ಯರಕನಗದ್ದೆ ಸರ್ಕಾರಿ ಶಾಲೆಯ ಸಭಾಮಂಟಪ ಲೋಕಾರ್ಪಣೆ

| Published : Oct 28 2025, 12:15 AM IST

ಸಾರಾಂಶ

ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಯರಕನಗದ್ದೆ ಸರ್ಕಾರಿ ಶಾಲೆಯ ಸಭಾ ಮಂಟಪವನ್ನು ಐಎಂಐ ಸಂಸ್ಥೆಯ ಮುಖ್ಯಸ್ಥ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಸೋಮವಾರ ಲೋಕಾರ್ಪಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ, ಯಳಂದೂರು

ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಯರಕನಗದ್ದೆ ಸರ್ಕಾರಿ ಶಾಲೆಯ ಸಭಾ ಮಂಟಪವನ್ನು ಐಎಂಐ ಸಂಸ್ಥೆಯ ಮುಖ್ಯಸ್ಥ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಸೋಮವಾರ ಲೋಕಾರ್ಪಣೆ ಮಾಡಲಾಯಿತು.

ಸೂರ್ಯ ಫೌಂಡೇಶನ್ ಎಂ. ಶರವಣ ಮಾತನಾಡಿ, ನಮ್ಮ ಫೌಂಡೇಶನ್‌ನ ವತಿಯಿಂದ ನೈಸರ್ಗಿಕ ವಿಕೋಪಗಳು, ಕೋವಿಡ್ ಸೇರಿದಂತೆ ಇತರೆ ತುರ್ತು ಸಂದರ್ಭದಲ್ಲಿ ದೇಶದ ಅಂಡಮಾನ್ ನಿಕೋಬಾರ್ ದ್ವೀಪ, ಮಣಿಪುರ, ಲೇಹ್, ಲಡಾಕ್, ಕೇರಳದ ವಯನಾಡು ಸೇರಿದಂತೆ ವಿವಿಧೆಡೆ ಸಾಮಾಜಕ ಸೇವೆಗಳನ್ನು ಮಾಡಲಾಗಿದೆ.

ಈ ಶಾಲೆ ದುರಸ್ತಿ ಬಗ್ಗೆ ಮುಖ್ಯ ಶಿಕ್ಷಕ ಜಯಶಂಕರ್ ಮನವಿ ಮಾಡಿದ್ದರು. ಇದಕ್ಕೆ ಐಎಂಐ ಕಂಪೆನಿಯ ಸಿಎಸ್‌ಆರ್ ಫಂಡ್‌ನಿಂದ ನಮ್ಮ ಫೌಂಡೇಶನ್ ಸ್ಪಂದಿಸಿ ಅಂದಾಜು ೧೦ ಲಕ್ಷ ರು. ವೆಚ್ಚದಲ್ಲಿ ಇದನ್ನು ದುರಸ್ತಿ ಮಾಡಿಸಿದ್ದೇವೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಮುಖ್ಯ ಶಿಕ್ಷಕರೇ ವಹಿಸಿದ್ದು. ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಸೋಲಿಗ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನಮ್ಮ ಫೌಂಡೇಶನ್ ಸದಾ ಸಿದ್ಧವಾಗಿರುತ್ತದೆ.

ಶಾಲೆಯ ಮುಖ್ಯ ಶಿಕ್ಷಣ ಜಯಶಂಕರ್ ಮಾತನಾಡಿ, ನಮ್ಮ ಶಾಲೆಯಲ್ಲಿ ಸೋಲಿಗ ಮಕ್ಕಳೇ ಹೆಚ್ಚು ವ್ಯಾಸಂಗ ಮಾಡುತ್ತಾರೆ. ಶಾಲೆಯ ಮೂರು ಕಟ್ಟಡಗಳೂ ಶಿಥಿಲವಾಗಿತ್ತು. ಇದನ್ನು ದುರಸ್ತಿ ಮಾಡಿಸುವಂತೆ ಸೂರ್ಯ ಫೌಂಡೇಶನ್‌ನ ಶರವಣರವರಿಗೆ ಮನವಿ ಮಾಡಿದ್ದೆ. ಇದಕ್ಕೆ ಸ್ಪಂಧಿಸಿ ಅವರು ಈಗ ದುರಸ್ತಿ ಮಾಡಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಐಎಂಐ ಕಂಪೆನಿಯ ಕಾರ್ಯನಿರ್ವಾಹಕ ವ್ಯವಸ್ಥಾಪಕಿ ಗೀತಾಕೃಷ್ಣನ್, ಹೇಮಚಂದ್ರ, ಸಂದೇಶ್, ಸೂರ್ಯ ಫೌಂಡೇಶನ್‌ನ ಸಂಪತ್‌ಕುಮಾರ್, ಯುವರಾಜ್ ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ, ಬಿಆರ್‌ಸಿ ನಂಜುಂಡಯ್ಯ, ಸಿಆರ್‌ಪಿ ರೇಚಣ್ಣ ಸೇರಿದಂತೆ ಅನೇಕರು ಇದ್ದರು.