ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರುಸಿಬಿಐ ತನಿಖೆಗೆ ಒಪ್ಪಿಗೆ ನೀಡುವ ವೇಳೆ ಅನುಸರಿಸಬೇಕಾದ ನಿಯಮಗಳನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪಾಲಿಸಿಲ್ಲ ಎಂದು ಹೈಕೋರ್ಟ್ ಮುಂದೆ ರಾಜ್ಯ ಸರ್ಕಾರದ ಪರ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು.
ಡಿ.ಕೆ. ಶಿವಕುಮಾರ್ ಅವರ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ತನಿಖೆ ನಡೆಸಲು 2019ರ ಸೆ.25ರಂದು ಅಂದಿನ ರಾಜ್ಯ ಬಿಜೆಪಿ ಸರ್ಕಾರ ನೀಡಿದ್ದ ಅನುಮತಿ ಹಿಂಪಡೆದ ಕಾಂಗ್ರೆಸ್ ಸರ್ಕಾರದ ಕ್ರಮ ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಿಬಿಐ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ಹಿರಿಯ ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಬಂದಿತ್ತು.ಕಪಿಲ್ ಸಿಬಲ್ ಅವರು ವಾದ ಮಂಡಿಸಿ, ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡುವಾಗ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ನಿಯಮ/ಮಾನದಂಡಗಳನ್ನು ಪಾಲಿಸಿಲ್ಲ. ಸಿಬಿಐ ತನಿಖೆಗೆ ನೀಡುವುದಕ್ಕೂ ಮುನ್ನ ಸಂಬಂಧಿತ ಪ್ರಾಧಿಕಾರದಿಂದ ಅಭಿಪ್ರಾಯ ಪಡೆದಿರುವುದನ್ನು ಉಲ್ಲೇಖಿಸಿಲ್ಲ ಎಂದರು.
------ಯಾವ ನಿಬಂಧನೆಗಳಡಿ ಅಪರಾಧ ಎಸಗಲಾಗಿದೆ ಹಾಗೂ ಯಾವ ನಿಬಂಧನೆ ಉಲ್ಲಂಘಿಸಲಾಗಿದೆ ಎಂಬುದನ್ನು ಪರಿಶೀಲಿಸಿಲ್ಲ. ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿ ತಿಳಿಸಿರುವ ಕಾರಣದಿಂದ ಎಫ್‌ಐಆರ್ ದಾಖಲಿಸಲು ಸಾಧ್ಯವಿಲ್ಲ. ಆದ್ದರಿಂದ ಸಿಬಿಐ ತನಿಖೆಗೆ ಸಮ್ಮತಿ ನೀಡಿದ ಕ್ರಮ ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತವಾಗಿದೆ ಎಂದು ಆಕ್ಷೇಪಿಸಿದರು.ಡಿ.ಕೆ. ಶಿವಕುಮಾರ್ ಪರ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದಿಸಿ, ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಸಮ್ಮತಿ ನೀಡುವುದು ಅತ್ಯಗತ್ಯ. ಮೊದಲು ಕೇಂದ್ರ, ನಂತರ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಅನುಮತಿ ನೀಡಬೇಕು. ರಾಜ್ಯ ಪ್ರವೇಶಿಸಲು ಸಿಬಿಐಗೆ ಕೇಂದ್ರ ಸರ್ಕಾರದ ಆಂತರಿಕ ಅನುಮತಿ ಅಗತ್ಯ. ಸಿಬಿಐಗೆ ರಾಜ್ಯ ಪ್ರವೇಶಿಸಲು ಅನುಮತಿಸುವುದು ಒಕ್ಕೂಟ ವ್ಯವಸ್ಥೆಯ ಉಲ್ಲಂಘನೆಯಾಗುತ್ತದೆ ಎಂದರು.
ಅಂತಿಮವಾಗಿ ಕಪಿಲ್ ಸಿಬಲ್ ಮತ್ತು ಸಿಂಘ್ವಿ ಅವರು ಲಿಖಿತ ವಾದಾಂಶ ಸಲ್ಲಿಸುವುದಾಗಿ ತಿಳಿಸಿದರು. ಪ್ರತಿವಾದ ಮಂಡಿಸಲು ಸಿಬಿಐ ಪರ ವಕೀಲರು ಕಾಲಾವಕಾಶ ಕೋರಿದರು. ನಂತರ ಅರ್ಜಿಗಳ ವಿಚಾರಣೆಯನ್ನು ನ್ಯಾಯಪೀಠ ಮೇ 31ಕ್ಕೆ ಮುಂದೂಡಿತು.