ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಸಿ
ಕಾಂಗ್ರೆಸ್ ಸರ್ಕಾರ ನವೆಂಬರ್ ಕ್ರಾಂತಿ ಏನು ಎಂಬ ಒಳಸುಳಿ ಮುಚ್ಚಿಡಲು, ಸಮಾಜದಲ್ಲಿ ಸಮಸ್ಯೆ ತಂದೊಡುವ ಕೆಲಸ ಮಾಡುತ್ತಿದೆ. ಅದರಲ್ಲಿ ವಿರೋಧಾಭಾಸ, ಗೊಂದಲದ ಮಧ್ಯೆ ನಡೆಯುತ್ತಿರುವ ಹಿಂದುಳಿದ ವರ್ಗದ ಆಯೋಗ ನಡೆಸುತ್ತಿರುವ ಜಾತಿ ಸಮೀಕ್ಷೆ ಉದಾಹರಣೆಯಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ಟ ಆರೋಪಿಸಿದರು.ಶುಕ್ರವಾರ ನಗರದ ದೀನದಯಾಳ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೊಂದಲದ ಗೂಡಾಗಿರುವ ಸಮೀಕ್ಷೆಗಾಗಿ ಶಾಲಾ ರಜೆಯನ್ನು ಕೊನೆ ಹಂತದಲ್ಲಿ ಅ.18ರವರೆಗೆ ಏಕಾಏಕಿ ಮುಂದೂಡಲಾಗಿದೆ. ಇದಕ್ಕೂ ಮೊದಲು ಶಾಲೆಗಳಿಗೆ ಅತಿವೃಷ್ಠಿಯಿಂದ ರಜೆ ನೀಡಲಾಗಿತ್ತು. ಅದನ್ನೇ ಸರಿದೂಗಿಸಲು ಸಾಧ್ಯವಾಗದ ಸಂದರ್ಭದಲ್ಲಿ ಪುನಃ ರಜೆ ನೀಡಿರುವುದುರು ಮಕ್ಕಳ ಶೈಕ್ಷಣಿಕ ಜೀವನದ ಜೊತೆಗೆ ರಾಜ್ಯ ಸರ್ಕಾರ ಚೆಲ್ಲಾಟ ಆಡುತ್ತಿರುವುದು ಖಂಡನೀಯ ಎಂದರು.
ಜಾತಿ ಸಮೀಕ್ಷೆಯ ಪರಿಣಾಮ ದಸರಾ ರಜೆ ನಂತರ ಪುನಃ ರಜೆ ಆರಂಭವಾಗಿದೆ. ಬಳಿಕ ಹಬ್ಬದ ರಜೆ ಬರಲಿದೆ. ಇದು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಲಿದೆ. ಪಠ್ಯ ಮುಗಿಸದೇ ಮಕ್ಕಳ ಮೇಲೆ ಒತ್ತಡ ನಿರ್ಮಾಣ ಆಗಲಿದೆ. ಶಿಕ್ಷಕರಿಗೂ ಸಹ ಹಲವು ಕೆಲಸದ ನಡುವೆ ಗಣತಿಗೆ ಬಳಸಿಕೊಂಡ ಕಾರಣ ಅವರಿಗೂ ಒತ್ತಡ ಹೆಚ್ಚಿದೆ. ನೆಟ್‌ವರ್ಕ್ ಸಮಸ್ಯೆಯಿಂದ ಮನೆಗೆ ಹೋಗಿ ಸಮೀಕ್ಷೆ ಮಾಡಲೂ ಆಗುತ್ತಿಲ್ಲ. ಕೇಂದ್ರ ಸರ್ಕಾರ ಮಾಡುವ ಗಣತಿಗೆ ಮಾನ್ಯತೆ ಇದೆ. ರಾಜ್ಯದ ಗಣತಿಗೆ ಯಾವುದೇ ಮಾನ್ಯತೆ ಇಲ್ಲ. ಆದರೂ ಜಾತಿ ವಿಷಯ ಬೀಜ ಬಿತ್ತಲು, ಹಿಂದೂಗಳನ್ನು ಪಡೆಯಲು ಹಿಂದುಳಿದ ವರ್ಗ ಪ್ರಯತ್ನ ಮಾಡುತ್ತಿದೆ. ಅದಕ್ಕಾಗಿ ಜಾತಿ ಸಮೀಕ್ಷೆ ಮಾಡುತ್ತಿದೆ ಎಂದು ದೂರಿದರು.ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು ವಿಶ್ವಗುರು ಮಾಡುವ ಪ್ರಯತ್ನದಲ್ಲಿದ್ದಾರೆ. ಮೋದಿಯವರು ಪ್ರಮುಖ ಸ್ಥಾನದಲ್ಲಿದ್ದು 25 ವರ್ಷಗಳು ತುಂಬುತ್ತಿದೆ. ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಧಾನಿಯವರೆಗೆ ಸೋಲಿಲ್ಲದ ಸರದಾರನಾಗಿ ಈಗ ದೇಶಕ್ಕೆ ಸದೃಢ ನಾಯಕತ್ವ ನೀಡಿದ್ದು, ಎಲ್ಲರೂ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ರಾಜ್ಯದಲ್ಲಿ ಅತಿವೃಷ್ಠಿ ಹೆಚ್ಚಾಗುತ್ತಿದೆ. ಮಳೆ ಹಾನಿಯೂ ಹೆಚ್ಚಿದೆ. ಆದರೆ ರಾಜ್ಯ ಸರ್ಕಾರ ಕಾಟಾಚಾರದ ಮಳೆ ಹಾನಿ ಸಮೀಕ್ಷೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಎಲ್ಲಿದ್ದಾರೆ? ಎಂಬುದೇ ತಿಳಿಯುತ್ತಿಲ್ಲ. ಇಲ್ಲಿ ಅಡಿಕೆ ಕೊಳೆ, ಬತ್ತಕ್ಕೆ ಬಿಳಿ ಕೊಳೆ ರೋಗ, ಜೋಳ ಹಾಗೂ ಶುಂಠಿ ಸಂಪೂರ್ಣ ಹಾಳಾಗುತ್ತಿದೆ. ಕಾರಣ ಇದೆಲ್ಲವನ್ನೂ ಸಮೀಕ್ಷೆ ಮಾಡಿ ತಕ್ಷಣ ಪರಿಹಾರ ನೀಡವ ಕಾರ್ಯ ಆಗಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಶಿರಸಿ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಜಿಲ್ಲಾ ಕೋರ್ ಕಮಿಟಿ ಸದಸ್ಯ ಆರ್.ಡಿ. ಹೆಗಡೆ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ ನಾಯ್ಕ, ಶಿರಸಿ ಗ್ರಾಮೀಣ ಮಂಡಲಾಧ್ಯಕ್ಷೆ ಉಷಾ ಹೆಗಡೆ, ಪ್ರಮುಖರಾದ ರವಿಚಂದ್ರ ಶೆಟ್ಟಿ, ಶ್ರೀರಾಮ ನಾಯ್ಕ ಇದ್ದರು.