ಬೇಲೂರು ಪುರಸಭೆಯಲ್ಲಿ ಕಾಂಗ್ರೆಸ್‌ ಸದಸ್ಯರ ಗದ್ದಲ

| Published : Oct 28 2025, 12:15 AM IST / Updated: Oct 28 2025, 12:16 AM IST

ಸಾರಾಂಶ

ಪುರಸಭೆ ಮಾಜಿ ಅಧ್ಯಕ್ಷರಾದ ಎ ಆರ್ ಅಶೋಕ್ ಹಾಗೂ ದಾನಿ ಅವರ ನಡುವೆ ಏರು ದ್ವನಿಯಲ್ಲಿ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿತು. ವಾರ್ಡ್ ನಂ. ೪ರಲ್ಲಿ ಮಾಜಿ ಅಧ್ಯಕ್ಷ ಸಿ ಎನ್ ದಾನಿ ಕಟ್ಟುತ್ತಿರುವ ಕಟ್ಟಡ ಅಕ್ರಮವಾಗಿದ್ದು ಕಟ್ಟಡ ಪೂರ್ಣಗೊಳ್ಳದೆ ಇ -ಖಾತೆ ಸೇರಿದಂತೆ ಎಲ್ಲಾ ದಾಖಲೆಗಳನ್ನು ಪುರಸಭೆಯವರು ಮಾಡಿಕೊಟ್ಟಿದ್ದಾರೆ. ಅಲ್ಲದೆ ಬಡವರಿಗೆ ಒಂದು ನ್ಯಾಯ ಇತರರಿಗೆ ಒಂದು ನ್ಯಾಯ ಇದಕ್ಕೆ ಮುಖ್ಯಾಧಿಕಾರಿ ಸರಿಯಾಗಿ ಮಾಹಿತಿ ನೀಡಬೇಕೆಂದು ಎ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು ಪುರಸಭೆಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕರ ಎದುರೇ ಕಾಂಗ್ರೆಸ್ ಸದಸ್ಯರು ಗದ್ದಲ, ಗಲಾಟೆ ನಡೆಸಿದ್ದು ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು.

ಪುರಸಭೆ ಸಾಮಾನ್ಯ ಸಭೆಯು ಪ್ರಭಾರ ಅಧ್ಯಕ್ಷೆ ಉಷಾ ಸತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಶಾಸಕ ಎಚ್ ಕೆ ಸುರೇಶ್ ಸಭೆಯಲ್ಲಿ ಭಾಗವಹಿಸಿ ಸಲಹೆ ಸಹಕಾರವನ್ನು ಪಡೆದು ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ನಿಮ್ಮ ಸಹಕಾರ ಬೇಕು ಎಂದು ಮನವಿ ಮಾಡಿದರು. ನಂತರ ಪುರಸಭೆ ಮಾಜಿ ಅಧ್ಯಕ್ಷರಾದ ಎ ಆರ್ ಅಶೋಕ್ ಹಾಗೂ ದಾನಿ ಅವರ ನಡುವೆ ಏರು ದ್ವನಿಯಲ್ಲಿ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿತು. ವಾರ್ಡ್ ನಂ. ೪ರಲ್ಲಿ ಮಾಜಿ ಅಧ್ಯಕ್ಷ ಸಿ ಎನ್ ದಾನಿ ಕಟ್ಟುತ್ತಿರುವ ಕಟ್ಟಡ ಅಕ್ರಮವಾಗಿದ್ದು ಕಟ್ಟಡ ಪೂರ್ಣಗೊಳ್ಳದೆ ಇ -ಖಾತೆ ಸೇರಿದಂತೆ ಎಲ್ಲಾ ದಾಖಲೆಗಳನ್ನು ಪುರಸಭೆಯವರು ಮಾಡಿಕೊಟ್ಟಿದ್ದಾರೆ. ಅಲ್ಲದೆ ಬಡವರಿಗೆ ಒಂದು ನ್ಯಾಯ ಇತರರಿಗೆ ಒಂದು ನ್ಯಾಯ ಇದಕ್ಕೆ ಮುಖ್ಯಾಧಿಕಾರಿ ಸರಿಯಾಗಿ ಮಾಹಿತಿ ನೀಡಬೇಕೆಂದು ಎ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಸದಸ್ಯ ದಾನಿ, ನಾನು ಯಾವುದೇ ಅಕ್ರಮಗಳಲ್ಲಿ ಭಾಗಿಯಾಗಿಲ್ಲ. ಅಲ್ಲದೆ ಕಟ್ಟಡ ಪೂರ್ಣಗೊಂಡ ನಂತರವೆ ಸಂಪೂರ್ಣ ದಾಖಲೆಗಳನ್ನು ನೀಡಿ ಈ ಖಾತೆ ಮಾಡಿಸಿಕೊಂಡಿದ್ದೇನೆ. ಬೇರೆಯವರ ರೀತಿಯಲ್ಲಿ ನಾನು ಯಾವುದೇ ಸುಳ್ಳು ಮಾಹಿತಿ ನೀಡಿ ಒತ್ತುವರಿ ಮಾಡಿರುವುದಾಗಲಿ ಅಥವಾ ಅಕ್ರಮ ನಿವೇಶನಗಳಿಗೆ ಈ ಸ್ವತ್ತುಗಳನ್ನು ಮಾಡಿಲ್ಲ. ಇಲ್ಲಿ ಯಾರು ಪುರಸಭೆಗೆ ಯಾಮಾರಿಸಿ ಯಾವ ರೀತಿ ಭ್ರಷ್ಟಾಚಾರ ಮಾಡಿದ್ದಾರೆ ಎಂಬುವುದು ಜನತೆಗೆ ತಿಳಿದಿದೆ ಎಂದು ಏರುಧ್ವನಿಯಲ್ಲಿ ಮಾತನಾಡಿದರು. ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.

ಇದಕ್ಕೆ ಧ್ವನಿಯಾದ ಸದಸ್ಯ ಶಾಂತಕುಮಾರ್ ಇಲ್ಲಿ ಯಾರು ಭ್ರಷ್ಟಾಚಾರ ಮಾಡಿದ್ದಾರೆ, ಯಾರು ಹಣ ಲೂಟಿ ಮಾಡಿದ್ದಾರೆ, ಕುತಂತ್ರದಲ್ಲಿ ಭಾಗಿಯಾಗಿದ್ದಾರೆ ಇದಕ್ಕೆ ಯಾರ ಬೆಂಬಲ ಇದೆ ಎಂದು ಗೊತ್ತಿದೆ. ಈಗ ಅದನ್ನು ಮುಚ್ಚಿಡಲು ಏರುಧ್ವನಿಯಲ್ಲಿ ಏಕೆ ಮಾತನಾಡುತ್ತಿದ್ದಾರೆ ಎಂದು ನಮಗೂ ತಿಳಿದಿದೆ. ಇಲ್ಲಿ ಪುರಸಭೆಯ ಅಭಿವೃದ್ಧಿಗೆ ಪೂರಕವಾಗಿ ಸಭೆ ನಡೆಯಲು ಬಿಡದೆ ವೈಯಕ್ತಿಕ ವಿಚಾರಕ್ಕೆ ಕೋಲಾಹಲ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಈ ಸಂದರ್ಭ ಅಶೋಕ್ ಹಾಗೂ ಶಾಂತಕುಮಾರ್, ದಾನಿ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಸಭಾ ಪೀಠದ ಬಳಿ ಒಬ್ಬರಮೇಲೊಬ್ಬರು ವಾಗ್ದಾಳಿ ನಡೆಸಿದರು.ಇವರನ್ನು ಶಾಸಕ ಎಚ್ ಕೆ ಸುರೇಶ್ ಹತೋಟಿಗೆ ತಂದು ನಿಮ್ಮ ವೈಯಕ್ತಿಕ ವಿಚಾರ ಇದ್ದರೆ ಸಭೆಯಿಂದ ಹೊರಗೆ ಮಾತನಾಡಿ. ಅದನ್ನು ಬಿಟ್ಟು ಇಲ್ಲದ ಸಲ್ಲದ ವಿಚಾರಗಳನ್ನು ಮಾತನಾಡಬೇಡಿ. ಪಟ್ಟಣದ ಅಭಿವೃದ್ಧಿಗೆ ಪೂರಕವಾಗಿ ಚರ್ಚೆಗೆ ಇದ್ದರೆ ಮಾತ್ರ ಈ ಸಭೆಯಲ್ಲಿ ನಾನು ಕೂರುತ್ತೇನೆ, ಇಲ್ಲದಿದ್ದರೆ, ನಾನೇ ಸಭಾತ್ಯಾಗ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪುರಸಭೆ ಪ್ರಭಾರಿ ಅಧ್ಯಕ್ಷ ಉಷಾ ಸತೀಶ್, ಮುಖ್ಯಾಧಿಕಾರಿ ಬಸವರಾಜು ಕಾಟಪ್ಪ ಶಿಗ್ಗಾಂವಿ ಇದ್ದರು.