ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನೆ

| Published : Oct 11 2025, 12:03 AM IST

ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ, ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಂಡು ರಾಜ್ಯ ಸರ್ಕಾರ ಈ ಬಗ್ಗೆ ಲಿಖಿತ ರೂಪದಲ್ಲಿ ಭರವಸೆ ನೀಡುವಂತೆ ಆಗ್ರಹಿಸಿದರು.

ಇಲಾಖೆಯ ನೇಮಕಾತಿಯಲ್ಲಿ ಕನಿಷ್ಠ ವಿದ್ಯಾರ್ಹತೆ ನಿಗದಿ ಪಡಿಸಲು ಆಗ್ರಹಕನ್ನಡಪ್ರಭ ವಾರ್ತೆ ಶಿರಸಿ

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯಾರಣ್ಯಾಧಿಕಾರಿ ಹುದ್ದೆ ನೇರ ನೇಮಕಾತಿಯಲ್ಲಿ ಬಿಎಸ್ಸಿ ಅರಣ್ಯ ಶಾಸ್ತ್ರ ಪದವಿಯನ್ನೇ ಕನಿಷ್ಠ ವಿದ್ಯಾರ್ಹತೆಯನ್ನಾಗಿ ಮಾಡುವಂತೆ ಆಗ್ರಹಿಸಿ, ನಗರದ ಬನವಾಸಿ ರಸ್ತೆಯಲ್ಲಿರುವ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ, ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಂಡು ರಾಜ್ಯ ಸರ್ಕಾರ ಈ ಬಗ್ಗೆ ಲಿಖಿತ ರೂಪದಲ್ಲಿ ಭರವಸೆ ನೀಡುವಂತೆ ಆಗ್ರಹಿಸಿದರು.

ಅನ್ಯಾಯ ಅನ್ಯಾಯ ಅರಣ್ಯ ಪದವಿ ವಿದ್ಯಾರ್ಥಿಗಳಿಗೆ ಅನ್ಯಾಯ, ಕಾಡಿನ ಮಕ್ಕಳು ನಾವು, ಕಾಣುತ್ತಿಲ್ಲವೇ ನಮ್ಮ ನೋವು, ಹೋರಾಟ, ಹೋರಾಟ, ಗೆಲ್ಲುವವರೆಗೂ ಹೋರಾಟ ಎಂಬ ಘೋಷಣೆ ಕೂಗಿ ವಿದ್ಯಾರ್ಥಿಗಳು ಕಾಲೇಜಿನ ಎದುರು ಪ್ರತಿಭಟಿಸಿ, ಸಹಾಯಕ ಆಯುಕ್ತರ ಕಚೇರಿಗೆ ತೆರಳಿ, ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕರ್ನಾಟಕ ಫಾರೆಸ್ಟರಿ ಸ್ಟೂಡೆಂಟ್‌ ಆ್ಯಂಡ್ ಗ್ರಾಜುಯೇಶನ್‌ ಅಸೋಸಿಯೇಶನ್‌ ಅಧ್ಯಕ್ಷ ಅಕ್ಷಯಕುಮಾರ ಮಾತನಾಡಿ, ಬಿಎಸ್ಸಿ ಅರಣ್ಯಶಾಸ್ತ್ರ ಪದವೀಧರರಿಗೆ ವಲಯಾರಣ್ಯಾಧಿಕಾರಿ ಹುದ್ದೆಯ ನೇರ ನೇಮಕಾತಿಯಲ್ಲಿ ಮೊದಲಿದ್ದ ಶೇ.75ರ ಮೀಸಲಾತಿಯನ್ನು ಶೇ.50ಕ್ಕೆ ಕಡಿಮೆಗೊಳಿಸಲಾಗಿದ್ದು, ಈ ಆದೇಶದ ವಿರುದ್ಧವಾಗಿಯೂ ಟಿ.ಎಂ. ವಿಜಯಭಾಸ್ಕರ ಉಪ ವಲಯ ಅರಣ್ಯಾಧಿಕಾರಿಯ ಹುದ್ದೆಯ ನೇರ ನೇಮಕಾತಿಯನ್ನು ತೆಗೆದು ಶೇ.100 ರಷ್ಟು ಹುದ್ದೆಗಳನ್ನು ಮುಂಬಡ್ತಿ ಹುದ್ದೆಯನ್ನಾಗಿ ಪರಿವರ್ತಿಸಬೇಕೆಂಬುದರ ಕುರಿತು ಸಲ್ಲಿಸಿದ್ದ 6 ನೇ ಆಡಳಿತ ಸುಧಾರಣೆ ವರದಿಯ ಅಧ್ಯಾಯ 4ರ ಅಧಿಸೂಚನೆ ಸಂಖ್ಯೆ 81ನ್ನು ವಜಾಗೊಳಿಸುವಂತೆ 2024ರಲ್ಲಿ ನಡೆದ ಪ್ರತಿಭಟನೆಯನ್ನು ಪರಿಗಣಿಸಿದ ರಾಜ್ಯ ಸರ್ಕಾರವು ವಿಶೇಷ ಸಮಿತಿಯನ್ನು ರಚಿಸುವುದರ ಮೂಲಕ ಬೇಡಿಕೆ ಈಡೇರಿಸುವುದಾಗಿ ಆಶ್ವಾಸನೆ ನೀಡಿತ್ತು. ಆದರೆ ಈವರೆಗೆ ರಾಜ್ಯ ಸರ್ಕಾರದಿಂದಾಗಲೀ, ಅಥವಾ ರಚಿಸಿದ ಸಮಿತಿಯಿಂದಾಗಲೀ ವರದಿ ಅಥವಾ ಅಧಿಸೂಚನೆ ಬಂದಿಲ್ಲ. ಅರಣ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಾದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯಾರಣ್ಯಾಧಿಕಾರಿ ಹುದ್ದೆಗಳಿಗೆ ಬಿಎಸ್ಸಿ ಅರಣ್ಯಶಾಸ್ತ್ರ ಪದವೀಧರರನ್ನೇ ನೇರ ನೇಮಕಾತಿ ಮಾಡುವುದರ ಮೂಲಕ ಅರಣ್ಯಶಾಸ್ತ್ರದಲ್ಲಿ ವಿಶೇಷ ಪರಿಣಿತಿ ಹೊಂದಿರುವ ಪದವೀಧರರ ಜ್ಞಾನ ಮತ್ತು ಅನುಭವವನ್ನು ರಚನಾತ್ಮಕವಾಗಿ ಬಳಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ವಿದ್ಯಾರ್ಥಿನಿ ಅನುಷಾ ಸುರೇಶ ಮಾತನಾಡಿ, ಅರಣ್ಯ ಶಾಸ್ತ್ರ ಸೇರುವವರು ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ಬಂದಿದ್ದಾರೆ. ವರ್ಷದಿಂದ ವರ್ಷಕ್ಕೆ ಈ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿ ಪಡೆದ ವಿದ್ಯಾರ್ಥಿಗಳು ಬಿಎಸ್ಸಿ ಅರಣ್ಯ ಶಾಸ್ತ್ರ ಪದವಿಯನ್ನೇ ಬೇರೆ ವಿಷಯಗಳಿಗಿಂತ ಹೆಚ್ಚು ಆಸಕ್ತಿಯಿಂದ ಆಯ್ಕೆ ಮಾಡಿಕೊಳ್ಳುತ್ತಿರುವುದು, ಪ್ರತಿಭಾವಂತ ವಿದ್ಯಾರ್ಥಿಗಳೇ ಈ ಕ್ಷೇತ್ರಕ್ಕೆ ಬರುತ್ತಿರುವುದು ಈ ಪದವಿ ವ್ಯಾಸಂಗದ ಮಹತ್ವ ಸೂಚಿಸುತ್ತದೆ. ಅರಣ್ಯಾಧಿಕಾರಿ ಹುದ್ದೆಯ ನೇರ ನೇಮಕಾತಿಯಲ್ಲಿ ಬಿಎಸ್ಸಿ ಅರಣ್ಯಶಾಸ್ತ್ರ ಪದವೀಧರರಿಗೆ ಮೊದಲು ನೀಡಿದ್ದ ಶೇ.75ರಷ್ಟು ಮೀಸಲಾತಿಯನ್ನು ಶೇ.50ಕ್ಕೆ ಕಡಿತಗೊಳಿಸಿರುವುದು ಅನ್ಯಾಯದ ಸಂಗತಿ ಎಂದರು.

ಉಪಾಧ್ಯಕ್ಷ ಸುದೀಪ ಗೌಡ, ಅಂಕಿತ ದೇವರಾಯ, ವಿಕಾಸ ಎ.ಜಿ., ರಾಘವೇಂದ್ರ ಎಸ್.ಎಂ., ಕಿಶನ ಗೌಡ, ಯಶಸ್ಸು ಎಂ., ಮಂಜುನಾಥ ಡಿ.ಎಂ., ಆಕಾಶ ಪೂಜಾರಿ, ನಿಶಾಂತ ಎಂ., ಗಣೇಶ ಬಿ.ಡಿ., ಸಂಗೀತಾ, ರಾಕೇಶ ಬಿ., ಮಾರುತಿ ಎಸ್‌.ಎಂ., ಅಮ್ರತಾ ಕೆ., ಮೋನಿಕಾ ಎನ್‌., ವೈಷ್ಟವಿ ಬಿ., ಕಿಶೋರೆ ಎನ್‌.ಪಿ., ಶ್ರೀಶೈಲ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಅನಿರ್ದಿಷ್ಟಾವಧಿ ಪ್ರತಿಭಟನೆಯ ಎಚ್ಚರಿಕೆ

ಸಹಾಯಕ ಆಯುಕ್ತರ ಮೂಲಕ ರಾಜ್ಯ ಸರ್ಕಾರ ಹಾಗೂ ಅರಣ್ಯ ಸಚಿವರಿಗೆ ಮನವಿ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಶಾಸಕರು, ಸಂಸದರು, ವಿಧಾನಪರಿಷತ್‌ ಸದಸ್ಯರ ಬಳಿ ತೆರಳಿ, ನಮ್ಮ ಬೇಡಿಕೆ ಈಡೇರಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಸಲ್ಲಿಸಲಾಗುತ್ತದೆ. ಹಿಂದಿನ ಬಾರಿಯಂತೆ ಈ ಬಾರಿಯೂ ಆಶ್ವಾಸನೆ ನೀಡಿದರೆ ಪ್ರತಿಭಟನೆ ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ. ಲಿಖಿತ ರೂಪದಲ್ಲಿ ಭರವಸೆ ನೀಡಿದರೆ ಮಾತ್ರ ಪ್ರತಿಭಟನೆ ಮೊಟಕುಗೊಳಿಸುತ್ತೇವೆ. ಇಲ್ಲವಾದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.