ಯಲ್ಲಾಪುರ: ಟಿಎಂಎಸ್ ಆಡಳಿತ ಅಧಿಕಾರಿಯ ವಿರುದ್ಧ ಟಿಎಂಎಸ್ ಉಳಿಸಿ ಹೋರಾಟ ಸಮಿತಿ ಸಂಸ್ಥೆಯ ಮಾಜಿ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಪ್ರಾರಂಭಿಸಲಾಗಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಸಂಜೆ ಸ್ವರ್ಣವಲ್ಲೀ ಶ್ರೀಗಳು ಸೂಚನೆ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮನವಿ ಮೇರೆಗೆ ಅಂತ್ಯಗೊಳಿಸಲಾಯಿತು.
ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿರಿಸಿದೆ. ಮೊದಲನೇ ದಿವಸ ಟಿಎಂಎಸ್ ಎದುರು ಧರಣಿ ನಡೆಸಲಾಗಿತ್ತು. ಎರಡನೇ ದಿನ ಬಸ್ ನಿಲ್ದಾಣದ ಬಳಿ ರಾಸ್ತಾ ರೋಕೊ ನಡೆಸಿದರು. ಶುಕ್ರವಾರ ಟಿಎಂಎಸ್ ಎದುರು ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದು, ಬೇಡಿಕೆ ಈಡೇರಿಸುವಂತೆ ಪಟ್ಟು ಹಿಡಿದು ಕುಳಿತಿದ್ದಾರೆ.ಈ ವೇಳೆ ಮಾಧ್ಯಮದವರ ಜತೆ ಎನ್.ಕೆ ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಟಿಎಂಎಸ್ ಉಳಿವಿಗಾಗಿ ಕಠಿಣ ನಿಲುವು ತಳೆಯಲಾಗಿದ್ದು, ಉಪವಾಸ ಸತ್ಯಾಗ್ರಹ ಕೈಗೊಂಡಿದ್ದೇವೆ. ಕಳೆದ ಎರಡು ಅವಧಿಯ ಆಡಳಿತದಲ್ಲಿ ನಿವೃತ್ತ ಮುಖ್ಯಕಾರ್ಯನಿರ್ವಾಹಕ ಸಿ.ಎಸ್. ಹೆಗಡೆ ಹಾಗೂ ಶಾಸಕ ಶಿವರಾಮ ಹೆಬ್ಬಾರ ಸೇರಿ ಹಲವು ರೀತಿಯಲ್ಲಿ ತೊಂದರೆ ನೀಡುತ್ತಿದ್ದಾರೆ. ಈ ಮಾತನ್ನು ಅವರ ಎದುರಿನಲ್ಲಿಯೂ ಹೇಳುವುದಕ್ಕೆ ಬದ್ಧನಿದ್ದೇನೆ. ಇದು ಸತ್ಯ ಎಂಬುದನ್ನು ಸಾಬೀತುಪಡಿಸಲು ಗಣಪತಿ ದೇವಸ್ಥಾನದಲ್ಲಿ ಪ್ರಮಾಣ ಮಾಡಲೂ ಸಿದ್ಧ ಎಂದು ಸವಾಲು ಹಾಕಿದರು.
ನಾವು ಸಂಸ್ಥೆ ಉಳಿವಿಗೆ ಹೋರಾಟ ಮಾಡುತ್ತಿದ್ದೇವೆ. ರೈತರ ಕೈಯ್ಯಲ್ಲಿ ಸಂಸ್ಥೆಯ ಅಧಿಕಾರ ಇರಬೇಕು, ರೈತರು ಸ್ವಾವಲಂಬಿ ಆಗಬೇಕು ಎಂಬುದು ನನ್ನ ಉದ್ದೇಶ ಎಂದರು.ಆಡಳಿತಾಧಿಕಾರಿ ವಜಾ ಆಗಬೇಕು. ಸದಸ್ಯರ ಹಕ್ಕು ಕಸಿದುಕೊಳ್ಳುವ ಠರಾವು ವಾಪಸ್ ಪಡೆಯಬೇಕು. ಇದಕ್ಕೆ ಸರ್ಕಾರ ಸ್ಪಂದಿಸಬೇಕು. ಆಕಸ್ಮಿಕ ನನ್ನ ಜೀವಕ್ಕೆ ಏನಾದರೂ ಹೆಚ್ಚು ಕಡಿಮೆಯಾದಲ್ಲಿ ಈ ವ್ಯವಸ್ಥೆಯೇ ಅದರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ದೆಹಲಿಯಿಂದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ದೂರವಾಣಿಯ ಮೂಲಕ ಮಾತನಾಡಿ, ಸಹಕಾರಿ ಸಂಸ್ಥೆಯ ಉಳಿವಿಗಾಗಿ ಉಪವಾಸ ನಡೆಸುವ ಹಂತಕ್ಕೆ ಬಂದಿರುವುದು ದುರದೃಷ್ಟಕರ. ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಸರಿಯಲ್ಲ. ರೈತಪರ ಧ್ವನಿಯಾಗಿ ನಡೆಯುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ಇದೆ. ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುತ್ತೇನೆ ಎಂದರು.
೩.೩೦ರ ಹೊತ್ತಿಗೆ ತಾಲೂಕು ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ ಆಗಮಿಸಿ, ಎನ್.ಕೆ. ಭಟ್ಟ ಅವರ ಆರೋಗ್ಯ ತಪಾಸಣೆ ಮಾಡಿದರು. ಸತ್ಯಾಗ್ರಹದ ಸ್ಥಳದಲ್ಲಿ ವೈದ್ಯರು, ಆ್ಯಂಬುಲೆನ್ಸ್, ಪೊಲೀಸ್ ಸಿಬ್ಬಂದಿ ವ್ಯವಸ್ಥೆ ಮಾಡಲಾಗಿದೆ.
ಅಡಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ರವಿ ಹೆಗಡೆ ನೇತೃತ್ವದಲ್ಲಿ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು. ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ಪ್ರಮುಖರಾದ ಡಿ. ಶಂಕರ ಭಟ್ಟ, ರಾಘವೇಂದ್ರ ಭಟ್ಟ, ಗಣಪತಿ ಮಾನಿಗದ್ದೆ, ಅಪ್ಪು ಅಚಾರಿ, ವೆಂಕಟ್ರಮಣ ಬೆಳ್ಳಿ, ಪ್ರಸಾದ ಹೆಗಡೆ, ವಿ.ಎಂ. ಹೆಗಡೆ, ಭಾಸ್ಕರ ಅಡಿಕೆಪಾಲ, ಶ್ರೀರಾಮ ಲಾಲಗುಳಿ, ಕೆ.ಟಿ. ಹೆಗಡೆ, ವಿ.ಟಿ. ಹೆಗಡೆ ಮತ್ತಿತರರು ಇದ್ದರು.ಸಂಸದ ಕಾಗೇರಿ ಭೇಟಿ, ಉಪವಾಸ ಅಂತ್ಯ: ಟಿಎಂಎಸ್ ಆಡಳಿತಾಧಿಕಾರಿ ವಿರುದ್ಧ ಟಿಎಂಎಸ್ ಹೋರಾಟ ಸಮಿತಿಯಿಂದ ಎನ್.ಕೆ. ಭಟ್ಟ ನೇತೃತ್ವದಲ್ಲಿ ನಡೆಯುತ್ತಿದ್ದ ಉಪವಾಸವನ್ನು ಶುಕ್ರವಾರ ರಾತ್ರಿ ಕೊನೆಗೊಳಿಸಲಾಯಿತು.ಹೋರಾಟ ಬೇಕಾದರೆ ಮುಂದುವರಿಸಿ, ಆದರೆ ಉಪವಾಸ ಕೊನೆಗೊಳಿಸಿ ಎಂಬ ಸ್ವರ್ಣವಲ್ಲೀ ಶ್ರೀಗಳ ಸೂಚನೆ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮನವಿಯನ್ನು ಒಪ್ಪಿ ಉಪವಾಸ ಕೊನೆಗೊಳಿಸಲು ಎನ್.ಕೆ ಭಟ್ಟ ಒಪ್ಪಿಗೆ ಸೂಚಿಸಿದರು.ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ರಾಜಕೀಯದ ಅನಗತ್ಯ ಹಸ್ತಕ್ಷೇಪದಿಂದ ಈ ಸ್ಥಿತಿ ಬಂದಿದೆ. ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಶಾಸಕರು, ಸಹಕಾರಿ ಕ್ಷೇತ್ರದ ಪಾವಿತ್ರ್ಯತೆ ಉಳಿಸುವ ಹೊಣೆಯನ್ನು ಹೊಂದಿದ್ದಾರೆ. ಆದರೆ ತಮ್ಮದೇ ಊರಿನ ಸಂಸ್ಥೆಯ ಆಡಳಿತಕ್ಕೆ ಅವರೇ ಅಡೆತಡೆ ತರುವುದು ಸರಿಯಲ್ಲ ಎಂದರು.
ಈ ವಿಷಯದಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿದೆ. ಅವರವರ ಅಭಿಪ್ರಾಯ ಹೇಳಿದರು, ಆದರೆ ಸಮಸ್ಯೆ ಪರಿಹರಿಸುವ ಲಕ್ಷಣ ಇಲ್ಲ. ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ಆಡಳಿತ ಯಂತ್ರ ಕುಸಿಯಲು ಇದು ಕಾರಣವಾಗಿದೆ. ಹೋರಾಟದ ಮೂಲಕ ನ್ಯಾಯ ದೊರಕಿಸಿಕೊಳ್ಳಬೇಕಾದ ಸಂದರ್ಭ ಎದುರಾಗಿದೆ ಎಂದರು.ಸಂಸ್ಥೆಯ ಆಡಳಿತ ತಮ್ಮ ಹಿಡಿತದಲ್ಲಿರಬೇಕೆಂಬ ರಾಜಕೀಯ ಹಿತಾಸಕ್ತಿಯಿಂದ ರೈತರಿಗೆ ತೊಂದರೆಯಾಗುತ್ತಿದೆ. ಯಲ್ಲಾಪುರಕ್ಕೆ ಇಂತಹ ಸ್ಥಿತಿ ಬಂದಿರುವುದು ವಿಪರ್ಯಾಸ ಎಂದ ಅವರು, ರೈತರು ಧೃತಿಗೆಡುವ ಅಗತ್ಯವಿಲ್ಲ. ನಾರಾಯಣ ಭಟ್ಟ ಅವರ ಬದ್ಧತೆ ಸಹಕಾರಿ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ. ರಾಜಕೀಯ, ಆಡಳಿತಾತ್ಮಕ ಹೋರಾಟದಲ್ಲಿ ಎಲ್ಲ ರೀತಿಯ ಬೆಂಬಲ ನೀಡುತ್ತೇನೆ ಎಂದು ಭರವಸೆ ನೀಡಿದರು.ರಾಜಕೀಯದ ಹೆಬ್ಬೆಟ್ಟಾಗಿ ಕಾರ್ಯನಿರ್ವಹಿಸಿದ ಆಡಳಿತಾಧಿಕಾರಿ ನೀತಿ ನಿರ್ಣಯ ಮಾಡಿರುವುದನ್ನು ಒಪ್ಪಲು ಸಾಧ್ಯವಿಲ್ಲ. ನ್ಯಾಯಾಂಗದ ಮೇಲೆ ನಂಬಿಕೆ ಇದೆ. ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣವೂ ನಮ್ಮ ಪರವಾಗಿ ಬರಲಿದೆ, ರೈತರ ಹೋರಾಟಕ್ಕೆ ಜಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಎನ್.ಕೆ ಭಟ್ಟ ಮಾತನಾಡಿ, ಜನರು ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳಲು, ಸಂಸ್ಥೆಯ ಉಳಿವಿಗಾಗಿ ಹೋರಾಟ ಆರಂಭಿಸಿದ್ದೆ. ಗುರುಗಳ ಆದೇಶ, ಸಂಸದರ ಮನವಿ, ರೈತರ ಪ್ರೀತಿಗೆ ಗೌರವ ನೀಡಿ ಉಪವಾಸ ನಿಲ್ಲಿಸಿದ್ದೇನೆ ಎಂದರು.
ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಮೂರು ದಿನಗಳಿಂದ ನಡೆದ ಹೋರಾಟ, ಬೆಳವಣಿಗೆಗಳ ಕುರಿತು ವಿವರಿಸಿದರು. ಉಪವಾಸ ಸತ್ಯಾಗ್ರಹ ಮಾತ್ರ ಮುಗಿದಿದೆ. ಅವ್ಯವಸ್ಥೆ ವಿರುದ್ಧ ಹೋರಾಟ ನಿರಂತರವಾಗಿ ನಡೆಯಲಿದೆ. ಕೆಡಿಸಿಸಿ ಬ್ಯಾಂಕ್‌ನಿಂದ ಅನ್ಯಾಯಕ್ಕೊಳಗಾದ ಸೊಸೈಟಿಗಳ ಪರವಾದ ಪ್ರತಿಭಟನೆ ಶಿರಸಿಯಲ್ಲಿ ನಡೆಸಲಾಗುವುದು ಎಂದರು.