ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಬಾಗಲಕೋಟ, ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರು ಸೋಮವಾರ ಸಂಜೆ ಜಮಾಯಿಸಿ ಬ್ಲಾಕ್ ಕಾಂಗ್ರೆಸ್ ದಿಂದ ಸಿಹಿ ಹಂಚಿ, ಪಟಾಕ್ಷಿ ಸಿಡಿಸಿ ಸಂಭ್ರಮಾಚರಿಸಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಕೆಪಿಸಿಸಿ ರಾಜ್ಯ ಸಂಯೋಜಕ ಸಂಗಮೇಶ ಓಲೇಕಾರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ನೀಡುತ್ತಿರುವ ಜನಪರ ಆಡಳಿತ ಹಾಗೂ ಪಂಚಗ್ಯಾರಂಟಿ ಯೋಜನೆಗಳಿಂದ ಎರಡು ವಿಧಾನಸಭೆ ಮತಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಬಾಗಲಕೋಟ ಕ್ಷೇತ್ರದಲ್ಲಿ ಸಚಿವರಾದ ಶಿವಾನಂದ ಪಾಟೀಲ, ಸತೀಶ ಜಾರಕಿಹೊಳಿ, ಆರ್.ಬಿ.ತಿಮ್ಮಾಪುರ, ಯುವ ಧುರೀಣೆ ಸಂಯುಕ್ತಾ ಪಾಟೀಲ ಸೇರಿದಂತೆ ಅನೇಕ ಸಚಿವರು ಅಭ್ಯರ್ಥಿ ಗೆಲುವಿಗೆ ಸಾಕಷ್ಟು ಶ್ರಮಿಸಿದ್ದಾರೆ.

ಮುಖಂಡರು ಬಾಗಲಕೋಟ ಕ್ಷೇತ್ರದಲ್ಲಿ ಕಡಿಮೆ ಮತಗಳ ಅಂತರದಿಂದ ಆಯ್ಕೆಯಾಗುವ ವಿಶ್ವಾಸವಿತ್ತು. ಆದರೆ, ಮತದಾರ ಹೆಚ್ಚು ಮತಗಳನ್ನು ನೀಡುವ ಮೂಲಕ ಹೆಚ್ಚು ಅಂತರದಿಂದ ಉಮೇಶ ಮೇಟಿ ಅವರನ್ನು ಆಯ್ಕೆ ಮಾಡಿದ್ದು ತುಂಬಾ ಸಂತಸ ತಂದಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸಮರ್ಥ ಶಾಮನೂರ ಅವರು ಸಹ ಆಯ್ಕೆಯಾಗಿರುವುದು ಪಕ್ಷದ ಗರಿಮೆ ಹೆಚ್ಚಾಗಿದೆ. ಮುಂಬರುವ ದಿನಗಳಲ್ಲಿ ಪಕ್ಷವು ಉತ್ತಮ ಆಡಳಿತ ನೀಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಸದಾ ಶ್ರಮಿಸಲಿದೆ ಎಂದರು.

ಮಹಿಳಾ ಬ್ಲಾಕ್ ಅಧ್ಯಕ್ಷೆ ರುಕ್ಮಿಣಿ ರಾಠೋಡ ಮಾತನಾಡಿ, ಉಪಚುನಾವಣೆಯಲ್ಲಿ ಎರಡು ಸ್ಥಾನಗಳು ಕಾಂಗ್ರೆಸ್ ಗೆಲುವು ಸಾಧಿಸಿರುವುದು ಸಂತಸ ತಂದಿದೆ. ಮತದಾರರು ಜನಪರ ಆಡಳಿತಕ್ಕೆ ಮನ್ನಣೆ ನೀಡಿದ್ದಾರೆ ಎಂದರು.


ನಗರ ಘಟಕದ ಅಧ್ಯಕ್ಷ ಸುರೇಶಗೌಡ ಪಾಟೀಲ, ಗ್ಯಾರಂಟಿ ಯೋಜನೆಯ ತಾಲೂಕು ಸಮಿತಿ ಅಧ್ಯಕ್ಷ ಮಹಿಬೂಬ ನಾಯ್ಕೋಡಿ ಮಾತನಾಡಿದರು.

ಮುಖಂಡರಾದ ಬಸವರಾಜ ಹಾರಿವಾಳ, ಜಟ್ಟಿಂಗರಾಯ ಮಾಲಗಾರ, ಶೇಖರ ಗೊಳಸಂಗಿ, ಮಹಿಬೂಬ ನಾಯ್ಕೋಡಿ, ಪರಶುರಾಮ ಜಮಖಂಡಿ, ಬಸವರಾಜ ಚೌರಿ, ಪ್ರವೀಣ ಪೂಜಾರಿ, ಜಗದೇವಿ ಗುಂಡಳ್ಳಿ, ರಮಜಾನ ಹೆಬ್ಬಾಳ, ಈರಣ್ಣ ವಂದಾಲ, ಚಂದ್ರಶೇಖರಗೌಡ ಪಾಟೀಲ, ಸಂಕನಗೌಡ ಪಾಟೀಲ, ಬಸಣ್ಣ ದೇಸಾಯಿ, ರಮೇಶ ಯಳಮೇಲಿ, ಸಂಗನಬಸು ಪೂಜಾರಿ, ಮತಾಬ ಬಮ್ಮನಳ್ಳಿ, ಕಮಲಸಾಬ ಕೊರಬು, ಮುರುಗೇಶ ನಾಯ್ಕೋಡಿ, ಹಣಮಂತ ಅಡಗಿಮನಿ, ಭದ್ರು ಮಣ್ಣೂರ, ಸುಭಾಸ ಗಾಯಕವಾಡ, ಅನಿಲ ಪವಾರ, ದಸ್ತಗೀರ ವಜ್ಜಲ, ಮಹಿಬೂಬ ಬಾಗವಾನ ಸೇರಿದಂತೆ ಅನೇಕರು ಭಾಗವಹಿಸಿದ್ದರು.