ಸಾರಾಂಶ
ಎಲ್ಲರಿಗೂ ಕೆಲಸದ ಒತ್ತಡ, ಚಿಂತೆ, ಸಮಸ್ಯೆ ಇರುತ್ತವೆ. ಇವುಗಳು ಜೀವನದ ಒಂದು ಭಾಗಗಳಾಗಿದ್ದು, ಕೆಲಸಗಳನ್ನು ಸಮರ್ಪಕವಾಗಿ ನಿಭಾಯಿಸಲು ಕಲಿಯಬೇಕು
ಕುಷ್ಟಗಿ: ಪ್ರತಿಯೊಬ್ಬರೂ ಆರೋಗ್ಯಕರ ಜೀವನ ಸಾಗಿಸಲು ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹಳ ಮುಖ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ಮಂಜುನಾಥ ಹೇಳಿದರು.
ಪಟ್ಟಣದ ತಾಲೂಕಾಸ್ಪತ್ರೆಯ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ತಾಲೂಕಾಸ್ಪತ್ರೆಯ ಸಹಯೋಗದಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಎಲ್ಲರಿಗೂ ಕೆಲಸದ ಒತ್ತಡ, ಚಿಂತೆ, ಸಮಸ್ಯೆ ಇರುತ್ತವೆ. ಇವುಗಳು ಜೀವನದ ಒಂದು ಭಾಗಗಳಾಗಿದ್ದು, ಕೆಲಸಗಳನ್ನು ಸಮರ್ಪಕವಾಗಿ ನಿಭಾಯಿಸಲು ಕಲಿಯಬೇಕು ದೈಹಿಕ ಆರೋಗ್ಯ ಹದಗೆಟ್ಟರೆ ಚಿಕಿತ್ಸೆ ಲಭ್ಯವಿದ್ದು. ದಿನನಿತ್ಯ ಬೆಳಗ್ಗೆ ವ್ಯಾಯಾಮ, ಯೋಗ ಮಾಡಬೇಕು ಅಂದಾಗ ಮಾತ್ರ ಒತ್ತಡ ನಿಭಾಯಿಸಬಹುದಾಗಿದೆ ಎಂದರು.
ಡಾ. ಚಂದ್ರಕಾಂತ ದಂಡಿ ಉಪನ್ಯಾಸ ನೀಡಿ, ಮಕ್ಕಳ ಮೇಲೆ ಮಾನಸಿಕ ಒತ್ತಡ ಅತಿಯಾಗಿ ಹಾಕಬೇಡಿ, ಅವರು ಯಾವುದರಲ್ಲಿ ಆಸಕ್ತಿ ಹೊಂದಿರುವರು ಎಂದು ಅರಿತುಕೊಂಡು ಆ ಕ್ಷೇತ್ರಗಳತ್ತ ಹೆಜ್ಜೆ ಹಾಕಲು ಸಹಕಾರ ನೀಡಬೇಕು, ಇತ್ತೀಚಿನ ದಿನಗಳಲ್ಲಿ ಚಿಕ್ಕಮಕ್ಕಳಿಂದ ಎಲ್ಲರೂ ಸಹಿತ ಮೊಬೈಲ್ ದಾಸರಾಗುತ್ತಿದ್ದು, ಸಾಮಾಜಿಕ ಜಾಲತಾಣ ಉಪಯೋಗ ಮಾಡುವ ಮೂಲಕ ತಾಳ್ಮೆ ಜತೆಗೆ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿದ್ದು ಮಕ್ಕಳಿಗೆ ಮೊಬೈಲ್ ಬಳಕೆ ಕಡಿಮೆ ಮಾಡುವಂತೆ ತಿಳಿಹೇಳಬೇಕು ಎಂದರು.ಆಡಳಿತ ಮುಖ್ಯ ವೈದ್ಯಾಧಿಕಾರಿ ಡಾ. ಚಂದ್ರಕಲಾ ಮಾತನಾಡಿ, ಮಾನಸಿಕ ಕೆಲಸದ ಒತ್ತಡದ ಸಮಯದಲ್ಲಿ ಸಮಯಪ್ರಜ್ಞೆ ಬಹಳ ಮುಖ್ಯವಾಗಿದೆ. ಮಾನಸಿಕ ಆರೋಗ್ಯಕ್ಕೆ ರಾತ್ರಿ ಆಳವಾದ ನಿದ್ದೆ, ಉತ್ತಮ ಊಟ, ಸಮತೋಲಿತ ಆಹಾರ ಸೇವಿಸಿ, ಯೋಗ, ವ್ಯಾಯಾಮ ಮತ್ತು ಧ್ಯಾನ ಮಾಡುವುದರಿಂದ ಮಾನಸಿಕ ರೋಗಗಳಿಂದ ದೂರವಿರಬಹುದು ಎಂದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ದೊಡ್ಡನಗೌಡ ಪಾಟೀಲ, ಬಾಲಾಜಿ ಬಳಿಗಾರ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ವಕೀಲರು ಮತ್ತು ಅಂಗನವಾಡಿ ಆಶಾ ಕಾರ್ಯಕರ್ತೆಯರು ಇದ್ದರು.