ಶ್ರೇಷ್ಠ ರಾಜಕಾರಣಿಗಳ ಸದನ ಭಾಷಣವೂ ಸಾಹಿತ್ಯ : ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್

| Published : Dec 22 2024, 01:32 AM IST / Updated: Dec 22 2024, 09:21 AM IST

ಶ್ರೇಷ್ಠ ರಾಜಕಾರಣಿಗಳ ಸದನ ಭಾಷಣವೂ ಸಾಹಿತ್ಯ : ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೇಷ್ಠ ರಾಜಕಾರಣಿಗಳು ಸದನದಲ್ಲಿ ಮಾಡುವ ಭಾಷಣ ಸಾಹಿತ್ಯ ಯಾಕೆ ಆಗಬಾರದು, ರಾಜಕಾರಣಿಗಳ ಮಾತು ಸಹಿತ ಕೃತಿಗಳನ್ನು ಸಾಹಿತ್ಯ ಎಂದು ಪರಿಗಣಿಸದೇ ಇರುವುದು ದುರಾದೃಷ್ಟಕರ

 ಮಂಡ್ಯ :  ಶ್ರೇಷ್ಠ ರಾಜಕಾರಣಿಗಳು ಸದನದಲ್ಲಿ ಮಾಡುವ ಭಾಷಣ ಸಾಹಿತ್ಯ ಯಾಕೆ ಆಗಬಾರದು, ರಾಜಕಾರಣಿಗಳ ಮಾತು ಸಹಿತ ಕೃತಿಗಳನ್ನು ಸಾಹಿತ್ಯ ಎಂದು ಪರಿಗಣಿಸದೇ ಇರುವುದು ದುರಾದೃಷ್ಟಕರ ಎಂಬ ಜಿಜ್ಞಾಸೆಗೆ ವೇದಿಕೆ ಕಲ್ಪಿಸಿದ್ದು ಪ್ರಧಾನ ವೇದಿಕೆಯಲ್ಲಿ ಶನಿವಾರ ನಡೆದ ‘ಸಾಹಿತ್ಯದಲ್ಲಿ ರಾಜಕೀಯ ಮತ್ತು ರಾಜಕೀಯದಲ್ಲಿ ಸಾಹಿತ್ಯ’ ಗೋಷ್ಠಿ.

ಗೋಷ್ಠಿಯ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಸಾಹಿತಿಗಳು ರಾಜಕಾರಣದ ಬಗ್ಗೆ ಅಸ್ಪೃಶ್ಯತೆಯ ದೃಷ್ಟಿಕೋನ ಇರಿಸಿರುವುದು ದುರ್ದೈವ ಎಂದರು. 

ಸದನದಲ್ಲಿ ಮುತ್ಸದ್ದಿಗಳ ಮಾತುಗಳ ಸಾಹಿತ್ಯ ಆಗಬಹದು ಎಂಬುದಕ್ಕೆ ಮಾಜಿ ಸಭಾಪತಿ ಡಾ.ಬಿ.ಎಲ್.ಶಂಕರ್ ಅವರು ಸದನದಲ್ಲಿ ನೀಡಿದ ರೂಲಿಂಗ್, ಬಳಸಿದ ಭಾಷೆಯನ್ನು ಉದಾಹರಣೆಯಾಗಿ ನೀಡಿದರು. 

ಒಟ್ಟು ಸಾಹಿತ್ಯ ಕ್ಷೇತ್ರಕ್ಕೆ ರಾಜಕಾರಣಿಗಳ ಕೊಡುಗೆ ಸ್ವೀಕರಿಸಬೇಕು ಎಂದ ಅವರು, ಸಾಹಿತ್ಯದ ಮೂಲಕ ರಾಜಕಾರಣವನ್ನು ಬದಲಿಸಬಹುದು ಎಂಬುದನ್ನು ಲಂಕೇಶ್ ತೋರಿಸಿದ್ದರು. ಇಂದು ಪರಿಸ್ಥಿತಿ ಬದಲಾಗಿದೆ. ಸಾಹಿತಿಗಳು ರಾಜಕೀಯ ಮಾಡದೆ ರಾಜಕಾರಣಿಗಳಿಗೆ ಮಾರ್ಗದರ್ಶನ ನೀಡಬೇಕು ಎಂದರು.‘ರಾಜಕಾರಣಿಗಳಿಗಿರಬೇಕಾದ ಸಾಹಿತ್ಯ ಪ್ರಜ್ಞೆ’ ಕುರಿತು ಮಾತನಾಡಿದ ರಾಜಕೀಯ ಚಿಂತಕ, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ರಾಜಕೀಯ ಮತ್ತು ಸಾಹಿತ್ಯ ಹಾಲು, ಜೇನುಗಳಂತೆ ಬೆಸೆದಿದೆ.  

ಪ್ರಜಾಪ್ರಭುತ್ವ ವ್ಯವಸ್ಥೆ ಬರುವುದಕ್ಕೂ ಮೊದಲೇ ರಾಜಾಶ್ರಯದಲ್ಲಿ ಸಾಹಿತ್ಯ ರಚಿಸಿದ್ದಾರೆ. ಬಸವಣ್ಣ 12ನೇ ಶತಮಾನದಲ್ಲಿ ಸ್ಥಾಪಿಸಿದ ಅನುಭವ ಮಂಟಪ ಪ್ರಥಮ ಸಂಸತ್ತಾಗಿದೆ. ರಾಜಕೀಯ, ಸಾಹಿತ್ಯ ಬಲ್ಲ ಅಂಬೇಡ್ಕರ್ ವಿಶ್ವಜ್ಞಾನಿಯಾದರು ಎಂದು ವಿವರಿಸಿದರು.ಆಶಯ ನುಡಿಯಾಡಿದ ರಾಜಕೀಯ ಚಿಂತಕ ಡಾ.ಬಿ.ಎಲ್.ಶಂಕರ್ ಅವರು, ಡಾ. ರಾಮ ಮನೋಹರ ಲೋಹಿಯಾ, ದೀನದಯಾ‍‍‍‍ಳ್ ಉಪಾಧ್ಯಾಯ, ಅರುಣ್ ಶೌರಿ, ಶಶಿ ತರೂರು, ವೀರಪ್ಪ ಮೊಯ್ಲಿ, ಪಂಡಿತ್ ನೆಹರೂ, ಅಟಲ್ ಬಿಹಾರಿ ವಾಜಪೇಯಿ ಮತ್ತಿತರರನ್ನು ರಾಜಕೀಯ ಮತ್ತು ಸಾಹಿತ್ಯದ ನಂಟಿಗೆ ಉದಾಹರಿಸಿದರು.ಎಲ್ಲಿಯ ವರೆಗೆ ರಾಜಕಾರಣಿಗಳು ಸಾಂಸ್ಕೃತಿಕ ಶ್ರೀಮಂತರಾಗುವುದಿಲ್ಲವೋ ಅಲ್ಲಿಯ ವರೆಗೆ ಅವರು ಸರಿದಾರಿಗೆ ಹೋಗಲು ಅಸಾಧ್ಯ ಎಂದು ವಿಶ್ಲೇಷಿಸಿದರು.

‘ಸಾಹಿತ್ಯ ಕೃತಿಗಳಲ್ಲಿ ಬರುವ ರಾಜಕೀಯ ಚಿತ್ರಣ’ ಕುರಿತು ರಾಜಕೀಯ ವಿಶ್ಲೇಷಕ ರವೀಂದ್ರ ರೇಷ್ಮೆ ಮಾತನಾಡಿ, ಸಿಲಬಸ್ಸಿಗೆ ಮೀರಿದ ವಿ.ವಿ. ರಾಜಕೀಯ. ರಕ್ತಪಾತ ಇಲ್ಲದ ಯುದ್ಧ ರಾಜಕಾರಣ. ರಾಜಕಾರಣದ ಬಗ್ಗೆ ಹಗುರ ಮಾತು ಸ್ವಾತಂತ್ರ್ಯೋತ್ತರ ಭಾರತದ ಜನಸಾಮಾನ್ಯರ ಹವ್ಯಾಸವಾಗಿದೆ. ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಬರವಣಿಗೆ ಮತ್ತು ಬದುಕಿಗೆ ವ್ಯತ್ಯಾಸ ಇರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ ಎಂದು ವಿಶ್ಲೇಷಿಸಿದರು.

ಡಿ.ಎಸ್.ಕೃಷ್ಣಾರೆಡ್ಡಿ ನಿರ್ವಹಿಸಿದರು. ಕೊಂಡಳ್ಳಿ ಪ್ರಭಾಕರ ಶೆಟ್ಟಿ ನಿರೂಪಿಸಿದರು. ಕೆ.ಎಸ್.ಸಿದ್ದಲಿಂಗಪ್ಪ ಸ್ವಾಗತಿಸಿದರು. ನಾಗೇಂದ್ರ ಎನ್.ವಂದಿಸಿದರು.

ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ‘ಸಾಹಿತ್ಯ ಕೇಂದ್ರಿತವಾದ ಸೈದ್ದಾಂತಿಕ -ರಾಜಕೀಯ ನಿಲುವುಗಳು’ ಕುರಿತು ಮಾತನಾಡಬೇಕಿದ್ದ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಮಾಜಿ ಸಚಿವೆ ಉಮಾಶ್ರೀ ಹಾಜರಿದ್ದರು. 

ಸ್ಮರಣ ಸಂಚಿಕೆ ಬಿಡುಗಡೆ: ಬೆಳಗಾವಿಯ ಕಾಂಗ್ರೆಸ್ ಮಹಾಧಿವೇಶನಕ್ಕೆ ಶತಮಾನ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಚಿವ ಎಚ್.ಕೆ.ಪಾಚೀಲ್ ಸಂಪಾದಕತ್ವದಲ್ಲಿ ಹೊರತರಲಾದ‘ಬೆಳಗಾವಿಯ 100 ಮಹಾಧಿವೇಶನ, ಶತಮಾನದ ಸಂಭ್ರಮಕ್ಕೊಂದು ನೆನಪಿನ ಬುತ್ತಿ’ ಸ್ಮರಣ ಸಂಚಿಕೆಯನ್ನು ಸರ್ವಾಧ್ಯಕ್ಷ ಗೊ.ರು.ಚನ್ನಬಸಪ್ಪ ಹಾಗೂ ಗಣ್ಯರು ಲೋಕಾರ್ಪಣೆಗೊಳಿಸಿದರು.

 ಸಮ್ಮೇಳನಕ್ಕೆ ಬಂದ ಪ್ರತಿಯೊಬ್ಬರೂ ಸಮ್ಮೇಳನದ ನೆನಪಿಗೆ ಕನಿಷ್ಠ ಐದಾದರೂ ಪುಸ್ತಕ ಖರೀದಿ ಮಾಡಿ ಲೇಖಕರ ಹಸ್ತಾಕ್ಷರ ಪಡೆದು ಜೋಪಾನವಾಗಿರಿಸಿ. ಕೇವಲ ಸಾಧು ಕೋಕಿಲ ಹಾಡಿಗೆ ನೃತ್ಯ ಮಾಡುವುದು ಮಾತ್ರ ಸಾಹಿತ್ಯ ಆಸಕ್ತಿ ಆಗದಿರಲಿ. ಸಮ್ಮೇಳನದಲ್ಲಿ ಭಾಗವಹಿಸಿದ್ದಕ್ಕೆ ಪುಸ್ತಕಗಳು ಸಾಕ್ಷಿಗಳಾಗಲಿ.

-ಡಾ.ಅನ್ನದಾನಿ, ರಾಜಕೀಯ ಚಿಂತಕ.