ತುಳುವರ ಆಚರಣೆ ಬಗ್ಗೆ ಯುವಜನತೆಗೆ ಅರಿವು ಅಗತ್ಯ: ಜಯಂತ ಎಣ್ಮೂರು

| Published : May 28 2024, 01:06 AM IST

ತುಳುವರ ಆಚರಣೆ ಬಗ್ಗೆ ಯುವಜನತೆಗೆ ಅರಿವು ಅಗತ್ಯ: ಜಯಂತ ಎಣ್ಮೂರು
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರು ತುಳುಕೂಟದ ವತಿಯಿಂದ ವಿವೇಕಾನಂದ ಬಿಎಡ್ ಕಾಲೇಜಿನ ಸಹಯೋಗದಲ್ಲಿ ತೆಂಕಿಲ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಪತ್ತನಾಜೆದ ಕೂಟ ಕಾರ್ಯಕ್ರಮ ನಡೆಯಿತು. ಆಚರಣೆ ಮಹತ್ವದ ಕುರಿತು ತಜ್ಞರು ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಪತ್ತನಾಜೆ ಸಹಿತ ತುಳುವರ ಎಲ್ಲಾ ಆಚರಣೆಗಳು ಪ್ರಕೃತಿಯ ಜತೆ ಸಹಬಾಳ್ವೆ ನಡೆಸುವ ಕಾರ್ಯಕ್ರಮಗಳಾಗಿದ್ದು ಯುವಜನತೆ ಅವುಗಳ ಮಹತ್ವವನ್ನು ಅರಿತು ಮುಂದಿನ ಜನಾಂಗಕ್ಕೆ ತಿಳಿಸುವ ಕಾರ್ಯ ಮಾಡುವ ಅವಶ್ಯಕತೆ ಇದೆ. ಪತ್ತನಾಜೆ ಅಂದರೆ ತುಳುವರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮುಕ್ತಾಯ ಹಾಡಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಿದ್ಧರಾಗುವ ದಿನವಾಗಿದೆ ಎಂದು ಕೊಂಡಾಡಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಗುರು ಜಯಂತ ಎಣ್ಮೂರು ಹೇಳಿದ್ದಾರೆ.

ಪುತ್ತೂರು ತುಳುಕೂಟದ ವತಿಯಿಂದ ವಿವೇಕಾನಂದ ಬಿಎಡ್ ಕಾಲೇಜಿನ ಸಹಯೋಗದಲ್ಲಿ ತೆಂಕಿಲ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ನಡೆದ ಪತ್ತನಾಜೆದ ಕೂಟ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಪುತ್ತೂರು ತುಳುಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಅವರು ಪುತ್ತೂರು ತುಳುಕೂಟವು ತುಳುವರ ಎಲ್ಲಾ ಸಾಂಪ್ರದಾಯಿಕ ಉತ್ಸವಾದಿಗಳನ್ನು ಆಚರಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡುತ್ತಿದೆ ಎಂದರು.

ಬಿ.ಎಡ್. ಕಾಲೇಜಿನ ಪ್ರಾಂಶುಪಾಲೆ ಡಾ. ಶೋಭಿತಾ ಸತೀಶ್, ಮುಂದೆ ಅಧ್ಯಾಪಕರಾಗಲಿರುವ ಬಿ.ಎಡ್. ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳು ಉಪಯುಕ್ತ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಸದಸ್ಯೆ ತ್ರಿವೇಣಿ ಪೆರ್ವೋಡಿ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ತುಳುಕೂಟದ ಕಾರ್ಯದರ್ಶಿ ಡಾ. ರಾಜೇಶ್ ಬೆಜ್ಜಂಗಳ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮ ಸಂಯೋಜಕ ಉಪನ್ಯಾಸಕಿ ಅನುರಾಧ ಹಾಜರಿದ್ದರು. ಚೈತನ್ಯಾ ರೈ ಸ್ವಾಗತಿಸಿದರು. ಯಕ್ಷಿತಾ ವಂದಿಸಿದರು. ಧನ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು.