ಉದ್ಯೋಗ ಖಾತ್ರಿಯಲ್ಲಿ 8 ಸಾವಿರ ಎರೆಹುಳು ತೊಟ್ಟಿ ನಿರ್ಮಾಣ: ಅಕ್ಷಯ್ ಶ್ರೀಧರ

| Published : Dec 22 2024, 01:32 AM IST

ಸಾರಾಂಶ

ಹಾವೇರಿ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಎರೆಹುಳು ತೊಟ್ಟಿ ನಿರ್ಮಾಣ ಅಭಿಯಾನಕ್ಕೆ ಜಿಪಂ ಸಿಇಒ ಅಕ್ಷಯ್ ಶ್ರೀಧರ ಚಾಲನೆ ನೀಡಿದರು. ಪ್ರತಿ ತಾಲೂಕಿಗೆ ಮೊದಲನೇ ಹಂತದಲ್ಲಿ 3 ತಿಂಗಳೊಳಗಾಗಿ ಕನಿಷ್ಠ 1000 ಎರೆಹುಳು ತೊಟ್ಟಿ ನಿರ್ಮಾಣದ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.

ಹಾವೇರಿ: ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರೆ ಯಾವೆಲ್ಲ ಪ್ರಯೋಜನ ಪಡೆಯಬಹುದು ಎಂಬುದಕ್ಕೆ ಜಿಲ್ಲೆಯಲ್ಲಿ ಎರೆಹುಳು ತೊಟ್ಟಿ ನಿರ್ಮಾಣ ಅಭಿಯಾನವೇ ಸಾಕ್ಷಿಯಾಗಿದೆ. ರೈತರಿಗೆ ಅನುಕೂಲವಾಗುವ ಮತ್ತು ಕಪ್ಪು ಬಂಗಾರವೆಂದು ಹೇಳುವ ಎರೆಹುಳ ಗೊಬ್ಬರ ತಯಾರಿಸಲು ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 8 ಸಾವಿರ ಎರೆಹುಳು ತೊಟ್ಟಿ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ ಹೇಳಿದರು.

ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ಎಲ್ಲ ಸಹಾಯಕ ನಿರ್ದೇಶಕರು, ತಾಂತ್ರಿಕ ಸಂಯೋಜಕರು ಮತ್ತು ತಾಂತ್ರಿಕ ಸಹಾಯಕರು, ಬಿ.ಎಫ್.ಟಿ. ಮತ್ತು ಗ್ರಾಮ ಕಾಯಕ ಮಿತ್ರರ ಸಭೆಯಲ್ಲಿ ಎರೆಹುಳು ತೊಟ್ಟಿ ನಿರ್ಮಾಣ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿ ತಾಲೂಕಿಗೆ ಮೊದಲನೇ ಹಂತದಲ್ಲಿ 3 ತಿಂಗಳೊಳಗಾಗಿ ಕನಿಷ್ಠ 1000 ಎರೆಹುಳು ತೊಟ್ಟಿ ನಿರ್ಮಾಣದ ಗುರಿ ಹೊಂದಲಾಗಿದೆ. ಮುಂದಿನ ಹಂತದಲ್ಲಿ ಉಳಿದ ರೈತರಿಗೆ ಅನುಕೂಲವಾಗುವಂತೆ ನಿರ್ಮಾಣ ಮಾಡಲಾಗುವುದು. ನರೇಗಾ ಯೋಜನೆಯಡಿ ₹20,000 ವೆಚ್ಚದಲ್ಲಿ ಗ್ರಾಮೀಣ ಭಾಗದ ರೈತರಿಗೆ ವೈಯಕ್ತಿಕ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಶೇ. 90ರಷ್ಟು ರೈತಾಪಿ ಜನರಿದ್ದು, ಎಲ್ಲರೂ ಕೃಷಿ ಅವಲಿಂಬಿತರಾಗಿದ್ದಾರೆ. ಜಿಲ್ಲೆಯಲ್ಲಿ ತೋಟಗಾರಿಕೆ ಪ್ರದೇಶವು 58,000 ಹೆಕ್ಟೇರ್‌ನಷ್ಟಿದ್ದು, ತೋಟಗಾರಿಕೆ ಬೆಳೆಗಳಿಗೆ ಕಡ್ಡಾಯವಾಗಿ ಸಾವಯವ ಗೊಬ್ಬರ ಉಪಯೋಗಿಸುವುದರೊಂದಿಗೆ ಜಿಲ್ಲೆಯನ್ನು ಸಾವಯವ ಕೃಷಿವಲಯವನ್ನಾಗಿಸುವ ಸದುದ್ದೇಶ ಹೊಂದಲಾಗಿರುತ್ತದೆ. ಅಲ್ಲದೇ ಜಿಲ್ಲೆಯಲ್ಲಿ 223 ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಹಳ್ಳಿಗಳ ನೈರ್ಮಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸ್ವಚ್ಛ ಭಾರತ್ ಮಿಷನ್ ಮತ್ತು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಬೂದು ನೀರು ನಿರ್ವಹಣೆ ಮಾಡಲು ಸಾಕಷ್ಟು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ (ಚರಂಡಿ, ಸಮುದಾಯ ಶೌಚಗುಂಡಿ ಮತ್ತು ವೈಯಕ್ತಿಕ ಶೌಚಗುಂಡಿ). ಕಪ್ಪು ನೀರು ನಿರ್ವಹಣೆಗಾಗಿ ತಾಲೂಕಿಗೆ ಒಂದರಂತೆ ಮಲತ್ಯಾಜ್ಯ ನಿರ್ವಹಣೆ ಘಟಕಗಳನ್ನು ಕೈಗೊಳ್ಳಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಪ್ರತಿಯೊಂದಿಗೆ ಗ್ರಾಮ ಪಂಚಾಯಿತಿಗೆ ಘನತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಿರ್ಮಿಸಲಾಗಿದೆ. ಒಣಕಸ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ. ಹಸಿಕಸ ನಿರ್ವಹಣೆಯು ನಿರೀಕ್ಷಿತ ಮಟ್ಟದಲ್ಲಿ ಆಗದೇ ಇರುವುದರಿಂದ ಎರೆಹುಳು ತೊಟ್ಟಿಗಳ ನಿರ್ಮಾಣವು ಹಸಿಕಸ ನಿರ್ವಹಣೆಯಲ್ಲಿ ಸಹಾಯದೊಂದಿಗೆ ಸಾವಯವ ಗೊಬ್ಬರ ತಯಾರಿಕೆಯಲ್ಲಿ ಮಹತ್ತರ ಪಾತ್ರ ವಹಿಸಲಿದೆ. ಆದ್ದರಿಂದ ಎರೆಹುಳು ತೊಟ್ಟಿ ನಿರ್ಮಾಣ ಅಭಿಯಾನವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಎರೆಹುಳು ತೊಟ್ಟಿ ನಿರ್ಮಾಣದೊಂದಿಗೆ ಜಿಲ್ಲೆಯಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಿ, ಉತ್ತಮ ಗುಣಮಟ್ಟದ ಆಹಾರಧಾನ್ಯ ಹಾಗೂ ತೋಟಗಾರಿಕೆ ಬೆಳೆಗಳನ್ನು ಉತ್ಪಾದಿಸುವಲ್ಲಿ ಅನುಕೂಲವಾಗುವ ಸದುದ್ದೇಶದಿಂದ ಈ ಅಭಿಯಾನ ಹೊಂದಿದೆ. ಜಿಲ್ಲೆಯ ಅರ್ಹ ಫಲಾನುಭವಿಗಳು ಈ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು. ಎರೆಹುಳು ತೊಟ್ಟಿ ನಿರ್ಮಾಣಕ್ಕಾಗಿ ಇಂದೇ ನಿಮ್ಮ ಗ್ರಾಮ ಪಂಚಾಯಿತಿ ಸಂರ್ಪಕಿಸಬೇಕು ಎಂದರು.

ಜಿಪಂ ಉಪ ಕಾರ್ಯದರ್ಶಿ ಡಾ. ಎಸ್. ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಎಚ್.ವೈ. ಮಿಶಿ, ಎಲ್ಲ ತಾಲೂಕುಗಳ ಸಹಾಯಕ ನಿರ್ದೇಶಕರು, ತಾಂತ್ರಿಕ ಸಂಯೋಜಕರು ಮತ್ತು ಸಹಾಯಕರು, ಬಿ.ಎಫ್.ಟಿ.ಗಳು, ಗ್ರಾಮ ಕಾಯಕ ಮಿತ್ರರು ಇತರರು ಉಪಸ್ಥಿತರಿದ್ದರು.