ಹಿರೇಹಡಗಲಿ ಹಾಲಸ್ವಾಮಿ ಜಾತ್ರಾ ಮಹೋತ್ಸವ

| Published : Oct 11 2025, 12:03 AM IST

ಸಾರಾಂಶ

ಸದ್ಗುರು ಶಿವಯೋಗಿ ಹಾಲಸ್ವಾಮಿ ಮಠದ ಸಂಪ್ರದಾಯದ ಪ್ರಕಾರ ಮಠದಲ್ಲಿ ಅಮೃತೇಶ್ವರ ಹಾಲ ಸ್ವಾಮೀಜಿ 11 ದಿನಗಳ ಕಾಲ ಉಪವಾಸ ವ್ರತಾಚರಣೆಯಲ್ಲಿದ್ದರು.

ಹೂವಿನಹಡಗಲಿ: ತಾಲೂಕಿನ ಹಿರೇಹಡಗಲಿಯ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಸಾವಿರಾರು ಭಕ್ತ ಸಮೂಹ ಮಧ್ಯೆ ಮುಳ್ಳು ಗದ್ದುಗೆ ಉತ್ಸವವು ಗುರುವಾರ ರಾತ್ರಿ ಸಂಭ್ರಮ ಸಡಗರದಿಂದ ಜರುಗಿತು.

ಸದ್ಗುರು ಶಿವಯೋಗಿ ಹಾಲಸ್ವಾಮಿ ಮಠದ ಸಂಪ್ರದಾಯದ ಪ್ರಕಾರ ಮಠದಲ್ಲಿ ಅಮೃತೇಶ್ವರ ಹಾಲ ಸ್ವಾಮೀಜಿ 11 ದಿನಗಳ ಕಾಲ ಉಪವಾಸ ವ್ರತಾಚರಣೆಯಲ್ಲಿದ್ದರು. ನಂತರದಲ್ಲಿ ಶ್ರೀಮಠದ ಕರ್ತೃಕ ಗದ್ದುಗೆ ಪೂಜೆ ಸಲ್ಲಿಸಿದ, ಬಳಿಕ ಗುರುವಾರ ರಾತ್ರಿ 11 ಗಂಟೆಗೆ ಮಠದ ಆವರಣದಲ್ಲಿದ್ದ ಹೂವಿನಿಂದ ಅಲಂಕಾರಗೊಂಡಿದ್ದ, ಮುಳ್ಳಿನ ಮಂಟಪ ಆರೋಹಣ ಮಾಡಿದರು.

ಹಾಲಸ್ವಾಮಿ ಮಠದ ತೇಜಮ್ಮ (ಕುದುರೆ)ಯೊಂದಿಗೆ ಹಿರೇಹಡಗಲಿಯಿಂದ ಅನತಿ ದೂರದ ಮಾನಿಹಳ್ಳಿಗೆ ತೆರಳಿ, ಬನ್ನಿ ಮಹಾಂಕಾಳಿಗೆ ಪೂಜೆ ನೆರವೇರಿಸಿದ ಬಳಿಕ ಹಾಲಸ್ವಾಮಿ ಮಠದಿಂದ ಪ್ರಾರಂಭವಾದ ಮುಳ್ಳು ಗದ್ದುಗೆ ಉತ್ಸವವು, ಗ್ರಾಮದ ಪ್ರಮುಖ ಬೀದಿಯಲ್ಲಿ ಡೊಳ್ಳು, ಹಲಗೆ, ನಾನಾ ವಾದ್ಯ ಮೇಳಗಳ ಮೂಲಕ ಸಾಗಿದ ಉತ್ಸವ ಬೆಳಗಿನ ಜಾವ, ಶ್ರೀಮಠವನ್ನು ತಲುಪಿತು. ಮುಳ್ಳುಗದ್ದುಗೆ ಉತ್ಸವದಲ್ಲಿ ಶ್ರೀಮಠದ ಹಿರಿಯ ಸ್ವಾಮೀಜಿಗಳಾದ ಹಾಲವೀರಭದ್ರ ಸ್ವಾಮೀಜಿ, ಹಾಲಸೋಮೇಶ್ವರ ಸ್ವಾಮೀಜಿ, ಹಾಲಸಿದ್ದೇಶ್ವರ ಸ್ವಾಮೀಜಿ, ಸಣ್ಣಹಾಲಸ್ವಾಮೀಜಿ, ಅಭಿನವ ಹಾಲವೀರಪ್ಪ ಸ್ವಾಮೀಜಿ, ಮಧುಕೇಶ್ವರ ಸ್ವಾಮೀಜಿ, ಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ನಾನಾ ಹರಗುರು ಚರಮೂರ್ತಿಗಳು ನೇತೃತ್ವ ವಹಿಸಿದ್ದರು.

ದಾವಣಗೆರೆ, ಹಾವೇರಿ, ಗದಗ, ಕೊಪ್ಪಳ, ವಿಜಯನಗರ ಸೇರಿ ನಾನಾ ಜಿಲ್ಲೆಗಳಿಂದ ಸಾವಿರಾರು ಭಕ್ತರು ಶ್ರೀಸ್ವಾಮಿಯ ದರ್ಶನ ಪಡೆದರು.

ಹಿನ್ನೆಲೆ:

ಸದ್ಗುರು ಶಿವಯೋಗಿ ಹಾಲಸ್ವಾಮಿ ಮುಳ್ಳುಗದ್ದುಗೆ ಉತ್ಸವಕ್ಕೆ ನೂರಾರು ವರ್ಷಗಳ ಇತಿಹಾಸದೊಂದಿಗೆ ನಾನಾ ಪವಾಡಗಳನ್ನು ಮೆರೆದಿರುವ ಐತಿಹ್ಯಗಳಿವೆ. ಮಳೆ ಬಾರದಿದ್ದರೆ, ಗ್ರಾಮದಲ್ಲಿ ಮಹಾಮಾರಿ ರೋಗ ರುಜಿನಗಳು ಕಾಣಿಸಿಕೊಂಡಾಗ, ಶ್ರೀಮಠದ ಕರ್ತೃ ಗದ್ದುಗೆಯ ಬೆತ್ತವನ್ನು ಪಲ್ಲಕ್ಕಿಯಲ್ಲಿರಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಇದರಿಂದ ಎಲ್ಲ ರೋಗ ರುಜಿನಗಳು ವಾಸಿಯಾಗುತ್ತವೆಯಲ್ಲದೇ ಮಳೆಯೂ ಬರುತ್ತದೆ ಎಂಬುದು ಭಕ್ತರ ಅಚಲ ನಂಬಿಕೆ. ಶ್ರೀಮಠ ಜಾತ್ಯತೀತವಾಗಿದ್ದು, ಗ್ರಾಮದ ಹರಿಜನಕೇರಿಯ ಮಹಿಳೆಯರು ಉತ್ಸವದ ಹಿಂದೆ ಶ್ರೀ ಸ್ವಾಮಿಯ ಪವಾಡಗಳನ್ನು ಜಾನಪದ. ಸಮಪ್ರದಾಯದ ಪದಗಳ ಮೂಲಕ ಬಣ್ಣಿಸುತ್ತ ಸುಸ್ತಾವ್ಯವಾಗಿ ಹಾಡುತ್ತಾ ಸಾಗುತ್ತಾರೆ. ನಾಡಿನ ನಾನಾ ಕಡೆಗಳಿಂದ ಭಕ್ತರು ಸ್ವಯಂ ಪ್ರೇರಣೆಯಿಂದ ರೊಟ್ಟಿ, ಆಹಾರ ಧಾನ್ಯಗಳು, ಕಟ್ಟಿಗೆ ಸೇರಿ ನಾನಾ ವಸ್ತುಗಳನ್ನು ಕಾಣಿಕೆ ರೂಪದಲ್ಲಿ ನೀಡುತ್ತಾರೆ.

ಸದ್ಗುರು ಶಿವಯೋಗಿ ಹಾಲಸ್ವಾಮಿ ಜಾತ್ರಾ ಅಂಗವಾಗಿ ಶುಕ್ರವಾರ ಸಂಜೆ ರಥೋತ್ಸವವು ಜರುಗಿದ್ದು, ಸಾವಿರಾರು ಭಕ್ತರು ಸೇರಿದಂತೆ ಹಾಲಸ್ವಾಮಿ ಮಠದ ಎಲ್ಲಾ ಶ್ರೀಗಳು ಭಾಗವಹಿಸಿದ್ದರು.