ಸಾರಾಂಶ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ತಾಲೂಕು ಹಂತದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸುವ ಅನುಷ್ಠಾನ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡುವುದರಿಂದ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ವಾಗುತ್ತದೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.ನಗರದ ಡಯಟ್‍ನಲ್ಲಿ ಡಿಎಸ್ ಇಆರ್‌ಟಿ ವತಿಯಿಂದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಹಾಜರಾತಿ ಪ್ರಾಧಿಕಾರ ಹಾಗೂ ಇಲಾಖಾ ಅಧಿಕಾರಿಗಳಿಗೆ ಸೋಮವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣ ಸಂಯೋಜಕರು ಮತ್ತು ಸಿ.ಆರ್.ಪಿಯವರು ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಕಾರ್ಯೋನ್ಮುಖರಾಬೇಕು. ಎಲ್ಲಾ ಮಕ್ಕಳಿಗೆ ಶಿಕ್ಷಣ ಕೊಡುವುದು ಶೈಕ್ಷಣಿಕ ಭಾಗೀದಾರರ ಜವಾಬ್ದಾರಿಯಾಗಿದೆ. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಬಾಲ್ಯ ಹಂತವನ್ನು ಉತ್ತಮಗೊಳಿಸಿ ಜವಾಬ್ದಾರಿಯುತ ನಾಗರಿಕರಾಗಲು ಶ್ರಮಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ಸಿ.ಎಸ್.ವೆಂಕಟೇಶಪ್ಪ ಮಾತನಾಡಿ, ಶೈಕ್ಷಣಿಕ ವರ್ಷ ಪ್ರಾರಂಭದ ದಿನದಲ್ಲಿ ನಾವು ಶಾಲೆಯ ಕಡೆ ಮಕ್ಕಳನ್ನು ಆಕರ್ಷಿಸುವಂತೆ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಶಿಕ್ಷಣ ಪಡೆಯಲು ದಾಖಲಾತಿ, ಹಾಜರಾತಿ, ಉಳಿಕೆ, ಸಾಧನೆ ಈ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಶಾಲೆಗೆ ದಾಖಲಾದ ಮಗು ತನ್ನ ಶಿಕ್ಷಣ ಪೂರ್ಣಗೊಳಿಸಲು ಶೈಕ್ಷಣಿಕ ಅನುಪಾಲನಾಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ತಾಲೂಕು ಹಂತದಲ್ಲಿ ಶಿಕ್ಷಣ ಸಂಯೋಜಕರು ಮಕ್ಕಳ ಹಾಜರಾತಿ ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸುವುದರ ಮೂಲಕ ಮಕ್ಕಳು ಗೈರುಹಾಜರಾಗದಂತೆ ಗಮನ ನೀಡಬೇಕು ಎಂದರು.ಸಂಪನ್ಮೂಲ ವ್ಯಕ್ತಿಗಳಾದ ಕೆ.ಜಿ.ಪ್ರಶಾಂತ್, ಬಿ.ಎಸ್.ನಿತ್ಯಾನಂದ, ಉಪ ಪ್ರಾಚಾರ್ಯ ಅಶ್ವಥ್ ನಾರಾಯಣ, ಹಿರಿಯ ಉಪನ್ಯಾಸಕರಾದ ತಿಪ್ಪೇಸ್ವಾಮಿ, ಗಿರಿಜಾ, ಸಹಾಯಕ ಯೋಜನಾ ಸಮನ್ವಯಾಧಿಕಾರಿ ಮಂಜುನಾಥ್, ಉಪನ್ಯಾಸಕ ಎಸ್.ಬಸವರಾಜು, ಬಿ.ಆರ್.ಸಿ ಸುರೇಂದ್ರನಾಥ್, ಶ್ರೀನಿವಾಸ್, ತಿಪ್ಪೇಸ್ವಾಮಿ, ತಿಪ್ಪೇರುದ್ರಪ್ಪ, ಶಿಕ್ಷಕಿ ಗಿರಿಜಮ್ಮ ಮತ್ತಿತರರಿದ್ದರು.