ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಕಳೆದ ಬಾರಿ ಮತ ಎಣಿಕೆ ಅಧಿಕಾರಿಗಳು ಸಂಪೂರ್ಣ ನ್ಯಾಯಸಮ್ಮತವಾಗಿ ನಡೆಸಿದ್ದರು, ಈಗಲೂ ಅಧಿಕಾರಿಗಳು ಕಾನೂನು ಪ್ರಕಾರ ಏನು ಮಾಡಬೇಕಿತ್ತೋ ಅದನ್ನೇ ಮಾಡಿದ್ದಾರೆ ಎಂದು ಮಾಲೂರು ಶಾಸಕ ಕೆ.ವೈ.ನಂಜೆಗೌಡ ಹೇಳಿದರು.ನಗರದ ಹೊರವಲಯದ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಮರು ಮತ ಎಣಿಕೆ ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮರು ಮತ ಎಣಿಕೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು, ಆ ಆದೇಶದಂತೆ ಪ್ರಕ್ರಿಯೆ ಪೂರ್ಣಗೊಂಡಿದೆ, ಫಲಿತಾಂಶ ಎಲ್ಲರಿಗೂ ಗೊತ್ತಿದ್ದರೂ, ಅದನ್ನು ಅಧಿಕಾರಿಗಳು ಅಧಿಕೃತವಾಗಿ ಘೋಷಿಸುವುದು ಕಾನೂನು ಪ್ರಕ್ರಿಯೆಯ ಭಾಗ, ಸುಪ್ರೀಂ ಕೋರ್ಟ್ ನೀಡುವ ಯಾವುದೇ ಸೂಚನೆಗೆ ನಾವು ಬದ್ದರಾಗಿದ್ದೇವೆ ಎಂದು ಹೇಳಿದರು.
ಮರು ಮತ ಎಣಿಕೆ;ಸುಪ್ರೀಂ ಕೋರ್ಟ್ ಆದೇಶದ ನಂತರ ಮರು ಮತ ಎಣಿಕೆ ನಡೆಯಿತು, ಅಂಬೇಡ್ಕರ್ ರಚಿಸಿದ ಸಂವಿಧಾನ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ, ಆ ಸಮಯದಲ್ಲಿ ನಮ್ಮ ಸರ್ಕಾರ ಇರಲಿಲ್ಲ, ಆದರೂ ಅಧಿಕಾರಿಗಳು ಕಾನೂನು ಪ್ರಕಾರ ಮತಎಣಿಕೆ ನಡೆಸಿದ್ದರು. ಈಗಲೂ ಅದೇ ರೀತಿಯ ನ್ಯಾಯಸಮ್ಮತ ವಿಧಾನ ಅನುಸರಿಸಲಾಗಿದೆ. ಆದ್ದರಿಂದ ಅಕ್ರಮ ಅಥವಾ ಲೋಪಗಳ ಆರೋಪಗಳು ಅನಾವಶ್ಯಕ ಎಂದು ಸ್ಪಷ್ಟಪಡಿಸಿದರು.
ಯಾರನ್ನೂ ಟೀಕಿಸುವುದಿಲ್ಲ:ಕಳೆದ ಎರಡೂವರೆ ವರ್ಷದಿಂದ ಪ್ರತೀ ಮಾತು, ಪ್ರತಿ ಸಭೆಯಲ್ಲಿ ಇದೇ ವಿಷಯ ಚರ್ಚಿಸುತ್ತಿದ್ದರು, ಆದರೆ ಇಂದು ಅದಕ್ಕೆ ತೆರೆ ಬಿದ್ದಿದೆ. ಮಾಜಿ ಶಾಸಕ ಮಂಜುನಾಥ್ ಗೌಡ ಅವರು ಮುಂದೆ ನನ್ನ ಬಗ್ಗೆ ಏನು ಹೇಳಿದರೂ ಪ್ರತಿಕ್ರಿಯೆ ನೀಡುವುದಿಲ್ಲ, ಇಂದಿನಿಂದ ಯಾರ ಮೇಲೂ ಟೀಕೆ ಮಾಡುವುದಿಲ್ಲ, ಕೌಂಟರ್ ನೀಡುವುದಿಲ್ಲ, ಆದರೆ ನಮಗೆ ಆಗಿರುವ ನೋವು ಅವರಿಗೆ ಶಾಪವಾಗುತ್ತದೆ, ನನಗೆ ಕ್ಷೇತ್ರದ ಅಭಿವೃದ್ದಿ ಮಾತ್ರ ನನ್ನ ಗುರಿ ಎಂದರು.
ಹೊಸ ನಂಜೇಗೌಡನಾಗಿ ಸೇವೆ:ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಯಾರ ಮೇಲೂ ದ್ವೇಷ ರಾಜಕಾರಣ ಮಾಡಬಾರದು. ಹೊಸಕೋಟೆಯವರೊಂದಿಗೆ ಇರುವವರೂ ನಮ್ಮವರೇ. ಎಲ್ಲರೂ ಸಹಕರಿಸಿ ಒಂದಾಗಿ ಕೆಲಸ ಮಾಡಬೇಕು. ಇಂದಿನಿಂದ ನಾನು ಹೊಸ ನಂಜೇಗೌಡನಾಗಿ ಜನರ ಸೇವೆಗೆ ಸಜ್ಜಾಗುತ್ತಿದ್ದೇನೆ ಎಲ್ಲರೂ ಸಮಾಧಾನದಿಂದ ಇರಬೇಕು ಎಂದರು.
ಮರು ಮತ ಎಣಿಕೆ ನಾನು ಎಂದೂ ವಿರೋಧಿಸಿಲ್ಲ. ಇಂದು ನಡೆದಿರುವ ಈ ಪ್ರಕ್ರಿಯೆ ದೇಶದ ಎಲ್ಲೆಡೆ ನಡೆಯುವ ಮತ ಎಣಿಕೆಗಳಿಗೆ ಮಾದರಿಯಾಗುತ್ತದೆ ಎಂದರು.;Resize=(128,128))
;Resize=(128,128))
;Resize=(128,128))