ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ

| Published : Jun 27 2024, 01:08 AM IST

ಸಾರಾಂಶ

ಈ ಬಾರಿ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಹಾಗೂ ಫಲಿತಾಂಶ ಕಡಿಮೆಯಾಗಲು ಕಾರಣವೇನು ಎಂದು ಮಾಹಿತಿ ಪಡೆದುಕೊಂಡರು.

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ

ಸರ್ಕಾರಿ ಶಾಲಾ - ಕಾಲೇಜುಗಳಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಂತೆ ಶಿಕ್ಷಕರಿಗೆ ಹಾಗೂ ಉಪನ್ಯಾಸಕರಿಗೆ ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಕರೆ ನೀಡಿದರು.

ತಾಲೂಕಿನ ಕಿತ್ತೂರು ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಸುಮಾರು 50 ಲಕ್ಷ ರು. ವೆಚ್ಚದಲ್ಲಿ 2 ಹೆಚ್ಚುವರಿ ಕಾಲೇಜು ಕೊಠಡಿಗಳ ಕಾಮಗಾರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಈ ಬಾರಿ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಹಾಗೂ ಫಲಿತಾಂಶ ಕಡಿಮೆಯಾಗಲು ಕಾರಣವೇನು ಎಂದು ಮಾಹಿತಿ ಪಡೆದುಕೊಂಡರು. ಕಾಲೇಜಿನಲ್ಲಿ 4 ಜನ ಕಾಯಂ ಉಪನ್ಯಾಸಕರು ಬೇರೆ ಕಡೆಗೆ ನಿಯೋಜನೆಗೊಂಡಿರುವುದರಿಂದ ಕಾಲೇಜು ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಪ್ರವಚನಗಳು ಆಗುತ್ತಿಲ್ಲ ಎಂದು ಪ್ರಾಂಶುಪಾಲ ರವಿಕುಮಾರ್ ಸಚಿವರಲ್ಲಿ ಮನವಿ ಮಾಡಿದರು.

ತಕ್ಷಣ ಸಚಿವ ಕೆ. ವೆಂಕಟೇಶ್ ಅವರು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮರಿಸ್ವಾಮಿ ಅವರಿಗೆ ದೂರವಾಣಿ ಕರೆ ಮಾಡಿ ಈ ಕಾಲೇಜಿನಿಂದ ಬೇರೆಡೆಗೆ ನಿಯೋಜನೆಗೊಂಡಿರುವ ನಾಲ್ಕು ಜನ ಉಪನ್ಯಾಸಕರ ನಿಯೋಜನೆ ರದ್ದುಪಡಿಸಿ ನಾಳೆಯಿಂದಲೇ ಕಾಲೇಜಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶ ಮಾಡುವಂತೆ ತಿಳಿಸಿದರು.

ಸಂಜೆ ಸಮಯದಲ್ಲಿ ಕಾಲೇಜು ಆವರಣಕ್ಕೆ ಕೆಲವು ಪುಂಡ ಪೋಕರಿ ಹುಡುಗರು ಬರುತ್ತಾರೆ. ಅವರನ್ನು ನಿಯಂತ್ರಿಸುವಂತೆ ಬೆಟ್ಟದಪುರ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.

ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಜಶೇಖರ್, ಗ್ರಾಪಂ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷೆ ಪ್ರಭಾವತಿ, ಗ್ರಾಪಂ ಸದಸ್ಯರಾದ ಜಗದೀಶ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶ್ರೀಧರ್. ದೇವಕಿ ದೀಪಕ್, ತಾಲೂಕು ದಂಡಾಧಿಕಾರಿ ಕುಂಜೀ ಅಹಮದ್, ತಾಪಂ ಇಒ ಸುನಿಲ್ ಕುಮಾರ್, ಜಿಪಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ಮಲ್ಲಿಕಾರ್ಜುನ್, ಸಹಾಯಕ ಎಂಜಿನಿಯರ್ ಸುಭಾಷ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ಕೃಷ್ಣಮೂರ್ತಿ , ಕಿತ್ತೂರು ಹಾರಂಗಿ ಇಲಾಖೆಯ ಸಹಾಯಕ ಮಂಜುನಾಥ್, ಪ್ರಾಂಶುಪಾಲ ರವಿಕುಮಾರ್, ಮುಖ್ಯ ಶಿಕ್ಷಕ ವಿಜಯ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್, ಕಾಂಗ್ರೆಸ್ ಮುಖಂಡರಾದ ಡಿ.ಟಿ. ಸ್ವಾಮಿ, ಶ್ರೀಧರ್, ರಾಜೇಶ್ ಇದ್ದರು.