ಸಾರಾಂಶ
ಹಾರಿಕೆಯ ಉತ್ತರ ನೀಡುವುದನ್ನು ನಿಲ್ಲಿಸಬೇಕು. ಕನ್ನಡಿಗರ ಮೇಲೆ ದೌರ್ಜನ್ಯ ನಡೆಸಿದ ಟಿಪ್ಪುವಿನ ಹೆಸರನ್ನು ಕಾಂಗ್ರೆಸ್ಸಿಗರು ಏಕೆ ಹೇಳುತ್ತಾರೆ. ಬೇಕಾಬಿಟ್ಟಿ ಮಾತನಾಡುವುದನ್ನು ಕಾಂಗ್ರೆಸ್ ನಾಯಕರು ಬಿಡಬೇಕು. ಮೈಸೂರಿನ ಇತಿಹಾಸ ತಿರುಚುವವರಿಗೆ ಮುಂದೆ ಮಾರಿಹಬ್ಬ ಕಾದಿದೆ .
ಕನ್ನಡಪ್ರಭ ವಾರ್ತೆ ಮೈಸೂರು
ಲೋಕಸಭಾ ಚುನಾವಣೆಯನ್ನು ಬಿಜೆಪಿ ಪ್ರಾಮಾಣಿಕವಾಗಿ ಎದುರಿಸಿದೆ. ಯದುವೀರ್ ಅವರನ್ನು ಜನರು ಗೌರವ ಭಾವನೆಯಿಂದ ಕಂಡು ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ ನಾಯಕರು ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಬಿಜೆಪಿ ನಗರಾಧ್ಯಕ್ಷರಾದ ಮಾಜಿ ಶಾಸಕ ಎಲ್. ನಾಗೇಂದ್ರ ಕಿಡಿಕಾರಿದರು.ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು- ಕೊಡಗು ಕ್ಷೇತ್ರದಲ್ಲಿ ಮತಗಳ ಕಳ್ಳತನ ಮಾಡಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿಕೆ ನೀಡಿದ್ದಾರೆ. ಹಾಗಾದರೆ ಎನ್.ಆರ್. ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ 70 ಸಾವಿರ ಲೀಡ್ ಸಿಕ್ಕಿದೆ. ಅಲ್ಲಿ ನೀವು ಮತಗಳ ಕಳ್ಳತನ ಮಾಡಿದ್ದೀರಾ? ನೀವು ಮತದಾರರಿಗೆ ತಲಾ 500 ರುಪಾಯಿ ಹಂಚಿಕೆ ಮಾಡಿಲ್ವಾ? ಈ ಬಗ್ಗೆ ಚಾಮುಂಡೇಶ್ವರಿ ಸನ್ನಿಧಾನಕ್ಕೆ ಬಂದು ಪ್ರಮಾಣ ಮಾಡಿ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ರಾಷ್ಟ್ರೀಯ ನಾಯಕರಿಗೆ ನಾಚಿಕೆ ಆಗಬೇಕು. ಸೋಲು ಸೋಲೇ, ನೀವು ಈಗ ಎಷ್ಟೇ ಬೊಂಬಡಾ ಬಜಾಯಿಸಿದರೂ ನಿಮ್ಮನ್ನು ಲೋಕಸಭೆಗೆ ಕಳುಹಿಸೋದಿಲ್ಲ. ಕಾಂಗ್ರೆಸ್ ನಾಯಕರು ತಪ್ಪು ಮಾಹಿತಿ ನೀಡಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು, ಜನರ ಗಮನ ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಈ ವಾರ ಹಾಸ್ಯಭರಿತವಾಗಿದೆ:
ಬಿಜೆಪಿ ನಗರ ವಕ್ತಾರ ಮೋಹನ್ ಮಾತನಾಡಿ, ಈ ವಾರ ಒಂದು ರೀತಿಯಲ್ಲಿ ಹಾಸ್ಯಭರಿತ ವಾರವಾಗಿದೆ. ಡಾ.ಎಚ್.ಸಿ. ಮಹದೇವಪ್ಪ, ಡಾ. ಯತೀಂದ್ರ ಹೇಳಿದ್ದನ್ನೆಲ್ಲಾ ಕಾಂಗ್ರೆಸ್ ನವರು ಒಪ್ಪಿಕೊಳ್ಳುತ್ತಿದ್ದಾರೆ. ಆಡಳಿತ ಮಾಡುವವರು ಮೊದಲು ಇತಿಹಾಸವನ್ನು ತಿಳಿದುಕೊಳ್ಳಬೇಕು. ಇಲ್ಲದಿದ್ದರೇ ಅವಾಂತರಗಳು ಉಂಟಾಗುತ್ತವೆ. ಹೈದರಾಲಿ, ಟಿಪ್ಪು ಸುಲ್ತಾನ್ ಸುಮಾರು 40 ವರ್ಷಗಳ ಕಾಲ ಮಾತ್ರ ಆಳ್ವಿಕೆ ನಡೆಸಿದ್ದಾರೆ. 40 ವರ್ಷದಲ್ಲಿ ಇವರ ಹೇಳಿಕೊಳ್ಳುವಂತಹ ಸಾಧನೆ ಏನೂ ಇಲ್ಲ. ಕಾಂಗ್ರೆಸ್ ನವರು ಹೇಳಿದ್ದನ್ನೆಲ್ಲಾ ಕೇಳಿಕೊಂಡು ಇರಲಾಗಲ್ಲ. ಇತಿಹಾಸ ತಿರುಚುವ ಕೆಲಸವನ್ನು ಕಾಂಗ್ರೆಸ್ ನವರು ಏಕೆ ಮಾಡುತ್ತಿದ್ದಾರೆಂದು ತಿಳಿಸಬೇಕು ಎಂದು ಆಗ್ರಹಿಸಿದರು.ಹಾರಿಕೆಯ ಉತ್ತರ ನೀಡುವುದನ್ನು ನಿಲ್ಲಿಸಬೇಕು. ಕನ್ನಡಿಗರ ಮೇಲೆ ದೌರ್ಜನ್ಯ ನಡೆಸಿದ ಟಿಪ್ಪುವಿನ ಹೆಸರನ್ನು ಕಾಂಗ್ರೆಸ್ಸಿಗರು ಏಕೆ ಹೇಳುತ್ತಾರೆ. ಬೇಕಾಬಿಟ್ಟಿ ಮಾತನಾಡುವುದನ್ನು ಕಾಂಗ್ರೆಸ್ ನಾಯಕರು ಬಿಡಬೇಕು. ಮೈಸೂರಿನ ಇತಿಹಾಸ ತಿರುಚುವವರಿಗೆ ಮುಂದೆ ಮಾರಿಹಬ್ಬ ಕಾದಿದೆ ಎಂದರು.
ಬಿಜೆಪಿ ಪದಾಧಿಕಾರಿಗಳಾದ ಕೇಬಲ್ ಮಹೇಶ್, ಮಹೇಶ್ ರಾಜೇ ಅರಸ್, ಬಿ.ಎಂ. ಸಂತೋಷ್ ಕುಮಾರ್ ಮೊದಲಾದವರು ಇದ್ದರು.