ಕನ್ನಡಪ್ರಭ ವಾರ್ತೆ ಬೆಂಗಳೂರು:
ಎಲ್‌ಪಿಜಿ ಬೆಲೆ ಏರಿಕೆ ಖಂಡಿಸಿ ಶಿವಮೊಗ್ಗ, ಉಡುಪಿ, ಬೆಳಗಾವಿ, ಮಂಡ್ಯಗಳಲ್ಲಿ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಶಿವಮೊಗ್ಗದಲ್ಲಿ ಸೀನಪ್ಪಶೆಟ್ಟಿ (ಗೋಪಿ) ವೃತ್ತದಲ್ಲಿ ಸೌದೆ ಒಲೆ ಹಚ್ಚಿ, ಟೀ ಮಾಡುವ ಮೂಲಕ ಪ್ರತಿಭಟನಾಕಾರರು ವಿನೂತನವಾಗಿ ಪ್ರತಿಭಟಿಸಿದರು. ಅಡುಗೆ ಅನಿಲದ ಬೆಲೆಯನ್ನು 60 ರು. ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್‌ನ ಬೆಲೆಯನ್ನು 115 ರು.ಗಳಿಗೆ ಹೆಚ್ಚಿಸಿರುವುದು ಖಂಡನೀಯ. ಬಿಜೆಪಿ ನೇತೃತ್ವದ ಕೇಂದ್ರ ಎನ್‌ಡಿಎ ಸರ್ಕಾರ ಪದೇ ಪದೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಬದುಕಿನ ಮೇಲೆ ಗದಾಪ್ರಹಾರ ನಡೆಸುತ್ತಿದೆ. ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಬಡ ಮತ್ತು ದಿನಗೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಜನಸಾಮಾನ್ಯರು ಹಾಗೂ ಮಧ್ಯಮವರ್ಗದ ಕುಟುಂಬಗಳ ಮೇಲೆ ಇದರಿಂದ ಭಾರೀ ಹೊರೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರಾಷ್ಟ್ರಪತಿಯವರು ಮಧ್ಯಪ್ರವೇಶ ಮಾಡಿ ಬೆಲೆ ಏರಿಕೆಯ ನಿರ್ಧಾರವನ್ನು ಹಿಂಪಡೆಯಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಇಲ್ಲವೇ ಜನವಿರೋಧಿ ಕೇಂದ್ರ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ನೀಡಿರುವ ಮನವಿಯಲ್ಲಿ ಆಗ್ರಹಿಸಿದರು.ಮಂಡ್ಯದಲ್ಲಿ ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರು, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದರು. ಉಡುಪಿಯಲ್ಲಿ ಬ್ರಹ್ಮಗಿರಿ ವೃತ್ತದ ಬಳಿ ಮಹಿಳಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಸ್ತೆ ಮಧ್ಯೆ ಕಟ್ಟಿಗೆ ಒಲೆ ಮೇಲೆ ಟೀ ತಯಾರಿಸಿ, ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿದರು.
ಬೆಳಗಾವಿಯಲ್ಲಿ ನಗರದ ಕಾಂಗ್ರೆಸ್ ಭವನದ ಎದುರು ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಕಾರ್ಯಕರ್ತರು ತಲೆ ಮೇಲೆ ಖಾಲಿ ಸಿಲಿಂಡರ್ ಹೊತ್ತು ಪ್ರತಿಭಟನೆ ನಡೆಸಿದರು. ಕೂಡಲೇ ಗ್ಯಾಸ್ ದರ ಇಳಿಸುವಂತೆ ಆಗ್ರಹಿಸಿದರು.