ಉಗ್ರಗಾಮಿ ಕೃತ್ಯಕ್ಕೆ ಕಾಂಗ್ರೆಸ್‌ ಬೆಂಬಲ: ಮಾಜಿ ಸಂಸದ ಆರೋಪ

| Published : Nov 12 2025, 01:00 AM IST

ಉಗ್ರಗಾಮಿ ಕೃತ್ಯಕ್ಕೆ ಕಾಂಗ್ರೆಸ್‌ ಬೆಂಬಲ: ಮಾಜಿ ಸಂಸದ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರಿನಲ್ಲಿ ಬಾಂಬ್ ಸ್ಫೋಟ ನಡೆದಾಗ ಅವರನ್ನು ಬ್ರದರ್ ಎಂದು ಕರೆಯುತ್ತಾರೆ. ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜಯಕಾರ ಹಾಕಿದರೆ ಅವರನ್ನು ರಕ್ಷಣೆ ಮಾಡುತ್ತಾರೆ. ದೇಶವಿರೋಧಿ ಚಟುವಟಿಕೆಗೆ ಬೆಂಬಲ ನೀಡುವವರನ್ನು ಗಲ್ಲಿಗೇರಿಸುವಂತಹ ಕಠಿಣ ಕ್ರಮ ಕೈಗೊಳ್ಳಬೇಕು ಆಗ ಮಾತ್ರ ಇತರರು ಪಾಠ ಕಲಿಯುತ್ತಾರೆ.

ಕನ್ನಡಪ್ರಭ ವಾರ್ತೆ ಕೋಲಾರ

ಕೆಂಪುಕೋಟೆ ವ್ಯಾಪ್ತಿಯಲ್ಲಿ ನಡೆದ ಬಾಂಬ್ ಸ್ಫೋಟದಂತಹ ಉಗ್ರಗಾಮಿ ಕೃತ್ಯಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ತಾಲೂಕಿನ ಕುಂಬಾರಹಳ್ಳಿಯಲ್ಲಿ ಸಂಸದ ಎಂ.ಮಲ್ಲೇಶ್ ಬಾಬುರ ತಾಯಿ ಮಂಗಮ್ಮ ಮುನಿಸ್ವಾಮಿ ಅವರ ೭೫ನೇ ಜನ್ಮದಿನೋತ್ಸವ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ದೇಶವಿರೋಧಿಗಳನ್ನು ಗಲ್ಲಿಗೇರಿಸಿ:

ಮಂಗಳೂರಿನಲ್ಲಿ ಬಾಂಬ್ ಸ್ಫೋಟ ನಡೆದಾಗ ಅವರನ್ನು ಬ್ರದರ್ ಎಂದು ಕರೆಯುತ್ತಾರೆ. ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜಯಕಾರ ಹಾಕಿದರೆ ಅವರನ್ನು ರಕ್ಷಣೆ ಮಾಡುತ್ತಾರೆ. ದೇಶವಿರೋಧಿ ಚಟುವಟಿಕೆಗೆ ಬೆಂಬಲ ನೀಡುವವರನ್ನು ಗಲ್ಲಿಗೇರಿಸುವಂತಹ ಕಠಿಣ ಕ್ರಮ ಕೈಗೊಳ್ಳಬೇಕು ಆಗ ಮಾತ್ರ ಇತರರು ಪಾಠ ಕಲಿಯುತ್ತಾರೆ ಎಂದರು.

ಆರ್‌ಎಸ್‌ಎಸ್ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಮುನಿಸ್ವಾಮಿ, ಪ್ರಿಯಾಂಕ್ ಎಂಬುದು ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಇಡುವ ಹೆಸರು. ಸೋನಿಯಾ ಮತ್ತು ರಾಹುಲ್ ಗಾಂಧಿಗಳನ್ನು ಮೆಚ್ಚಿಸುವುದಕ್ಕೆ ಇಂತಹ ದೇಶ ವಿರೋದಿ ಹೇಳಿಕೆಗಳನ್ನು ನೀಡಬಾರದು, ನೀವು ಯಾವುದೇ ಪಕ್ಷದಲ್ಲಿದ್ದರೂ ದೇಶದ ಹಿತದೃಷ್ಟಿ ಇರಬೇಕು. ಇಲ್ಲದಿದ್ದರೆ ತಂದೆಯಂತೆ ರಾಜ್ಯಸಭೆಗೆ ಹಿಂಬದಿ ಬಾಗಿಲಿನಿಂದ ಸೇರುವ ಪರಿಸ್ಥಿತಿ ನಿಮಗೂ ಎದುರಾಗಬಹುದು ಎಂದು ಟೀಕಿಸಿದರು.

ದೇಶ ವಿರೋಧಿಗಳನ್ನು ನಿಗ್ರಹಿಸಿ:

ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ಕೆಂಪುಕೋಟೆ ಸ್ಫೋಟ ಪ್ರಕರಣದಲ್ಲಿ ಈಗಾಗಲೆ ಕೇಂದ್ರ ಗೃಹ ಸಚಿವರು ಉನ್ನತ ಮಟ್ಟದ ಸಭೆ ನಡೆಸಿ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೆ, ಯಾವುದೇ ಧರ್ಮ ಅಥವಾ ಜಾತಿಯವರಾದರೂ ದೇಶಭಕ್ತರಾಗಿದ್ದರೆ ಅವರನ್ನು ಮೆಚ್ಚಲೇಬೇಕು. ಆದರೆ ದೇಶವಿರೋಧಿ ತತ್ವ ಅನುಸರಿಸುವವರನ್ನು ಕಟ್ಟುನಿಟ್ಟಾಗಿ ನಿಗ್ರಹಿಸಬೇಕು ಎಂದು ಹೇಳಿದರು.

ಕಳೆದ ೧೨ ವರ್ಷಗಳಲ್ಲಿ ಇಂತಹ ಘಟನೆಗಳು ಸಂಭವಿಸಿರಲಿಲ್ಲ. ಆದರೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಪ್ರತಿ ವಾರ ಉಗ್ರಗಾಮಿ ಕೃತ್ಯಗಳು ನಡೆಯುತ್ತಿದ್ದವು. ಈಗ ಇಂತಹ ಘಟನೆಗಳನ್ನು ಬಹು ಮಟ್ಟಿಗೆ ನಿಯಂತ್ರಣಕ್ಕೆ ತಂದು ದೇಶದ ಭದ್ರತೆ ಕಾಪಾಡಲಾಗಿದೆ ಎಂದರು.