎಂಬ ಮುಂದಾಲೋಚನೆಯಿಂದ ಶಾಸಕ ಆರ್.ವಿ. ದೇಶಪಾಂಡೆ ನಗರದ ಜೆ.ಎನ್. ರಸ್ತೆಯ ಮಾರುತಿ ಮಂದಿರದ ಪಕ್ಕದಲ್ಲಿರುವ ನಗರಸಭೆಯ ಜಾಗದಲ್ಲಿ ಶಾಪಿಂಗ್‌ ಕಾಂಪ್ಲೆಕ್ಸ್‌ಗೆ ಮಂಜೂರಿ ಮಾಡಿಕೊಂಡು ಬಂದಿದ್ದರು. ಇದು ನಗರೋತ್ಥಾನದಿಂದ ನಿರ್ಮಾಣವಾಗುತ್ತಿರುವ ಕಟ್ಟಡ, ಮೊದಲ ಹಂತದ ₹೨.೨೬ ಕೋಟಿ, ಎರಡನೇ ಹಂತದ ₹೨ ಕೋಟಿ ಒಟ್ಟು ₹೪.೨೬ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ.

ಈ ಜಾಗ ದಾಂಡೇಲಿ ನಗರ ವ್ಯಾಪ್ತಿಯ ಅತ್ಯಂತ ಮೌಲ್ಯಯುತವಾದ ಪ್ರದೇಶದಲ್ಲಿ ಈ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಳ್ಳುತ್ತಿದ್ದು, ಅನೇಕ ವ್ಯಾಪಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲಿದೆ. ನಗರದಲ್ಲೊಂದು ಸುಂದರ, ಬಹುಮುಖ್ಯವಾದ ವ್ಯಾಪಾರ ಸಮುಚ್ಚಯ ನಿರ್ಮಾಣವಾಗುವುದರ ಜೊತೆಗೆ, ಜೆ.ಎನ್. ರಸ್ತೆಗೊಂದು ಶೋಭೆಯಾಗಲಿದೆ ಎಂದು ಜನರ ಅನಿಸಿಕೆ.

ಈ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಏಪ್ರಿಲ್, ೨೦೨೨ರಲ್ಲಿ ಭೂಮಿ ಪೂಜೆ ನೆರವೇರಿಸಲಾಗಿತ್ತು. ಸುಮಾರು ನಾಲ್ಕು ವರ್ಷಗಳು ಕಳೆದಿವೆ. ಆದರೆ ಇಲ್ಲಿಯವರೆಗೂ ಈ ಕಟ್ಟಡ ಪೂರ್ಣಗೊಂಡು ಜನರ, ವ್ಯಾಪರಸ್ಥರ ಬಳಕೆಗೆ ದೊರೆಯಲಿಲ್ಲ ಎಂಬುದೇ ಈಗ ಚರ್ಚೆಯ ವಿಷಯವಾಗಿದೆ.ಇನ್ನು ಬಾಕಿ ಉಳಿದಿರುವ ಕೆಲಸ:


ವಾಣಿಜ್ಯ ಸಂಕೀರ್ಣದ ಹೊರಭಾಗವನ್ನು ನೋಡಿದರೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ ಎಂದು ತೋರುತ್ತದೆ. ಆದರೆ ಅದರ ಒಳ ಭಾಗದಲ್ಲಿ ಇನ್ನೂ ಕೆಲಸ ಬಾಕಿಯಿದೆ. ಒಳಗಡೆ ಫಿನಿಶಿಂಗ್ ಕೆಲಸಗಳು, ಮಳಿಗೆಗಳಿಗೆ ಶೆಟರ್ಸ್ ಹಾಕುವುದು, ಮಹಡಿಗಳಿಗೆ ಹೋಗಲು ಲಿಫ್ಟ್ ಹಾಕುವುದು ಸೇರಿದಂತೆ ಹಲವು ಕೆಲಸಗಳು ಬಾಕಿ ಇವೆ. ಸಂಬಂಧ ಪಟ್ಟ ಅಧಿಕಾರಿಗಳ ಹೇಳುವಂತೆ ಸುಮಾರು ಶೇ.೯೦ರಷ್ಟು ಕೆಲಸ ಪೂರ್ಣಗೊಂಡಿದೆ.

ವಿಳಂಬವಾಗಲು ಸಕಾಲದಲ್ಲಿ ಬಿಡುಗಡೆಯಾಗದ ಅನುದಾನವೇ ಕಾರಣ ಎನ್ನಲಾಗಿದೆ. ನಗರೋತ್ಥಾನ ಯೋಜನೆಯ ಮೂರನೇ ಹಂತದ ಅನುದಾನದಿಂದ ಈ ಕಟ್ಟಡ ನಿರ್ಮಾಣವಾಗುತ್ತಿದ್ದು, ಸಮಯಕ್ಕೆ ಸರಿಯಾಗಿ ಅನುದಾನ ಬರದೆ ಇರುವ ಕಾರಣ ಗುತ್ತಿಗೆದಾರರು ಕೆಲಸವನ್ನು ಸಮಯದೊಳಗೆ ಮಾಡಿಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿದೆ.

ಎಲ್ಲ ರೀತಿಯ ಸಾಮಗ್ರಿ ಒಂದೇ ಸೂರಿನಲ್ಲಿ ಸಿಗುವಂತಹ ವ್ಯವಸ್ಥೆ ಮಾಡುವ ವಿಚಾರ ಯೋಜನೆಯದ್ದಾಗಿದೆ. ಈ ಕಟ್ಟಡವನ್ನು ಪಡೆಯಲು ಈಗಾಗಲೇ ದೊಡ್ಡದೊಡ್ಡ ಮಾರಾಟ ಕಂಪನಿಗಳು ನಗರಾಡಳಿತವನ್ನು ಸಂಪರ್ಕಿಸಿದ್ದು, ಲೀಸ್ ಅಥವಾ ಬಾಡಿಗೆ ಆಧಾರದಲ್ಲಿ ದೊಡ್ಡ ಕಂಪನಿಯವರು ಈ ಶಾಪಿಂಗ್ ಕಾಂಪ್ಲೆಕ್ಸ್‌ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.ದಾಂಡೇಲಿ ನಗರದಲ್ಲಿ ದೊಡ್ಡ ಮಟ್ಟದ ವ್ಯಾಪಾರ ಮಳಿಗೆ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಈ ವ್ಯಾಪಾರ ಮಳಿಗೆ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎನ್ನುತ್ತಾರೆ ದಾಂಡೇಲಿ ನಗರಸಭೆ ಪೌರಾಯುಕ್ತ ವಿವೇಕ ಬನ್ನೆ.