ಸಾರಾಂಶ
ಧಾರವಾಡ:
ಮುಖ್ಯಮಂತ್ರಿ ಸಿದ್ದರಾಮಯ್ಯನವರ ತೇಜೋವಧೆ ಹಾಗೂ ರಾಜ್ಯಪಾಲರ ನಡೆ ಖಂಡಿಸಿ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ನೇತೃತ್ವದಲ್ಲಿ ಮಹಾನಗರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ಕಲಾಭವನದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಕಾರ್ಯಕರ್ತರು, ಮುಖಂಡರು ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯನವರು ತಮ್ಮ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲದಂತೆ ಜನ ಸೇವೆ ಮಾಡಿದ್ದಾರೆ. ಅಂತಹವರ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಷಡ್ಯಂತ್ರ ರೂಪಿಸಿದ್ದಾರೆ. ಅವರಿಗೆ ಸಂಬಂಧವೇ ಇಲ್ಲದ ವಿಷಯವನ್ನು ತಳಕುಹಾಕಿ ಅವರ ಘನತೆಗೆ ಮಸಿ ಬಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ದೂರಿದರು.
ತಮ್ಮ ಮೇಲಿನ ಆರೋಪಕ್ಕೆ ಸ್ವತಃ ತನಿಖಾ ತಂಡ ರಚಿಸಿರುವ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬುದನ್ನು ವಿಪಕ್ಷಗಳು ಅರಿಯಬೇಕು. ಬಡವರು, ಕಾರ್ಮಿಕರು, ಮಹಿಳೆಯರು ಸೇರಿ ಶೋಷಿತ ವರ್ಗದ ಜನರು ಸರ್ಕಾರದ ಪರ ನಿಂತಿದ್ದಾರೆ. ಆದರೆ ಆ ಜನರ ದಾರಿ ತಪ್ಪಿಸುವ ಕೆಲಸವನ್ನು ವಿಪಕ್ಷಗಳು ಮಾಡುತ್ತಿವೆ ಎಂದು ಆರೋಪಿಸಿದರು.ರಾಜ್ಯಪಾಲರ ಭವನ ಪಕ್ಷಾತೀತವಾಗಿರಬೇಕು. ಆದರೆ ರಾಜ್ಯಪಾಲರು ಒಂದು ಪಕ್ಷದ ಆದೇಶದಂತೆ ನಡೆದುಕೊಳ್ಳುತ್ತಿರುವುದು ಕಾನೂನುಬಾಹಿರ. ರಾಜ್ಯಪಾಲರು ತಮ್ಮ ನಡೆ ಹಿಂಪಡೆಯಬೇಕು. ಇಲ್ಲವಾದಲ್ಲಿ ರಾಜೀನಾಮೆಗೆ ಒತ್ತಾಯಿಸಿ ರಾಜ್ಯಭವನ ಚಲೋ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಇದಲ್ಲದೆ ಸ್ಥಳೀಯವಾಗಿ ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಚಿಂಚೋರೆ ಎಚ್ಚರಿಸಿದರು.
ಬಳಿಕ ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗೆ ಮನವಿಪತ್ರ ರವಾನಿಸಿದರು. ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ, ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ನಾಗರಾಜ ಗುರಿಕಾರ, ಆನಂದ ಜಾಧವ, ರಾಬರ್ಟ್ ದದ್ದಾಪುರಿ, ಆನಂದ ಮುಶಣ್ಣವರ, ಮೆಹಬೂಬಖಾನ ಪಠಾಣ, ಬಸವರಾಜ ಕಿತ್ತೂರ, ದಾನಪ್ಪ ಕಬ್ಬೇರ, ಕವಿತಾ ಕಬ್ಬೇರ, ಸೂರಜ್ ಗೌಳಿ, ರೋಹನ ಹಿಪ್ಪರಗಿ, ಸ್ವಾತಿ ಮಳಗಿ, ಶಂಭು ಸಾಲಿಮನಿ, ರವಿ ಮಾಳಿಗೇರ, ಗೀತಾ ಥಾಂಶಿ ಇತರರು ಇದ್ದರು.