ಸಾರಾಂಶ
ಕನ್ನಡಪ್ರಭ ವಾರ್ತೆ ಸುತ್ತೂರು
ದಾಸೋಹದಲ್ಲಿ ನಿರಂತರ ಕಾಯಕನಿಷ್ಠೆ ಮತ್ತು ಸಮರ್ಪಣಾ ಮನೋಭಾವವಿರಬೇಕು ಎಂದು ಎಚ್.ಬಿ. ದೇವಣ್ಣ ಹೇಳಿದರು.ಸುತ್ತೂರು ಶ್ರೀಕ್ಷೇತ್ರದಲ್ಲಿ ಶ್ರಾವಣಮಾಸದ 14ನೇ ದಿನದ ಪ್ರವಚನದಲ್ಲಿ ಅವರು ತಿಳಿಸಿದರು.
ಕೇವಲ ಧನವ ನೀಡುವುದು ದಾಸೋಹವಲ್ಲ, ಸಂಪತ್ತು ಹಂಚುವುದು ದಾಸೋಹವಲ್ಲ. ದಾಸೋಹವೆಂಬುದು ಅಂತರಂಗದ ಭಕ್ತಿ. ಅದು ತನು-ಮನ-ಧನದ ಸಮರ್ಪಣೆ ಎಂದು ಶರಣರು ಹೇಳಿದ್ದಾರೆ. ನಿಜವಾದ ದಾಸೋಹವೆಂದರೆ ತನ್ನನ್ನು ತಾನು ಸಮುದಾಯ ಹಾಗೂ ಸಮಾಜಕ್ಕೆ ಅರ್ಪಿಸಿಕೊಳ್ಳುವುದಾಗಿದೆ. ಶರಣ-ಶರಣೆಯರು ಸಂಸಾರದ ಸತ್ಯವನ್ನು ಅರಿತು, ಸಂಸಾರವೆಂಬುದು ಆಧ್ಯಾತ್ಮಕ್ಕೆ ಬಾದಕವಲ್ಲ, ಅದು ಪ್ರೇರಕ ಎಂದು ತಿಳಿದವರು. ವ್ರತಾಚರಣೆ, ಕುಲ, ಭೇದ, ಭಕ್ತಿ, ಜ್ಞಾನ, ಆಚರಣೆ, ನೀತಿ ನಿಯಮಗಳ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದಿದ್ದರು. ಕಾಯಕ, ದಾಸೋಹ, ಧರ್ಮನಿಷ್ಠೆ, ಕರುಣೆ, ಮಾನವೀಯತೆ, ವಿಶ್ವಮಾನವ ಪರಿಕಲ್ಪನೆ, ನೇರನುಡಿ ಹಾಗೂ ಆತ್ಮವಿಶ್ವಾಸವನ್ನು ವ್ಯಕ್ತಪಡಿಸುವುದನ್ನು ಕಾಣುತ್ತೇವೆ. ತನುವ ಕೊಟ್ಟು ಗುರುವನೊಲಿಸಬೇಕು, ಮನವಕೊಟ್ಟು ಲಿಂಗವನೊಲಿಸಬೇಕು, ಧನವಕೊಟ್ಟು ಜಂಗಮವನೊಲಿಸಬೇಕು ಎಂದು ಬಸವಣ್ಣನವರು ದಾಸೋಹ ಕುರಿತು ಅವರು ಹೇಳಿದರು.ದಾಸೋಹ ನಿಷ್ಠೆಯ ಇಳೆಯಾಂಡ ಗುಡಿಮಾರನೆಂಬ ಶಿವಭಕ್ತನಿದ್ದ. ಅವನನ್ನು ಪರೀಕ್ಷಿಸಲು ವೃದ್ಧನ ವೇಷದಲ್ಲಿ ಶಿವನು ಅವನ ಮನೆಗೆ ಬರುತ್ತಾನೆ. ಗುಡಿಮಾರನು ಆ ವೃದ್ಧನನ್ನು ಆದರದಿಂದ ಸ್ವಾಗತಿಸಿ, ತನ್ನ ಮನೆಯಲ್ಲಿ ಆಶ್ರಯ ನೀಡುತ್ತಾನೆ. ಮನೆಯಲ್ಲಿ ಊಟಕ್ಕೆ ಏನೂ ಇಲ್ಲದಿದ್ದರೂ, ಗುಡಿಮಾರನು ತನ್ನ ಹೆಂಡತಿಯ ಸಲಹೆಯಂತೆ ಹೊಲದಿಂದ ಕಾಳುಗಳನ್ನು ತಂದು ವೃದ್ಧನಿಗೆ ಊಟ ಹಾಕುತ್ತಾನೆ. ಊಟಕ್ಕೆ ಬಾಳೆಎಲೆ ಕೀಳಲು ಹೋದ ಮಗನನ್ನು ಹಾವು ಕಚ್ಚಿ ಸಾಯಿಸುತ್ತದೆ. ಗುಡಿಮಾರನು ಮಗನ ಹೆಸರನ್ನು ಕೂಗಿದಾಗ ಅವನು ಎದ್ದು ಬರುತ್ತಾನೆ. ಒಳಗೆ ಬಂದು ನೋಡಿದರೆ ಶಿವ ತನ್ನ ನಿಜಸ್ವರೂಪದಲ್ಲಿ ಅಭಯ ಹಸ್ತದಿಂದ ಆಶೀರ್ವದಿಸುತ್ತಾನೆ. ಗುಡಿಮಾರನ ಭಕ್ತಿಗೆ ಮೆಚ್ಚಿದ ಶಿವನು ಅವನಿಗೆ ಮೋಕ್ಷವನ್ನು ಕರುಣಿಸಿ ಗುಣ ಪದವಿಯನ್ನು ನೀಡುತ್ತಾನೆ. ಇದು ಭಕ್ತಿ, ದಾಸೋಹ ಮತ್ತು ನಿರಂತರ ಕಾಯಕನಿಷ್ಠೆಯ ಮಹತ್ವವನ್ನು ಸಾರುತ್ತದೆ ಎಂದು ಅವರು ತಿಳಿಸಿದರು. ಭಕ್ತಾದಿಗಳು ಮತ್ತು ಆಧ್ಯಾತ್ಮಿಕ ಜಿಜ್ಞಾಸುಗಳು ಪಾಲ್ಗೊಂಡಿದ್ದರು.