ಮುಂಡರಗಿ: ಸಂವಿಧಾನದ ಆಶಯಗಳನ್ನು ಪ್ರಗತಿಪರ ಸಂಘಟನೆಗಳ, ಹೋರಾಟಗಳ ಮೂಲಕ ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡು ಬಂದವರು ಪ್ರಗತಿಪರ ಹೋರಾಟಗಾರ ಬಿ. ಬಾಬು ಎಂದು ಹೋರಾಟಗಾರ ಡಾ. ಸಿದ್ದನಗೌಡ ಪಾಟೀಲ ತಿಳಿಸಿದರು.

ಪಟ್ಟಣದ ಅಂಜುಮನ್ ಎ ಇಸ್ಲಾಂ ಕಮಿಟಿಯ ಶಾದಿಮಹಲ್‌ನಲ್ಲಿ ಮಂಗಳವಾರ ಗೆಳೆಯರ ಬಳಗದಿಂದ ಆಯೋಜಿಸಿದ್ದ ಬಿ. ಬಾಬು ನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಿ. ಬಾಬು ಕುಟುಂಬ, ಜಾತಿ, ಧರ್ಮ, ಗಡಿ ಪ್ರದೇಶವನ್ನು ಮೀರಿ ಎತ್ತರಕ್ಕೆ ಬೆಳೆದಿದ್ದರು. ಅವರು ಚಳವಳಿಯ ಸಂಗಾತಿಗಳನ್ನು ಕರೆದುಕೊಂಡು ಸ್ನೇಹದಾಸೋಹ ಮಾಡಿದರು. ಅವರು ಸ್ನೇಹದ ಮೂಲಕವೇ ಎಲ್ಲರ ಮನ ಗೆದ್ದಿದ್ದರು ಎಂದರು.

ಸಾಹಿತಿ ಡಾ. ವಿನಯಾ ವಕ್ಕುಂದ ಮಾತನಾಡಿ, ಸಾವು ಎನ್ನುವುದು ಮರುಹುಟ್ಟು. ಅದರಲ್ಲಿ ಒಬ್ಬ ವ್ಯಕ್ತಿ ಕಟ್ಟಿಕೊಟ್ಟ ಎಲ್ಲ ಕಾರ್ಯಗಳೂ ಅನಾವರಣಗೊಳ್ಳುತ್ತಾ ಹೋಗುತ್ತವೆ. ಜಾತಿ, ಕುಲ, ಧರ್ಮ, ಸೂತಕಗಳನ್ನು ಮರೆತು ಮುಖಕ್ಕೆ ಬಣ್ಣ ಬಳಿದುಕೊಂಡು ಎಲ್ಲರಿಗೂ ಉತ್ತಮ ಸಂದೇಶ ನೀಡಿದವರು ಬಿ. ಬಾಬಣ್ಣ. ಚಳವಳಿ ಅವರ ಬದುಕಿನ ಕೊನೆಯ ಕ್ಷಣದವರೆಗಿನ ಸಂಗಾತಿಯಾಗಿತ್ತು ಎಂದರು.

ಚಿಂತಕ ಬಸವರಾಜ ಸೂಳಿಭಾವಿ ಮಾತನಾಡಿ, ರಾಜಪ್ಪ ಹಡಪದ ಅವರಂತೆ ಈ ಹಿಂದೆ ಪ್ರಗತಿಪರ ಚಿಂತನೆಗಳು, ಹೋರಾಟಗಳು ರೂಪುಗೊಳ್ಳಲು ಮುಂಡರಗಿಯ ಬಿ. ಬಾಬು ಸ್ಟುಡಿಯೋ ನಮಗೆಲ್ಲ ಪ್ರಮುಖ ಕೇಂದ್ರವಾಗಿತ್ತು. ಅನೇಕ ಪ್ರಗತಿಪರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರೊಬ್ಬ ಸ್ನೇಹಜೀವಿಯಾಗಿದ್ದರು ಎಂದರು.

ಧಾರವಾಡ ವಿದ್ಯಾವರ್ಧಕ ಸಂಘದ ಪ್ರ. ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಪ್ರತಿವರ್ಷ ಅವರ ನೆನಪಿನಲ್ಲಿ ಒಂದು ವಿಚಾರಸಂಕಿರಣ ಹಾಗೂ ಪಟ್ಟಣದ ಒಂದು ಬೀದಿಗೆ ಅವರ ಹೆಸರಿಡುವ ಕಾರ್ಯವಾಗಬೇಕು ಎಂದರು.


ವೈ.ಎನ್. ಗೌಡರ, ರಾಮಕೃಷ್ಣ ದೊಡ್ಡಮನಿ, ಅಲ್ಲಮಪ್ರಭು ಬೆಟ್ಟದೂರ, ಡಾ. ಆರ್.ಎನ್. ರಾಜಾನಾಯಕ, ಈ. ಬಸವರಾಜು, ಬಿ.ಎ. ಕೆಂಚರಡ್ಡಿ, ಬಿ. ಪೀರಬಾಷಾ, ಡಾ. ಎಂ.ಡಿ. ವಕ್ಕುಂದ, ಬಿ.ಎಸ್. ಸೊಪ್ಪಿನ, ಸಿ.ಜಿ. ಹಿರೇಮಠ, ಶಂಕರಗೌಡ ಸಾತ್ಕಾರ, ಬಸವರಾಜ ಬೆಂಗೇರಿ, ಎಚ್.ಬಿ. ವಡ್ಡಟ್ಟಿ, ಬಸವರಾಜ ಗಾರ್ಗಿ, ಸಲೀಮ್ ಬಳಬಟ್ಟಿ ಮಾತನಾಡಿದರು.

ವಿಶ್ರಾಂತ ಪ್ರಾ. ಎ.ಬಿ. ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುತ್ತು ಹಾಳಕೇರಿ, ಡಾ. ನಿಂಗು ಸೊಲಗಿ, ನಾಗೇಶ ಹುಬ್ಬಳ್ಳಿ, ಯಲ್ಲೇಶಕುಮಾರ ಡೊಳ್ಳಿನ, ಕವಿ ಬಂಕಾಪೂರ, ಡಾ. ರಾಜಶೇಖರ ದಾನರಡ್ಡಿ, ಬಸವರಾಜ ಪೂಜಾರ, ಕರಬಸಪ್ಪ ಹಂಚಿನಾಳ, ಹೇಮಂತಗೌಡ ಪಾಟೀಲ, ರುದ್ರಗೌಡ ಪಾಟೀಲ, ಅಶೋಕ ಹುಬ್ಬಳ್ಳಿ, ಕೊಟ್ರೇಶ ಅಂಗಡಿ, ನಿಂಗಪ್ಪ ಕುಂಬಾರ ಇತರರು ಇದ್ದರು. ಕಳಕೇಶ ಗುಡ್ಲಾನೂರ ಸಂವಿಧಾನ ಪೀಠಿಕೆ ಓದಿಸಿದರು. ಶಂಕ್ರಣ್ಣ ಸಂಕಣ್ಣವರ ಹಾಗೂ ಶರೀಫ್ ಬಿಳೇಲಿ ತಂಡದಿಂದ ಕ್ರಾಂತಿಗೀತೆಗಳು ಮೊಳಗಿದವು. ಶಾಂತಕುಮಾರ ಪೂಜಾರ ಸ್ವಾಗತಿಸಿ, ಎ.ಕೆ. ಮುಲ್ಲಾನವರ ನಿರೂಪಿಸಿ, ವಂದಿಸಿದರು.