ಸಾರಾಂಶ
ಹನಿಟ್ರ್ಯಾಪ್ ಆರೋಪದಲ್ಲಿ ತಮ್ಮನ್ನು ಸಿಕ್ಕಿಸಿ ಹಾಕುವ ಬಹುದೊಡ್ಡ ಸಂಚು ನಡೆಯುತ್ತಿದೆ
ಕನ್ನಡಪ್ರಭ ವಾರ್ತೆ ಕಲಬುರಗಿ
ಹನಿಟ್ರ್ಯಾಪ್ ಆರೋಪದಲ್ಲಿ ತಮ್ಮನ್ನು ಸಿಕ್ಕಿಸಿ ಹಾಕುವ ಬಹುದೊಡ್ಡ ಸಂಚು ನಡೆಯುತ್ತಿದೆ. ಇದರ ಹಿಂದೆ ಪಾಲಿಕೆ ಮಾಜಿ ಸದಸ್ಯ ರಾಜು ಕಪನೂರ್ ಮತ್ತವರ ಗ್ಯಾಂಗ್ ಸಕ್ರೀಯವಾಗಿದೆ, ಇದೆಲ್ಲವೂ ತಮ್ಮ ವಿರುದ್ಧದ ಹೆಣೆಯಲಾಗುತ್ತಿರುವ ಷಢ್ಯಂತ್ರದ ಭಾಗವಾಗಿದ್ದು ಸತ್ಯ ಸಂಗತಿ ಹೊರಬರಲಿದೆ, ಇವೆಲ್ಲ ಆರೋಪಗಳು ತೊಳೆದುಕೊಂಡು ಹೋಗಲಿವೆ ಎಂದು ದಲಿತ ಸೇನೆ ರಾಜ್ಯಾಧ್ಯಕ್ಷ ಹಾಗೂ ವಕೀಲರಾದ ಹಣಮಂತ ಯಳಸಂಗಿ ಹೇಳಿದ್ದಾರೆ.ಕನ್ನಡಪ್ರಭ ಜೊತೆ ಮಾತನಾಡಿದ ಅವರು, ಇತ್ತೀಚೆಗೆ ಕಲಬುರಗಿಯಲ್ಲಿ ನಡೆದಿರುವ ರಿಯಲ್ ಎಸ್ಟೇಟ್ ಉದ್ಯಮಿ ಕರಬಸಪ್ಪ ದೇಶಮುಖ ಇವರ ಮೇಲಿನ ಹಲ್ಲೆ ಆರೋಪದ ಕೇಸ್‌ನ ನಂತರ ಇದೆಲ್ಲವೂ ಹೊರಬರುತ್ತಿದೆ. ಇದರ ಹಿಂದೆ ಸಂಚು ದೊಡ್ಡದಿದೆ. ತುಮಕೂರಿನ ಮಹಿಳೆಯೊಬ್ಬರು ಬಂದು ಸಹಾಯ ಕೇಳಿದಾಗ ತಾವು ಮಧ್ಯಸ್ಥಿಕೆ ವಹಿಸಿದ್ದಾಗಿ ಹೇಳಿದ ಯಳಸಂಗಿ, ಸಾಮಾಜಿಕ ಸೇವೆಯೇ ತಮ್ಮ ಸಂಘಟನೆಯ ಉದ್ದೇಶವಾಗಿರುವಾಗ ಇಂತಹ ಆರೋಪಗಳೆಲ್ಲವೂ ಸಂಚಿನ ಭಾಗವಾಗಿಯೇ ಕೇಳಿ ಬರುತ್ತಿವೆ ಎಂದು ದೂರಿದ್ದಾರೆ.
ಹನಿಟ್ರ್ಯಾಪ್ ಪ್ರಕರಣದಲ್ಲಿ ಸಂಘಟನೆಯ ಹೆಸರಿಗೆ ಮಸಿ ಬಳಿಯಲು ಯತ್ನಿಸಿರುವ ವಿಭಾಗೀಯ ಅಧ್ಯಕ್ಷ ರಾಜು ಲೇಂಗಟಿ ಈತನನ್ನು ತಾವೇ ಕರೆದು ಆರೋಪ ಬಂದಿರುವಾಗ ಬಂಧನಕ್ಕೊಳಗಾಗೆಂದು ಸದರಿ ಪ್ರಕರಣದ ವಿಚಾರಣಾಧಿಕಾರಿಗಳಿಗೆ ಒಪ್ಪಿಸಿದ್ದೇನೆ. ಸಂಘಟನೆಯ ಹೆಸರು ಕೆಡಬಾರದು ಎಂಬುದೇ ನನ್ನ ನಿಲುವು. ಆದರಿಲ್ಲಿ ಕೆಲವರು ನಮ್ಮ ಏಳಿಗೆ ಸಹಿಸಲಾಗದೆ ಇಂತಹ ಹುರುಳಿಲ್ಲದ ಆರೋಪಗಳನ್ನು ಮಾಡುತ್ತ ಗೂಬೆ ಕೂರಿಸುವ ಯತ್ನ ಮಾಡುತ್ತಿದ್ದಾರೆಂದು ದೂರಿದರು.ಕಲಬುರಗಿಯಲ್ಲಿ ಪೊಲೀಸರು ಈ ಪ್ರಕರಣದ ನಿಖೆ ಮಾಡಲಿ, ಈಗ ವಶದಲ್ಲಿರುವ ಇಬ್ಬರು ಆರೋಪಿಗಳು ಸೇರಿದಂತೆ ಮುಂಬೈ ಮೂಲದ ದೂರುದಾರ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿ. ಇವರ ಸಂಪರ್ಕಕ್ಕೆ ಬಂದವರು ಅದೆಷ್ಟು ಜನ ಎಂಬುದು ಗೊತ್ತಾಗುತ್ತದೆ. ಆಗ ಇಲ್ಲಿಯ ಇಂತಹ ದಂಧೆಕೋರರು ಸಕ್ರೀಯವಾಗಿರೋದು ಗೊತ್ತಾದಲ್ಲಿ ಕ್ರಮಕ್ಕೆ ಮುಂದಾಗಲಿ, ವಿಚಾರಣೆಗೆ ತಮ್ಮ ಸಂಪೂರ್ಣ ಸಹಕಾರವಿದೆ ಎಂದರು.
ತಮ್ಮ ಬಂಧನಕ್ಕೆ ಆಗ್ರಹಿಸಿರುವ ಆಂದೋಲಾ ಶ್ರೀಗಳ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಯಳಸಂಗಿ, ಆಂದೋಲಾ ಸಿದ್ದಲಿಂಗ ಸ್ವಾಮಿಗಳು ಹಾಗೂ ತಮ್ಮ ಮಧ್ಯೆ ತಾತ್ವಿಕ ಹಾಗೂ ವೈಚಾರಿಕ ಭಿನ್ನಮತಗಳಿವೆ. ಆದರೆ ನಾವು ಎಂದಿಗೂ ಪರಸ್ಪರ ಆರೋಪ- ಪ್ರತ್ಯಾರೋಪ ಮಾಡುವಾಗ ಚೌಕಟ್ಟು ಬಿಟ್ಟು ಹೋಗಿಲ್ಲ. ನನ್ನ ಮೇಲಿನ ಆರೋಪಗಳು ಕೇಳಿ ಬಂದಾಗ ಸ್ವಾಮಿಗಳು ಟೀಕಿಸೋದು ಸಹಜ, ಈ ಪ್ರಕರಣದಲ್ಲಿ ಸತ್ಯ ಏನೆಂಬುದು ತನಿಖೆಯಿಂದಲೇ ಗೊತ್ತಾಗುತ್ತದೆ ಎಂದರು.ದಲಿತ ಸೇನೆ ಸಮಾಜ ಸೇವೆಯನ್ನೇ ನಂಬಿಕೊಂಡು ಹೊರಟ ಸಂಘಟನೆ, ಸಮಾಜದಲ್ಲಿ ಜನರ ಸಹಕಾರ, ಬೆಂಬಲದಿಂದ ಅನೇಕ ಸಮಾಜ ಸೇವೆ ಮಾಡುತ್ತಿದ್ದೇವೆ. ಈ ಕ್ಷೇತ್ರದಲ್ಲಿನ ಏಳಿಗೆ ಅನೇಕರಿಗೆ ಹೊಟ್ಟೆಉರಿ ಮೂಡಿಸಿದೆ. ಹೀಗಾಗಿ ಸಂಘಟನೆ ಹೆಸರು ಕೆಡಿಸಲು, ತಮ್ಮ ವಿರುದ್ಧ ಆರೋಪ ಮಾಡಲು ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆಂದು ಯಳಸಂಗಿ ಅಸಮಾದಾನ ಹೊರಹಾಕಿದ್ದಾರೆ.