ರೇಣುಕಾಚಾರ್ಯ ಉಚ್ಚಾಟಿಸಲು ತಿಂಗಳೊಳಗೆ ದೆಹಲಿ ವರಿಷ್ಠರಿಗೆ ದೂರು : ಹೊನ್ನಾಳಿ ತಾಲೂಕು ಮುಖಂಡ ಶಾಂತರಾಜ ಪಾಟೀಲ್‌

| Published : Dec 07 2024, 12:31 AM IST / Updated: Dec 07 2024, 01:07 PM IST

ರೇಣುಕಾಚಾರ್ಯ ಉಚ್ಚಾಟಿಸಲು ತಿಂಗಳೊಳಗೆ ದೆಹಲಿ ವರಿಷ್ಠರಿಗೆ ದೂರು : ಹೊನ್ನಾಳಿ ತಾಲೂಕು ಮುಖಂಡ ಶಾಂತರಾಜ ಪಾಟೀಲ್‌
Share this Article
  • FB
  • TW
  • Linkdin
  • Email

ಸಾರಾಂಶ

 ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟಿಸುವಂತೆ ಡಿ.31ರೊಳಗೆ ದೆಹಲಿಯಲ್ಲಿ ರಾಷ್ಟ್ರೀಯ ನಾಯಕರಿಗೆ ದೂರು ನೀಡಿ, ಒತ್ತಾಯಿಸಲಿದ್ದೇವೆ ಎಂದು ಹೊನ್ನಾಳಿ ತಾಲೂಕು ಮುಖಂಡ ಶಾಂತರಾಜ ಪಾಟೀಲ್‌ ಹೇಳಿದ್ದಾರೆ.

 ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸದೇ, ಬಂಡಾಯ ಮಾಡಿ ಪಕ್ಷದ ಸೋಲಿಗೆ ಕಾರಣರಾದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟಿಸುವಂತೆ ಡಿ.31ರೊಳಗೆ ದೆಹಲಿಯಲ್ಲಿ ರಾಷ್ಟ್ರೀಯ ನಾಯಕರಿಗೆ ದೂರು ನೀಡಿ, ಒತ್ತಾಯಿಸಲಿದ್ದೇವೆ ಎಂದು ಹೊನ್ನಾಳಿ ತಾಲೂಕು ಮುಖಂಡ ಶಾಂತರಾಜ ಪಾಟೀಲ್‌ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೇಣುಕಾಚಾರ್ಯ ಅತ್ಯಂತ ಕಳಂಕಿತ, ಮನಬಂದಂತೆ ಮಾತನಾಡುವ ವ್ಯಕ್ತಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳಿದರೆ ಚುನಾವಣೆಯಲ್ಲಿ ಮತ ಹಾಕುತ್ತಾರಾ ಎಂದು ಸಭೆಯಲ್ಲಿ ಮಾತನಾಡಿದ್ದರು. ಪಕ್ಷದ ಮಾಜಿ ಅಧ್ಯಕ್ಷ ನಳೀನಕುಮಾರ ಕಟೀಲು, ರಾಷ್ಟ್ರೀಯ ನಾಯಕ ಸಂತೋಷ್‌ಜೀ ಬಗ್ಗೆ ಹಗುರ ಹೇಳಿಕೆ ನೀಡಿದ್ದು ಯಾರೂ ಮರೆತಿಲ್ಲ ಎಂದರು.

ದಾವಣಗೆರೆ ಬಿಜೆಪಿ ಕಾರ್ಯಾಲಯಕ್ಕೆ ಬಂದು ಪಕ್ಷದಲ್ಲಿ ಯಾವುದೂ ಸರಿ ಇಲ್ಲ, ಬಿಜೆಪಿ ಈಗ ಮುಳುಗುವ ಹಡಗು ಅಂತಾ ಹೇಳಿ, ಬೆಂಗಳೂರಿನಿಂದ ವಾಪಸ್‌ ಬರುವಷ್ಟರಲ್ಲಿ ಪಕ್ಷದಲ್ಲಿ ಎಲ್ಲವೂ ಸರಿಹೋಗಿದೆ ಎಂದಿದ್ದಾರೆ. ಕಾಂಗ್ರೆಸ್ಸಿನ ನಾಯಕ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನರನ್ನು ಗೌಪ್ಯವಾಗಿ ಭೇಟಿ ಮಾಡಿ, ಕಾಂಗ್ರೆಸ್ ಸೇರಲು ಹೋಗಿದ್ದರು. ಲೋಕಸಭೆ ಚುನಾವಣೆಗೆ ಮೊದಲೇ ದಾವಣಗೆರೆ ಅಭ್ಯರ್ಥಿ ವಿಷಯದಲ್ಲಿ ಬಂಡಾಯವೆದ್ದು, ಪಕ್ಷಕ್ಕೆ ಚ್ಯುತಿ ತಂದವರು ರೇಣುಕಾಚಾರ್ಯ ಎಂದು ದೂರಿದರು.

ಮಾಜಿ ಸಿಎಂ ಯಡಿಯೂರಪ್ಪ ಅವರ ಮಾನಸ ಪುತ್ರನೆಂದು ಹೇಳಿಕೊಳ್ತಾರೆ. ಮತ್ತೊಂದು ಕಡೆ ಬಿಎಸ್‌ವೈ ವಿರುದ್ಧವೇ ಬಂಡಾಯ ಎದ್ದಿದ್ದರು. ಕಾಂಗ್ರೆಸ್ ಸೇರಲು ಮೂರು ದಿನ ರಾತ್ರಿ ಕಾರ್ಯಕರ್ತರ ಜೊತೆಗೆ ಚರ್ಚಿಸಿದ್ದರು. ಒಂದುವೇಳೆ ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷ ಆಗದೇ ಹೋಗಿದ್ದರೆ ಇಷ್ಟರಲ್ಲಿ ಕಾಂಗ್ರೆಸ್ ಸೇರಿರುತ್ತಿದ್ದರು. ಬಿಜೆಪಿಯಲ್ಲಿ ಇಲ್ಲಸಲ್ಲದ ಹೇಳಿಕೆ ನೀಡಿ, ರೇಣುಕಾಚಾರ್ಯ ಜೋಕರ್‌ನಂತಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಪಕ್ಷದ ಮುಖಂಡರಾದ ಜಗದೀಶ, ನೆಲಹೊನ್ನೆ ದೇವರಾಜ, ಚನ್ನೇಶ, ಸಿದ್ದೇಶ್, ಮಂಜಣ್ಣ ಇತರರು ಇದ್ದರು.

* ಸಿದ್ದು, ಡಿಕೆಶಿ, ಎಸ್ಸೆಸ್ಸೆಂ ಗೌಪ್ಯ ಭೇಟಿ ಯಾಕೆ?ಹೊನ್ನಾಳಿ ಬಿಜೆಪಿ ಹಿರಿಯ ಮುಖಂಡ ಎಂ.ಆರ್.ಮಹೇಶ ಮಾತನಾಡಿ, ಕಳೆದ ಲೋಕಸಭೆ ಚುನಾವಣೆ ಮುನ್ನ ಕಾಂಗ್ರೆಸ್ ಸೇರಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಜಿಲ್ಲಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನರನ್ನು ಗೌಪ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದವರು ರೇಣುಕಾಚಾರ್ಯ. ಬಿಜೆಪಿಯೇ ಘೋಷಿಸಿದ್ದ ಅಧಿಕೃತ ಅಭ್ಯರ್ಥಿ ಸೋಲಿಗೆ ಒಳಸಂಚು ಮಾಡಿದ್ದೂ ರೇಣುಕಾಚಾರ್ಯ. ಈಗ ಪಕ್ಷದಲ್ಲಿ ಯಾವುದೇ ಹುದ್ದೆ ಇಲ್ಲದಿದ್ದರೂ ಮಾಧ್ಯಮಗಳ ಮುಂದೆ ಪ್ರಚಾರಕ್ಕಾಗಿ ತಮ್ಮನ್ನು ತಾವು ರಾಜ್ಯ ನಾಯಕನಂತೆ ಬಿಂಬಿಸಿಕೊಳ್ಳುವುದೂ ನಿಂತಿಲ್ಲ. ಬಿಜೆಪಿ ವರಿಷ್ಠರು ಇಂತಹವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟಿಸಿ, ಪಕ್ಷದ ಶಿಸ್ತು ಕಾಪಾಡಬೇಕು ಎಂದರು.